ಮಂಗಳವಾರ, ಮೇ 11, 2021
25 °C
ಡಿ.ಜೆ.ಹಳ್ಳಿ ಸುಹೇಲ್ ಷರೀಫ್ ಕೊಲೆ

ಮಸೀದಿ ಉಸ್ತುವಾರಿ ಕೈತಪ್ಪಿದ್ದಕ್ಕೆ ಹತ್ಯೆ: ಆರೋಪಿಗಳ ಬಂಧನ

ಪ್ರಜಾವಾಣ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇವರಜೀವನಹಳ್ಳಿ (ಡಿ.ಜೆ. ಹಳ್ಳಿ) ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸುಹೇಲ್ ಷರೀಫ್ ಅಲಿಯಾಸ್ ಗಾರ್ಡನ್ ಷರೀಫ್ (36) ಹತ್ಯೆ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರ್‌.ಟಿ. ನಗರ ಮೋದಿ ಗಾರ್ಡನ್‌ನ ಜಮೀರ್ ಖಾನ್ (46), ಇಮ್ರಾನ್ (27), ಫಯಾಜ್ ಖಾನ್ (55), ಸೈಯದ್ ಸನಾವುಲ್ಲಾ (33) ಹಾಗೂ ಪೈರೋಜ್ ಖಾನ್ (34) ಬಂಧಿತರು.

‘ಕೊಲೆಯಾದ ಸುಹೇಲ್ ಷರೀಫ್, ಮೋದಿ ಗಾರ್ಡನ್ 6ನೇ ಅಡ್ಡರಸ್ತೆಯಲ್ಲಿರುವ ಮೋದಿ ಜಿಯಾ ಮಸೀದಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅವರಿಗಿಂತಲೂ ಮುನ್ನ ಆರೋಪಿ ಜಮೀರ್ ಖಾನ್ ಮಸೀದಿಯ ಉಸ್ತುವಾರಿಯಾಗಿದ್ದರು. ಉಸ್ತುವಾರಿ ಕೈತಪ್ಪಿದ್ದಕ್ಕಾಗಿ ಜಮೀರ್‌ ಖಾನ್, ಆಗಾಗ ಸುಹೇಲ್ ಜೊತೆ ಗಲಾಟೆ ಮಾಡುತ್ತಿದ್ದರು. ಅವರ ಮೇಲೆ ದ್ವೇಷ ಸಾಧಿಸುತ್ತಿದ್ದರು. ಕೊಲೆ ಮಾಡಲು ಸಂಚು ಸಹ ರೂಪಿಸಿದ್ದರು. ಈ ಬಗ್ಗೆ ಸುಹೇಲ್ ಪತ್ನಿ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘2019ರಲ್ಲಿ ಸುಹೇಲ್ ಹಾಗೂ ಜಮೀರ್ ಖಾನ್ ನಡುವೆ ಗಲಾಟೆ ಆಗಿತ್ತು. ಜಮೀರ್ ಖಾನ್ ಸಂಬಂಧಿಗೆ ಸುಹೇಲ್ ಮಾರಕಾಸ್ತ್ರದಿಂದ ಹೊಡೆದಿದ್ದರು. ಈ ಪ್ರಕರಣದಲ್ಲಿ ಸುಹೇಲ್ ಜೈಲಿಗೂ ಹೋಗಿ ಬಂದಿದ್ದರು. ಇದರಿಂದಾಗಿ ಇಬ್ಬರ ನಡುವೆ ದ್ವೇಷ ಮತ್ತಷ್ಟು ಹೆಚ್ಚಾಗಿತ್ತು.’

ಮಚ್ಚಿನಿಂದ ಕೊಚ್ಚಿ, ತಲೆ ಮೇಲೆ ಸಿಮೆಂಟ್ ಬ್ರಿಕ್ಸ್ ಎತ್ತಿ ಹಾಕಿದರು: ‘ಏಪ್ರಿಲ್ 7ರಂದು ಬೆಳಿಗ್ಗೆ 4 ಗಂಟೆಗೆ ಸುಹೇಲ್, ಸಿಗರೇಟ್ ತರಲೆಂದು ಮನೆ ಬಳಿಯ ಅಂಗಡಿಗೆ ಹೊರಟಿದ್ದರು. ಅದೇ ಸಂದರ್ಭದಲ್ಲೇ ಆಟೊ ಹಾಗೂ ದ್ವಿಚಕ್ರ ವಾಹನದಲ್ಲಿ ಬಂದು ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಮಚ್ಚಿನಿಂದ ಹೊಡೆದಿದ್ದರು. ನಂತರ ತಲೆ ಮೇಲೆ ಸಿಮೆಂಟ್ ಬ್ರಿಕ್ಸ್‌ ಎತ್ತಿ  ಹಾಕಿ ಕೊಂದು ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಹತ್ಯೆಯ ದೃಶ್ಯ ಸ್ಥಳೀಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸುಹೇಲ್ ಪತ್ನಿ ನೀಡಿದ್ದ ದೂರು ಆಧರಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಅವರನ್ನು ಕಸ್ಟಡಿಗೆ ಪಡೆಯಬೇಕಿದೆ’ ಎಂದೂ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು