ಸಿಗದ ಸಂಬಳ: ಪೌರ ಕಾರ್ಮಿಕ ಆತ್ಮಹತ್ಯೆ

7
ಬಿಬಿಎಂಪಿ ವಿರುದ್ಧ ಕಾರ್ಮಿಕರ ಆಕ್ರೋಶ

ಸಿಗದ ಸಂಬಳ: ಪೌರ ಕಾರ್ಮಿಕ ಆತ್ಮಹತ್ಯೆ

Published:
Updated:

ಬೆಂಗಳೂರು: ಆರು ತಿಂಗಳಿನಿಂದ ಸಂಬಳ ಸಿಗದಿದ್ದರಿಂದ ನೊಂದಿದ್ದರು ಎನ್ನಲಾದ ಪೌರ ಕಾರ್ಮಿಕ ಎಸ್‌. ಸುಬ್ರಮಣಿ ಉರ್ಫ್‌ ಸುಬ್ಬು (40) ಅವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ವೈಯಾಲಿಕಾವಲ್‌ ಬಳಿಯ ಮುನೇಶ್ವರ ಬ್ಲಾಕ್‌ ನಿವಾಸಿಯಾದ ಅವರು ಬಿಬಿಎಂಪಿಯಲ್ಲಿ ‌ಕೆಲಸ ಮಾಡುತ್ತಿದ್ದರು. ಮನೆಯ ಸಮೀಪದಲ್ಲೇ ವಿಷ ಕುಡಿದು ಅಸ್ವಸ್ಥರಾಗಿದ್ದ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ಸ್ಥಳದಲ್ಲೇ ಸುಬ್ರಮಣಿ ಮೃತಪಟ್ಟಿರುವುದಾಗಿ ಹೇಳಿದರು’ ಎಂದು ಪೊಲೀಸರು ತಿಳಿಸಿದರು.

‘ಆರು ತಿಂಗಳಿನಿಂದ ಸಂಬಳ ಕೊಟ್ಟಿರಲಿಲ್ಲ. ಆ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ವಿಚಾರಿಸಿದರೂ ಪ್ರಯೋಜನವಾಗಿರಲಿಲ್ಲ. ಅದರಿಂದ ನೊಂದು ಸುಬ್ರಮಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪತ್ನಿ ಕವಿತಾ, ವೈಯಾಲಿಕಾವಲ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  

ಪೊಲೀಸರು, ‘ಮರಣೋತ್ತರ ಪರೀಕ್ಷೆ ಮುಗಿಸಿ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.ಘಟನೆ ಬಗ್ಗೆ ದೂರು ನೀಡಿರುವ ಮೃತರ ಪತ್ನಿ, ಸಂಬಳ ಸಿಗದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರೋಪಿಸಿದ್ದಾರೆ. ಆದರೆ, ಆತ್ಮಹತ್ಯೆಗೆ ಕಾರಣ ಯಾರು ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಿಲ್ಲ’ ಎಂದರು.

‘ಬಿಬಿಎಂಪಿಯ ವೈಯಾಲಿಕಾವಲ್‌ನ ಗುತ್ತಿಗೆದಾರರ ಅಧೀನದಲ್ಲಿ ಸುಬ್ರಹ್ಮಣ್ಯ ಕೆಲಸ ಮಾಡುತ್ತಿದ್ದರು. ಆ ಗುತ್ತಿಗೆದಾರರನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ಪೊಲೀಸರು ವಿವರಿಸಿದರು.

ಆಸ್ಪತ್ರೆ ಎದುರು ಪ್ರತಿಭಟನೆ: ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸುಬ್ರಮಣಿಯವರ ಸಂಬಂಧಿಕರು ಹಾಗೂ ಸಹೋದ್ಯೋಗಿಗಳು ಕೆ.ಸಿ.ಜನರಲ್‌ ಆಸ್ಪತ್ರೆ ಎದುರು ಸೋಮವಾರ ಬೆಳಿಗ್ಗೆ ಸೇರಿ ಪ್ರತಿಭಟನೆ ನಡೆಸಿದರು.

ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ‘ಸುಬ್ರಮಣಿಯವರ ಸಾವಿಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ಕಾರಣ. ಮತ್ತಷ್ಟು ಪೌರ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೇಯರ್ ಹಾಗೂ ಆಯುಕ್ತರು ಎಚ್ಚೆತ್ತುಕೊಳ್ಳಬೇಕು. ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಮರಣೋತ್ತರ ಪರೀಕ್ಷೆ ಮುಗಿಸಿ, ತ್ವರಿತವಾಗಿ ಶವ ಹಸ್ತಾಂತರಿಸಿ. ಬಿಬಿಎಂಪಿ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ಮಾಡುತ್ತೇವೆ’ ಎಂದು ಪ್ರತಿಭಟನಾಕಾರರು, ವೈದ್ಯರಿಗೆ ಹೇಳಿದರು. ಅದಕ್ಕೆ ವೈದ್ಯರು ಒಪ್ಪದಿದ್ದಾಗ ಮಾತಿನ ಚಕಮಕಿ ನಡೆಯಿತು. ಮಧ್ಯಪ್ರವೇಶಿಸಿದ ಮಲ್ಲೇಶ್ವರ ಠಾಣೆಯ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಪ್ರತಿಭಟನೆ ವೇಳೆಯಲ್ಲೇ ಆಸ್ಪತ್ರೆಗೆ ಬಂದ ಮೇಯರ್‌ ಸಂಪತ್‌ರಾಜ್, ಸುಬ್ರಮಣಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. 

‘ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು. ಮೃತರ ಕುಟುಂಬಕ್ಕೆ ಸ್ಥಳದಲ್ಲೇ ₹10 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು. ಅದಾದ ಬಳಿಕವೇ ಪ್ರತಿಭಟನೆ ಅಂತ್ಯವಾಯಿತು.

‘ಸಾವಿನ‌ ನಿಖರ ಮಾಹಿತಿ ತಿಳಿಯುತ್ತೇನೆ’

‘ಸುಬ್ರಮಣಿ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣಕ್ಕೆ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ಅವರ ಸಾವಿನ‌ ನಿಖರ ಮಾಹಿತಿ ಶೀಘ್ರವೇ ತಿಳಿದುಕೊಳ್ಳಲಿದ್ದೇನೆ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಬಿಬಿಎಂಪಿ ಪೌರಕಾರ್ಮಿಕ ಸುಬ್ರಮಣಿ ಸಾವು ಬೇಸರ ತರಿಸಿದೆ’ ಎಂದಿದ್ದಾರೆ. ‘ನಾನು ಸದಾ ಕಾರ್ಮಿಕರ ಪರ ಇದ್ದೇನೆ. ಸಂಬಳದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ’ ಎಂದಿದ್ದಾರೆ.

ಜನವರಿಯಿಂದ ಪಾವತಿಯಾಗದ ವೇತನ 

‘ಮಲ್ಲೇಶ್ವರದ ಪೌರಕಾರ್ಮಿಕರಿಗೆ ಬಿಬಿಎಂಪಿಯು ಜನವರಿಯಿಂದ ವೇತನ ನೀಡಿಲ್ಲ’ ಎಂದು ಸಫಾಯಿ ಕರ್ಮಚಾರಿ ಪುನರ್‌ವಸತಿ ಸಂಸ್ಥೆಯ ಅಧ್ಯಕ್ಷ ಜೆ.ನರಸಿಂಹಮೂರ್ತಿ ದೂರಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನುದಾನವಿದ್ದರೂ ಸಂಬಳ ನೀಡುತ್ತಿಲ್ಲ. ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಪೌರ ಕಾರ್ಮಿಕರೊಬ್ಬರು ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

‘ಸಂಬಳವನ್ನು ತ್ವರಿತವಾಗಿ ನೀಡಬೇಕು. ಪೌರ ಕಾರ್ಮಿಕರ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲೇ ಶಿಕ್ಷಣ ನೀಡಬೇಕು’ ಎಂದು ಒತ್ತಾಯಿಸಿದರು. 

‘ಅಲೆದರೂ ಸಂಬಳ ಸಿಗಲಿಲ್ಲ’

‘ಪ್ರಜಾವಾಣಿ’ ಜತೆ ಮಾತನಾಡಿದ ಸುಬ್ರಮಣಿ ಅವರ ಪತ್ನಿ ಕವಿತಾ, ‘ಸಂಬಳ ಇಲ್ಲದಿದ್ದರಿಂದ ಜೀವನ ನಡೆಸುವುದು ಕಷ್ಟವಾಗಿತ್ತು. ಇತ್ತೀಚೆಗೆ ಬಿಬಿಎಂಪಿ ಕಚೇರಿಗೆ ಹೋಗಿದ್ದೆ. ಒಂದು ತಿಂಗಳ ಸಂಬಳವನ್ನಾದರೂ ಕೊಡಿ ಎಂದು ಕೇಳಿದ್ದೆ. ಅಲ್ಲಿಯ ಅಧಿಕಾರಿಗಳು ಪತಿಯನ್ನೇ ಕಳುಹಿಸುವಂತೆ ಹೇಳಿದರು. ಪತಿಯು ಕಚೇರಿಗೆ ಅಲೆದರೂ ಸಂಬಳ ಸಿಗಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನನ್ನ ಪತಿಯು 20 ವರ್ಷಗಳಿಂದ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ತಿಂಗಳಿಗೆ ₹5 ಸಾವಿರ ಸಂಬಳ ಬರುತ್ತಿತ್ತು. ಜನವರಿಯಲ್ಲಿ ಕೆಲಸ ಕಾಯಂ ಆದಾಗಿನಿಂದ ತಿಂಗಳಿಗೆ ₹17,700 ಸಂಬಳ ನಿಗದಿಯಾಗಿತ್ತು. ಅದನ್ನು ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದರು’‌ ಎಂದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !