ಬುಧವಾರ, ಫೆಬ್ರವರಿ 1, 2023
16 °C

ಡಿಎಚ್‌ ಬೆಂಗಳೂರು 2040 ಶೃಂಗ: ಸುಗಮ ಸಾರಿಗೆಗೆ ಬಹುಮಾದರಿ ಸಮನ್ವಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಸಾರಿಗೆ ಪಾಲುದಾರರು ಪರಸ್ಪರ ಕೈಜೋಡಿಸಿದರೆ ಸಮಗ್ರ ಸಾರಿಗೆ ವೇದಿಕೆಗಳನ್ನು ನಿರ್ಮಿಸಲು,
ತಡೆರಹಿತ ಬಹುಮಾದರಿ ಸಂಚಾರವನ್ನು ಸುಗಮಗೊಳಿಸಲು ಸಾಧ್ಯವಾಗಲಿದೆ.

ಇದು ‘ಪ್ರಜಾವಾಣಿ’ಯ ಸೋದರ ಪತ್ರಿಕೆಯಾದ ಡೆಕ್ಕನ್‌ ಹೆರಾಲ್ಡ್ ಶನಿವಾರ ಆಯೋಜಿಸಿದ್ದ ‘ಡಿಎಚ್‌ ಬೆಂಗಳೂರು 2040 ಶೃಂಗ’ದಲ್ಲಿ ಹಸಿರಿ ನಿಂದ ಕಂಗೊಳಿಸುವ ಬೆಂಗಳೂರನ್ನು ಮರುರೂಪಿಸುವ ಕುರಿತು ನಡೆದ ಚರ್ಚೆ–ಸಂವಾದದಲ್ಲಿ ವ್ಯಕ್ತವಾದ ಅಭಿಪ್ರಾಯ.

‘ನಗರದ ವಾಹನ ದಟ್ಟಣೆ ಕಳವಳ ಮೂಡಿಸುತ್ತದೆ. ಸುಮಾರು 1.07 ಕೋಟಿ ವಾಹನಗಳು ಈಗಾಗಲೇ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುತ್ತಿವೆ. ವರ್ಷಕ್ಕೆ ಶೇ 10ರಷ್ಟು ವಾಹನಗಳು ಹೆಚ್ಚಾಗುತ್ತಿವೆ. ಈಗಿರುವ ವೈಯಕ್ತಿಕ ವಾಹನಗಳ ಬಳಕೆ ಶೇ 40ರಿಂದ ಶೇ 20ಕ್ಕೆ ಇಳಿಸುವ ಹಾಗೂ ಸಾರ್ವಜನಿಕ ಸಾರಿಗೆಯ ಪಾಲನ್ನು ಶೇ 48ರಿಂದ ಶೇ 80ಕ್ಕೆ ಹೆಚ್ಚಿಸುವ ಅಗತ್ಯವಿದೆ’ ಎಂದು ಸಂಚಾರ ವಿಭಾಗದ ವಿಶೇಷ ಪೊಲೀಸ್‌ ಆಯುಕ್ತ ಎಂ.ಎ.ಸಲೀಂ ವಿವರಿಸಿದರು.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ‘ಮೆಟ್ರೊ ನಿಲ್ದಾಣಗಳು ಕೇವಲ ರೈಲುಗಳಲ್ಲಿ ಪ್ರಯಾಣಿಸುವ ಉದ್ದೇಶಕ್ಕೆ ಸೀಮಿತವಾಗಬಾರದು. ಕಚೇರಿ ಕೆಲಸ ಮುಗಿಸಿ, ಮನೆಗೆ ತೆರಳುವ ಜನರ ತರಕಾರಿ, ಕಿರಾಣಿ, ಶಾಪಿಂಗ್, ಇತರೆ ಉದ್ದೇಶಗಳನ್ನೂ ಅವು ಪೂರೈಸುವಂತಾಗಬೇಕು. ಇದರಿಂದ ರಸ್ತೆಗಳಲ್ಲಿ ಜನರ ಸಂಚಾರ ಕಡಿಮೆಯಾಗುವ ಜತೆಗೆ ವಾಹನ ದಟ್ಟಣೆಯನ್ನೂ ನಿಯಂತ್ರಿಸಬಹುದು’ ಎಂದು ಸಲಹೆ ನೀಡಿದರು.‌

‘ಮೂರನೇ ಹಂತದ ಮೆಟ್ರೊಗೆ ಪೂರಕವಾಗಿ ಹಲವೆಡೆ ಬಿಎಂಟಿಸಿ ಸಾರಿಗೆ ವ್ಯವಸ್ಥೆ ಇಲ್ಲ. ಅಂತಹ ಭಾಗ ಗಳಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಬೇಕು’ ಎಂದು ಸಲಹೆ ನೀಡಿದರು.

ಬಾಷ್ ಲಿಮಿಟೆಡ್‌ ಜಂಟಿ ವ್ಯವಸ್ಥಾಪಕ ನಿರ್ದೇಶಕ ಗುರುಪ್ರಸಾದ್ ಮುದ್ಲಾಪುರ, ‘ತಡೆರಹಿತ ಸಾರಿಗೆ ಅನುಭವಕ್ಕೆ ಸಿಟಿ ಆಪರೇಟಿಂಗ್ ಸಿಸ್ಟಮ್ (ಸಿಟಿ ಓಎಸ್) ಮೂಲಕ ಡೇಟಾ ಹಂಚಿಕೆ ಮಾಡುವುದು ಪ್ರಮುಖ ಹೆಜ್ಜೆಯಾಗಿದೆ’ ಎಂದರು.

‘ಮುಂದಿನ 17 ವರ್ಷಗಳ ಸಂಚಾರ ವ್ಯವಸ್ಥೆ ಹೇಗಿರಬೇಕು ಎಂದು ಯೋಜಿಸುತ್ತಿದ್ದೇವೆ. ನಮ್ಮ ಮುಂದಿರುವ ಗುರಿಗಳನ್ನು ಪಾರದರ್ಶಕಗೊಳಿಸಬೇಕು’ ಎಂದು ಸನ್ ಮೊಬಿಲಿಟಿ ಸಹ ಸಂಸ್ಥಾಪಕ ಚೇತನ್ ಮೈನಿ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು