ಭಾನುವಾರ, ಏಪ್ರಿಲ್ 18, 2021
23 °C
ಸೋಂಕು ನಿಯಂತ್ರಣಕ್ಕೆ ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತರಿಂದ ಪರಿಶೀಲನೆ

ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌: 39 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ನಲ್ಲಿ ಒಟ್ಟು 39 ಮಂದಿ  ಕೋವಿಡ್‌ ಹೊಂದಿರುವುದು ದೃಢಪಟ್ಟಿದೆ. ಇಲ್ಲಿ ಸೋಂಕು ಹರಡದಂತೆ ತಡೆಯಲು ಬಿಬಿಎಂಪಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ವಾರ್ಡ್‌ನ ಗುಂಡು ವೆಂಕೋಬ ರಾವ್ ಗಲ್ಲಿಯ ಮೆಹ್ತಾ ಟವರ್ ಶೇರ್‌ಖಾನ್ ಕಟ್ಟಡದ (ಸಂಖ್ಯೆ 969) ನಿವಾಸಿಯೊಬ್ಬರು ಕೋವಿಡ್‌ ಸೋಂಕು ಹೊಂದಿರುವುದು ಕೆಲದಿನಗಳ ಹಿಂದೆ ಪತ್ತೆಯಾಗಿತ್ತು. ಹಾಗಾಗಿ ಕಟ್ಟಡದಲ್ಲಿ ವಾಸವಾಗಿದ್ದ 120 ಮಂದಿಯನ್ನು ಹಾಗೂ ಸೋಂಕಿತ ವ್ಯಕ್ತಿ ಜೊತೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಟ್ಟು 140 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ, ಅವರಲ್ಲಿ 39 ಮಂದಿ ಸೋಂಕು ಹೊಂದಿದ್ದು ದೃಢಪಟ್ಟಿದೆ.

ಬಿಬಿಎಂಪಿ ಮುಖ್ಯ ಅಯುಕ್ತ ಗೌರವ ಗುಪ್ತ ಅವರು ಕೋವಿಡ್‌ ಸೋಂಕು ಕಾಣಿಸಿಕೊಂಡ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆಮಾಡಿ ಕೋವಿಡ್ ಪರೀಕ್ಷೆ  ನಡೆಸಬೇಕು. ಅವರ ಪ್ರತ್ಯೇಕ ವಾಸಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಲಸಿಕೆ ಪಡೆಯಲು ಅರ್ಹರಿರುವ ಎಲ್ಲರನ್ನು ಗುರುತಿಸಿ ಲಸಿಕೆ ನೀಡುವಂತೆ ಸೂಚಿಸಿದರು.

ಆರೋಗ್ಯಾಧಿಕಾರಿ ಡಾ. ಶಿವಕುಮಾರ್, ‘ಮೆಹ್ತಾ ಟವರ್ ಶೇರ್‌ಖಾನ್ ಕಟ್ಟಡಕ್ಕೆ ಬಿಬಿಎಂಪಿ ಬೀಗಮುದ್ರೆ ಹಾಕಿದೆ. ಈ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಕೋವಿಡ್ ಸೋಂಕು ಹೊಂದಿರುವ ಇಬ್ಬರನ್ನು ಸಿ.ವಿ.ರಾಮನ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಈ ಕಟ್ಟಡದ ಮಾಲೀಕರ ಮತ್ತೊಂದು ಕಟ್ಟಡವನ್ನು ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಅಲ್ಲಿ 37 ಮಂದಿ ಪ್ರತ್ಯೇಕ ವಾಸಕ್ಕೆ ಒಳಗಾಗುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕಟ್ಟಡದ ಸುತ್ತಮುತ್ತಲಿನ ನಿವಾಸಿಗಳು ಸೇರಿದಂತೆ ಈಗಾಗಲೇ 600 ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ. ಕೋವಿಡ್ ಪರೀಕ್ಷೆ ಮಾಡಲು 8 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಕೋವಿಡ್ ಸೋಂಕು ಪತ್ತೆಯಾದರೂ ಸುತ್ತಮುತ್ತಲಿನ ಪ್ರದೇಶದ ಎಲ್ರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ಜೊತೆಗೆ ಆದಷ್ಟು ಹೆಚ್ಚು ಮಂದಿಗೆ ಕೋವಿಡ್‌ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

–0–

ಕರಗದ ಮೇಲೆ ಕೋವಿಡ್‌ ಕರಿನೆರಳು

ಐತಿಹಾಸಿಕ ಕರಗ ಮಹೋತ್ಸವ ನಡೆಯುವ ತಿಗಳರಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನವು ಇದೇ ವಾರ್ಡ್‌ನಲ್ಲಿದೆ. ಈ ವಾರ್ಡ್‌ನಲ್ಲಿ ಭಾರಿ ಪ್ರಮಾಣದಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವುದು ಸಾರ್ವಜನಿರಕ ಹಾಗೂ ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿವೆ. ಕರಗ ಮಹೋತ್ಸವ ವಿಧಿವಿಧಾನಗಳನ್ನು ಇದೇ 19ರಿಂದ 27ರವರೆಗೆ ನಿರ್ಬಂಧಿತ ವಾತಾವರಣದಲ್ಲಿ ನಡೆಸಲು ಬಿಬಿಎಂಪಿ ಹಾಗೂ ಜಿಲ್ಲಾಡಳಿತ ನಿರ್ಧರಿಸಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು