ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಆರ್ ದಾಖಲಿಸದಿದ್ದರೆ ಕ್ರಮ: ಎಸ್‌ಎಚ್‌ಒಗಳಿಗೆ ಪ್ರವೀಣ್‌ ಸೂದ್‌ ಎಚ್ಚರಿಕೆ

Last Updated 5 ಮಾರ್ಚ್ 2020, 19:44 IST
ಅಕ್ಷರ ಗಾತ್ರ

ಬೆಂಗಳೂರು: ಗಂಭೀರ ಪ್ರಕರಣಗಳಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸದ ಠಾಣಾಧಿಕಾರಿ ಮತ್ತು ತನಿಖಾಧಿಕಾರಿ ವಿರುದ್ಧ ಕ್ರಿಮಿನಲ್‌ ಕ್ರಮಕೈಗೊಳ್ಳುವ ಜತೆಗೆ ಇಲಾಖಾ ವಿಚಾರಣೆಗೆ ಆದೇಶಿಸುವುದಾಗಿ ರಾಜ್ಯ ಪೊಲೀಸ್ ಮಹಾನಿರೀಕ್ಷಕ ಹಾಗೂ ಮಹಾನಿರ್ದೇಶಕ ಪ್ರವೀಣ್‌ ಸೂದ್ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಲಲಿತಾ ಕುಮಾರಿ ಹಾಗೂ ಉತ್ತರ ಪ್ರದೇಶ ಸರ್ಕಾರದ ಪ್ರಕರಣದಲ್ಲಿ (ರಿಟ್‌ ಅರ್ಜಿ ಸಿಆರ್‌ಎಲ್‌) ಗಂಭೀರ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಿ, ತನಿಖೆ ನಡೆಸಬೇಕು. ಗಂಭೀರವಲ್ಲದ ಪ್ರಕರಣಗಳಲ್ಲಿ ಫಿರ್ಯಾದಿಗೆ ಅಥವಾ ಮಾಹಿತಿದಾರರಿಗೆ ಸ್ವೀಕೃತಿ ಕೊಡಬೇಕು ಎಂಬ ತೀರ್ಪಿನ ಹಿನ್ನೆಲೆಯಲ್ಲಿ 2014ರ ಏಪ್ರಿಲ್‌ನಲ್ಲಿ ಹೊರಡಿಸಿದ್ದ ಸುತ್ತೋಲೆ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮತ್ತೊಂದು ಹೊಸ ಸುತ್ತೋಲೆ ಹೊರಡಿಸಿರುವ ಡಿಜಿ ಮತ್ತು ಐಜಿ, ಠಾಣೆಗೆ ದೂರು ಬಂದ ತಕ್ಷಣ ಪ್ರಾಥಮಿಕ ತನಿಖೆ ಆರಂಭಿಸಬೇಕು. 15ದಿನದೊಳಗೆ ತನಿಖೆ ಪೂರ್ಣಗೊಳಿಸಿ, ಕೈಗೊಂಡ ಕ್ರಮ ಕುರಿತು ಮಾಹಿತಿದಾರರಿಗೆ/ ಫಿರ್ಯಾದಿಗೆ ತಿಳಿಸಬೇಕು. ಎಫ್‌ಐಆರ್‌ ನೋಂದಣಿ ವಿಳಂಬಕ್ಕೆ ಕಾರಣವೇನೆಂದು ವಿವರಿಸುವ ಟಿಪ್ಪಣಿ ಲಗತ್ತಿಸಬೇಕು ಎಂದು ಸೂಚಿಸಿದ್ದಾರೆ.

ಹೊಸ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸದ ಎಸ್‌ಎಚ್‌ಒ/ ತನಿಖಾಧಿಕಾರಿಗಳ ವಿರುದ್ಧ ಐಪಿಸಿ 166/ 166ಎ ಸೆಕ್ಷನ್‌ ಅಡಿ ಕರ್ತವ್ಯ ಲೋಪ ಆರೋಪದಡಿ ಕ್ರಿಮಿನಲ್‌ ಕ್ರಮ ಕೈಗೊಳ್ಳುವುದರ ಜೊತೆಗೆ ಇಲಾಖಾ ವಿಚಾರಣೆಗೂ ಆದೇಶಿಸಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

ಗಂಭೀರ ಪ್ರಕರಣಗಳಲ್ಲಿ ಸಕಾಲಕ್ಕೆ ಎಫ್‌ಐಆರ್‌ ದಾಖಲಿಸದ ಎಸ್‌ಎಚ್‌ಒಗಳಿಗೆ ಸಂಬಂಧಪಟ್ಟ ಮುಖ್ಯಸ್ಥರು ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಇದರೊಟ್ಟಿಗೆ, ಇಲಾಖಾ ವಿಚಾರಣೆ ಆರಂಭಿಸಬೇಕು. ಲಲಿತಾ ಕುಮಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು, ಪೋಕ್ಸೊ ಹಾಗೂ ಬಾಲಾಪರಾಧ ಕಾಯ್ದೆ ಬಗ್ಗೆ ಎಸ್‌ಎಚ್ಒ ಮತ್ತು ಐಒಗಳಲ್ಲಿ ಜಾಗೃತಿ ಮೂಡಿಸಲು ಕಾರ್ಯಾಗಾರ ನಡೆಸುವಂತೆ ಪ್ರವೀಣ್‌ ಸೂದ್‌ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT