ಹೆಮ್ಮಿಗೆಪುರ ವಾರ್ಡ್‌ :‘ಅಧಿಕಾರಿಗಳ ಆಲಸ್ಯದಿಂದ ತೊಂದರೆ’

7
ಕುಂದು ಕೊರತೆ ಸಭೆ

ಹೆಮ್ಮಿಗೆಪುರ ವಾರ್ಡ್‌ :‘ಅಧಿಕಾರಿಗಳ ಆಲಸ್ಯದಿಂದ ತೊಂದರೆ’

Published:
Updated:
Deccan Herald

ಬೆಂಗಳೂರು: ‘ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಜನಪ್ರತಿನಿಧಿಗಳು ಬೆಲೆ ತೆರಬೇಕಿದೆ’ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಕಿಡಿಕಾರಿದರು.

ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ನಾಗರಿಕ ಸಮಸ್ಯೆ ಆಲಿಸಲು ಜೆಎಸ್ಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕುಂದು ಕೊರತೆ ಸಭೆಯಲ್ಲಿ ಬಿಬಿಎಂಪಿ ಬೀದಿ ದೀಪಗಳ ನಿರ್ವಹಣೆ ವಿಭಾಗದ ಅಧಿಕಾರಿಗಳ ವಿರುದ್ಧ ಮಹಿಳೆಯರ ದೂರುಗಳ ಸರಮಾಲೆಯೇ ಕೇಳಿ ಬಂದಿತು.

‘ಬೀದಿ ದೀಪಗಳು ಹೆಸರಿಗೆ ಮಾತ್ರ. ಕೆಟ್ಟು ತಿಂಗಳು ಕಳೆದರೂ ರಿಪೇರಿಯಾಗುತ್ತಿಲ್ಲ. ಬಡಾವಣೆಯಲ್ಲಿ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಸರಗಳ್ಳತನಕ್ಕೂ ಮುಂದಾಗಿದ್ದಾರೆ. ಇದರ ನಡುವೆ ಕುಡುಕರ ಹಾವಳಿ ಬೇರೆ’ ಎಂದು ತಲಘಟ್ಟಪುರದ ನಿವಾಸಿ ಶಾರದಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಜನತೆಯ ದೂರಿನಿಂದ ಆಕ್ರೋಶಗೊಂಡ ಶಾಸಕರು, ದೂರಿಗೆ ಸಮರ್ಪಕವಾಗಿ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ‘ಕರ್ತವ್ಯ ಲೋಪ ಎಸಗುವ ಮೂಲಕ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಟೀಕೆಗೆ ಒಳಪಡಿಸುವುದು ಸಾಧುವಲ್ಲ. ಶೀಘ್ರ ಕ್ರಮ ಕೈಗೊಳ್ಳಬೇಕು’ ಎಚ್ಚರಿಸಿದರು.

ಡಾಂಬರು ಸಮಸ್ಯೆಯು ಸಭೆಯಲ್ಲಿ ಗಹನ ಚರ್ಚೆಗೆ ಈಡಾಯಿತು. ಕೆಲ ದಿನಗಳಲ್ಲಿಯೇ ಕಿತ್ತು ಬರುವ ಡಾಂಬರನ್ನು ಹಾಕುವ ಔಚಿತ್ಯವಾದರೂ ಏನು? ಎಂದು ಪ್ರಶ್ನಿಸಿದರು. ಮಳೆ ಬಂದರೆ ಮ್ಯಾನ್‌ಹೋಲ್‌ಗಳು ತುಂಬಿ ಬರುತ್ತಿವೆ. ಚರಂಡಿಯ ನೀರು ಎಲ್ಲೆಡೆ ಹರಿಯುತ್ತಿದೆ ಎಂದು ಬಿಸಿಎಂಸಿ ಲೇಔಟ್ ನಿವಾಸಿ ಶ್ರೀನಿವಾಸ್ ಕಿಡಿಕಾರಿದರು. ಕೆಂಗೇರಿಯ ಪೊಲೀಸ್ ಕಾಲೋನಿ ಬಳಿಯೇ ಲಾರಿ ನಿಲುಗಡೆಯಾಗುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಅನನುಕೂಲವಾಗುತ್ತಿದೆ ಎಂದು ರಮೇಶ್ ಆಕ್ಷೇಪ ವ್ಯಕ್ತಪಡಿಸಿದರು.

ಬೇಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಸಿದ್ಧವಾಗಿರುವ ಕಮಾಂಡ್‌ ಕಚೇರಿಯಂತೆ ಕೆಂಗೇರಿ ಹಾಗೂ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಸಜ್ಜಿತ ಕಚೇರಿ ತೆರೆಯಲು ಚಿಂತನೆ ನಡೆಸಲಾಗಿದೆ. ಈ ಮೂಲಕ ಸರಗಳ್ಳತನ ಹಾಗೂ ಕುಡುಕರ ಹಾವಳಿಗೆ ಇತಿಶ್ರೀ ಹಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !