ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂವಹನದ ಚಲನಶೀಲತೆ ಹೆಚ್ಚಿಸಿದ ಡಿಜಿಟಲ್‌: ಕೊಪ್ಪಳ ವಿವಿ ಕುಲಪತಿ ಬಿ.ಕೆ. ರವಿ

ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ
Published : 13 ಸೆಪ್ಟೆಂಬರ್ 2024, 15:17 IST
Last Updated : 13 ಸೆಪ್ಟೆಂಬರ್ 2024, 15:17 IST
ಫಾಲೋ ಮಾಡಿ
Comments

ಬೆಂಗಳೂರು: ಡಿಜಿಟಲ್‌ ಮಾಧ್ಯಮವು ಭಾರತದ ಸಂವಹನದ ಚಲನಶೀಲತೆಯನ್ನು ಹೆಚ್ಚಿಸಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ ತಿಳಿಸಿದರು.

ಜೈನ್‌ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ‘ಸಾಹಿತ್ಯ ಸಮಾಜ, ಜಾಗತಿಕ ಮಾಧ್ಯಮದ ಎರಡನೇ ಅಂತರರಾಷ್ಟ್ರೀಯ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಸಾಹಿತ್ಯ ಹಾಗೂ ಪತ್ರಿಕೋದ್ಯಮವು ತನ್ನದೇ ಆದ ಛಾಪು ಮೂಡಿಸಿವೆ. ಆಡಳಿತ ವರ್ಗಗಳೊಂದಿಗೆ ಜನ ಸಾಮಾನ್ಯರನ್ನು ಜೋಡಿಸುವ ಕೊಂಡಿಯಾಗಿ ಮಾಧ್ಯಮ ಮಾರ್ಪಾಡುಗೊಂಡಿದೆ ಎಂದು ವಿಶ್ಲೇಷಿಸಿದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನುಮ್ ಮಾತನಾಡಿ, ‘ಸಮಾಜದ ಧ್ವನಿಯಾಗಿರುವ ಮಾಧ್ಯಮದಲ್ಲಿ ಪ್ರತಿಯೊಬ್ಬರ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಮಾಧ್ಯಮದ ಮೇಲೆ ಜಾಗತೀಕರಣದ ಪ್ರಭಾವವೂ ಇದೆ’ ಎಂದು ಹೇಳಿದರು.

ಯುನಿವರ್ಸಿಟಿ ಆಫ್ ನಾರ್ಥ್ ಟೆಕ್ಸಾಸ್‌ನ ಭಗವಾನ್ ಆದಿನಾಥ ಪೀಠದ ಮುಖ್ಯಸ್ಥ ಜಾರ್ಜ್ ಆಲ್ಫ್ರೆಡ್ ಜೇಮ್ಸ್ ಮಾತನಾಡಿ, ‘ಪರಿಸರಕ್ಕೆ ಸಂಬಂಧಿಸಿದ ವಿಚಾರ ಬಂದಾಗ ಚಿಪ್ಕೊ ಚಳವಳಿಯನ್ನು ಅಮೆರಿಕದಲ್ಲಿ ಪ್ರಸ್ತಾಪಿಸುತ್ತಾರೆ. ಅದೇ ಸಮಯದಲ್ಲಿ ಭಾರತದಲ್ಲಿ ಚಿಪ್ಕೊ ಚಳವಳಿಯನ್ನು ಮರೆತುಬಿಟ್ಟಿದ್ದಾರೆ. ಇಲ್ಲಿ ಪರಿಸರದ ಕಾಳಜಿ ಕಡಿಮೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜೈನ್‌ ವಿಶ್ವವಿದ್ಯಾಲಯದ ಸಹ ಕುಲಪತಿ ದಿನೇಶ್‌ ನೀಲಕಂಠ ಮಾತನಾಡಿ, ‘ಸಮಾಜದಲ್ಲಿ ಸಾರ್ವಜನಿಕ ಪ್ರಜ್ಞೆಯನ್ನು ರೂಪಿಸುವಲ್ಲಿ ಸಾಹಿತ್ಯ ಮತ್ತು ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತಿವೆ. ನಾವು ನಮ್ಮನ್ನು ಮತ್ತು ಇತರರನ್ನು ಹೇಗೆ ಗ್ರಹಿಸಬೇಕು ಎಂದು ಹೇಳಿಕೊಡುತ್ತಿವೆ. ನಮ್ಮ ತಿಳಿವಳಿಕೆಯನ್ನು ವಿಸ್ತರಿಸುತ್ತಿವೆ’ ಎಂದು ಹೇಳಿದರು.

ಜೈನ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ರವೀಂದ್ರ ಭಂಡಾರಿ, ವಿಚಾರ ಸಂಕಿರಣದ ಸಂಘಟಕರಾದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಭಾರ್ಗವಿ ಡಿ. ಹೆಮ್ಮಿಗೆ, ಜೈನ್‌ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಶ್ರದ್ಧಾ ಕನ್ವರ್, ಭಾಷಾ ವಿಭಾಗದ ಮುಖ್ಯಸ್ಥೆ ರಜನಿ ಜಯರಾಮ್, ಸಂಪನ್ಮೂಲ ವ್ಯಕ್ತಿ ಶ್ಯಾಮಲಿ ಬ್ಯಾನರ್ಜಿ, ವಿವಿಧ ತಜ್ಞರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT