ಸೋಮವಾರ, ಅಕ್ಟೋಬರ್ 26, 2020
27 °C

ಕೊರೊನಾ ಜೊತೆ ಬದುಕೋಣ:‘ಡೆಂಗಿ, ಚಿಕುನ್‌ ಗುನ್ಯಾದಷ್ಟೂ ಕೋವಿಡ್ ಕಾಡುವುದಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೊರೊನಾ ಸೋಂಕು ತಗುಲಿದರೆ ಭಯಪಡುವ, ಜೀವಕ್ಕೆ ಅಪಾಯ ಎದುರಾಯಿತು ಎಂದು ಭಾವಿಸುವ ಅಗತ್ಯವಿಲ್ಲ. ರೋಗನಿರೋಧಕ ಶಕ್ತಿ ಹೊಂದಿರುವ, ಉತ್ತಮ ಜೀವನ ಶೈಲಿ ರೂಢಿಸಿಕೊಂಡಿರುವ ಜನರಿಗೆ ಡೆಂಗಿ, ಮಲೇರಿಯಾ, ಚಿಕುನ್‌ ಗುನ್ಯಾ ರೋಗಗಳು ಕಾಡಿದಷ್ಟೂ ಕೊರೊನಾ ಸೋಂಕಿನಿಂದ ಸಮಸ್ಯೆಯಾಗುವುದಿಲ್ಲ’ ಎನ್ನುತ್ತಾರೆ ಯಲಹಂಕ ಸಂಚಾರ ಉಪ ವಿಭಾಗದ ಎಸಿಪಿ ಎಂ.ಎಚ್‌. ಸತೀಶ್‌.

ಆರಂಭದಿಂದಲೂ ಕೋವಿಡ್‌ ನಿಯಂತ್ರಣ ಕರ್ತವ್ಯದಲ್ಲಿದ್ದ ಸತೀಶ್‌ ಅವರಿಗೆ ಜೂನ್‌ 23ರಂದು ಸಭೆಯೊಂದರಲ್ಲಿ ಭಾಗವಹಿಸಿ ಮನೆಗೆ ಮರಳಿದಾಗ ಗಂಟಲು ನೋವು ಕಾಣಿಸಿಕೊಂಡಿತ್ತು. ಪರೀಕ್ಷೆ ಮಾಡಿಸಿದಾಗ ಅವರಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಸಾಂಸ್ಥಿಕ ಪ್ರತ್ಯೇಕವಾಸದಲ್ಲಿದ್ದೇ ಗುಣಮುಖರಾಗಿದ್ದಾರೆ. ಜುಲೈ 23ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಮಾಡಿದ್ದಾರೆ.

‘ಕೊರೊನಾ ಸೋಂಕು ತಗುಲುವ ಬಹುಪಾಲು ಜನರಿಗೆ ಯಾವ ರೋಗ ಲಕ್ಷಣಗಳೂ ಇರುವುದಿಲ್ಲ. ನನಗೆ ಒಂದೆರಡು ದಿನ ಸಣ್ಣ ಜ್ವರ ಮಾತ್ರ ಇತ್ತು. ಸಬ್‌ ಇನ್‌ಸ್ಪೆಕ್ಟರ್‌ ಆಗಿದ್ದ ಅವಧಿಯಲ್ಲಿ ಚಿಕುನ್‌ ಗುನ್ಯಾ ಬಂದಿತ್ತು. ಆಗಿನ ಯಾತನೆಯ ಸಣ್ಣ ಪ್ರಮಾಣವೂ ಈ ಸೋಂಕಿನಲ್ಲಿ ಕಾಣಿಸಲಿಲ್ಲ. ಈ ಸೋಂಕಿನಲ್ಲಿ ಹೆಚ್ಚಿನ ಅಡ್ಡ ಪರಿಣಾಮಗಳೂ ಇಲ್ಲ. ಉಸಿರಾಟದ ತೊಂದರೆ, ಅತಿಯಾದ ಜ್ವರ ಇದ್ದರೆ ಆಸ್ಪತ್ರೆಗೆ ದಾಖಲಾಗುವುದು ಉತ್ತಮ’ ಎಂದರು.

ಕಡಿಮೆ ಪ್ರಮಾಣದ ರೋಗ ನಿರೋಧಕ ಶಕ್ತಿ ಹೊಂದಿರುವವರು ಮತ್ತು ಗಂಭೀರ ಸ್ವರೂಪದ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕು. ಆ ಉದ್ದೇಶಕ್ಕಾಗಿ ಸೋಂಕಿತರು ಕಡ್ಡಾಯವಾಗಿ ಪ್ರತ್ಯೇಕವಾಸದಲ್ಲಿ ಇರಬೇಕು. ವ್ಯಾಯಾಮ, ಉತ್ತಮ ಜೀವನ ಶೈಲಿ ಹೊಂದಿರುವವರು ಈ ರೋಗದಿಂದ ಪಾರಾಗಬಹುದು. ಕ್ರೀಡಾಪಟುಗಳು ಕೊರೊನಾ ಸೋಂಕಿನಿಂದ ಮೃತಪಟ್ಟ ಪ್ರಕರಣಗಳು ವಿರಳ. ಇದನ್ನು ಜನರು ಗಮನಿಸಬೇಕಿದೆ ಎಂದು ಅವರು ಸಲಹೆ ನೀಡುತ್ತಾರೆ.

ಕೊರೊನಾ ಸೋಂಕಿತರನ್ನು ಅಸ್ಪೃಶ್ಯರಂತೆ ನೋಡುವುದನ್ನು ನಿಲ್ಲಿಸಬೇಕು. ಗುಣಮುಖವಾಗಿ ಬಂದವರನ್ನು ತಾತ್ಸಾರ ಮನೋಭಾವದಿಂದ ನೋಡುವುದು, ಅವರನ್ನು ಕಂಡರೆ ಭಯಪಡುವುದು ಸರಿಯಲ್ಲ. ಒಮ್ಮೆ ಗುಣಮುಖರಾದವರಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡರೂ ಭಯಪಡಬೇಕಿಲ್ಲ. ಅದರಿಂದ ಯಾವ ತೊಂದರೆಯೂ ಆಗುವುದಿಲ್ಲ ಎನ್ನುತ್ತಾರೆ ಸತೀಶ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು