ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹81 ಲಕ್ಷ ಕೋಟಿ ಆರ್ಥಿಕತೆ ಕ್ರಿಯಾ ಯೋಜನೆ ಬಿಡುಗಡೆ: ಬಸವರಾಜ ಬೊಮ್ಮಾಯಿ

Last Updated 7 ಮಾರ್ಚ್ 2023, 20:24 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯವನ್ನು ಒಂದು ಟ್ರಿಲಿಯನ್‌ ಡಾಲರ್‌ (ಸುಮಾರು ₹81 ಲಕ್ಷ ಕೋಟಿ) ಆರ್ಥಿಕತೆಯಾಗಿ ಅಭಿವೃದ್ಧಿಪಡಿಸಲು ರೂಪಿಸಿದ ಕ್ರಿಯಾ ಯೋಜನೆಯು ಆ ಗುರಿ ಸಾಧನೆಯತ್ತ ಸಾಗಲು ನೆರವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಂಗಳವಾರ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ವಿವಿಧ ವರದಿಗಳು, ಪ್ರಕಟಣೆಗಳು, ಒಂದು ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಗುರಿ ಸಾಧನೆಯ ಕ್ರಿಯಾ ಯೋಜನೆ ಕುರಿತ ವರದಿಯನ್ನು ಬಿಡುಗಡೆಗೊಳಿಸಿ ಬೊಮ್ಮಾಯಿ ಅವರು ಮಾತನಾಡಿದರು.

ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಕೌಶಲ್ಯಾಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಉದ್ಯೋಗ ನೀತಿಯನ್ನು ಜಾರಿಗೊಳಿಸಿದೆ. ಇದರೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿಯ ಸಾಂಸ್ಥೀಕರಣದ ಮೂಲಕ ಗುಣಮಟ್ಟದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ದುಡಿಯುವ ವರ್ಗ ಸಮಾಜದ ಪಿರಮಿಡ್‌ನ ತಳಹದಿಯಾಗಿದ್ದಾರೆ. ಅವರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಹಿಳೆಯರು, ಯುವಕರು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸರ್ಕಾರ ಹೆಚ್ಚಿನ ಬೆಂಬಲ ನೀಡುತ್ತಿದೆ. ಇದಲ್ಲದೇ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದು ವಿವರಿಸಿದರು.

ಸಭೆಯಲ್ಲಿ ಮಾತನಾಡಿದ ಟಿ.ವಿ.ಮೋಹನ್‌ದಾಸ್‌ ಪೈ ಅವರು, ರಾಜ್ಯದಲ್ಲಿ ಉದ್ಯೋಗ ಸೃಜನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದು, ರಾಜ್ಯದ ಅಭಿವೃದ್ಧಿ ಮಾದರಿಯು ದೇಶದಲ್ಲೇ ಅತ್ಯುತ್ತಮವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನವಭಾರತಕ್ಕೆ ನವ ಕರ್ನಾಟಕ ನಿರ್ಮಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯಲ್ಲಿ ಎಂಟು ತಜ್ಞರನ್ನು ಆಯ್ಕೆ ಮಾಡಲು ಪೋರ್ಟಲ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲು, ಪೋರ್ಟಲ್‌ ಉದ್ಘಾಟನೆ ಹಾಗೂ ಎಸ್‌ಐಟಿಕೆ ಲಾಂಛನವನ್ನು ಅವರು ಬಿಡುಗಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT