ಕೆ.ಆರ್.ಪುರ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ವಿತರಣೆಯಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು.
‘ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಕಮಿಟಿ ಸದಸ್ಯರು ತಮಗೆ ಬೇಕಾದವರಿಗೆ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಲು ಟೋಕನ್ ವಿತರಿಸುತ್ತಿದ್ದಾರೆ. ಲಸಿಕೆ ವಿಚಾರದಲ್ಲಿ ವೈದ್ಯರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ’ ಎಂದುಕೆ.ಆರ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ದೂರಿದರು.
‘ಲಸಿಕೆಗಾಗಿ ಬೆಳಿಗ್ಗೆಯಿಂದ ಸಾಲುಗಟ್ಟಿ ನಿಲ್ಲುವವರಿಗೆ ಟೋಕನ್ ನೀಡದೆ ತಾರತ್ಯಮ ಮಾಡಲಾಗುತ್ತಿದೆ. ಕಾಳಸಂತೆಯಲ್ಲಿ ₹500ರಿಂದ ₹1 ಸಾವಿರದವರೆಗೆ ಟೋಕನ್ ಮಾರಾಟ ಮಾಡಲಾಗುತ್ತಿದೆ. ಲಸಿಕೆ ಅಭಿಯಾನದ ದುರುಪಯೋಗವಾಗುತ್ತಿದೆ’ ಎಂದು ಆರೋಪಿಸಿದರು.
‘ಲಸಿಕೆ ವಿಚಾರದಲ್ಲಿ ಈ ಅವ್ಯವಸ್ಥೆ ಸರಿಪಡಿಸಬೇಕು. ಟೋಕನ್ ವ್ಯವಸ್ಥೆಯಲ್ಲಿನ ಅವ್ಯವಹಾರ ನಿಲ್ಲಬೇಕು. ಈ ಬಗ್ಗೆ ಸಂಬಂಧಪಟ್ಟ ಕ್ಷೇತ್ರದ ಶಾಸಕರು, ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲದಿದ್ದರೆ, ಹೋರಾಟ ಮುಂದುವರೆಸಲಾಗುವುದು’ ಎಂದು ಎಚ್ಚರಿಸಿದರು.
ಆಸ್ಪತ್ರೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಸಿ.ರೆಡ್ಡಿ, ‘ಜನಜಂಗುಳಿ ತಡೆಯುವ ಉದ್ದೇಶದಿಂದ ಪಾರದರ್ಶಕವಾಗಿ ಟೋಕನ್ ವಿತರಣೆ ನಡೆಯುತ್ತಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.