ಭಾನುವಾರ, ನವೆಂಬರ್ 17, 2019
23 °C
ಟೀಕೆಗೆ ಕಾರಣವಾದ ಮುಖ್ಯಮಂತ್ರಿ ನಡೆ

ಸರ್ಕಾರಿ ಕಾರ್ಯಕ್ರಮದಲ್ಲಿ ಅನರ್ಹ ಶಾಸಕರಿಗೆ ಮಣೆ

Published:
Updated:

ಬೆಂಗಳೂರು: ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ಇತ್ಯರ್ಥವಾಗುವ ಮೊದಲೇ ಅವರ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಹೆಸರಿನಲ್ಲಿ ಉಪಚುನಾವಣಾ ಪ್ರಚಾರ ಆರಂಭಿಸಿದ್ದು, ಈ ಕಾರ್ಯಕ್ರಮಗಳಲ್ಲಿ ಅನರ್ಹ ಶಾಸಕರನ್ನು ಪಕ್ಕದಲ್ಲೇ ಕೂರಿಸಿಕೊಳ್ಳುತ್ತಿರುವುದು ಚರ್ಚೆಗೆ ಕಾರಣವಾಗಿದೆ.

ಈಗಾಗಲೇ ಉಪಚುನಾವಣಾ ವೇಳಾಪಟ್ಟಿ ಘೋಷಣೆಯಾಗಿದೆ. ನ. 11ರಿಂದ ಚುನಾವಣಾ ನೀತಿ ಸಂಹಿತೆಯೂ ಜಾರಿ ಆಗಲಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಅನರ್ಹ ಶಾಸಕರನ್ನು ವಿಶೇಷ ಆಹ್ವಾನಿತರನ್ನಾಗಿ ಕರೆಸಿಕೊಂಡು ವೇದಿಕೆಯಲ್ಲಿ ಮಣೆ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂಬ ವ್ಯಾಖ್ಯಾನ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ಕೇವಲ ಅನರ್ಹರ ಕ್ಷೇತ್ರಗಳಿಗೆ ವಿಶೇಷ ಅನುದಾನ ನೀಡಿ ಮತ್ತು ಹೊಸ ಯೋಜನೆಗಳಿಗೆ ಚಾಲನೆ ನೀಡುತ್ತಿರುವುದು ಎಷ್ಟು ಸರಿ ಎಂಬ ಆಕ್ಷೇಪವೂ ಕೇಳಿ ಬಂದಿದೆ. ಕಳೆದ ಎರಡು ದಿನಗಳಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ₹1,000 ಕೋಟಿಗಳಷ್ಟು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಡಾ.ಸುಧಾಕರ್‌ ಪ್ರತಿನಿಧಿಸುತ್ತಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶುಕ್ರ ವಾರ ಭಾರಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಪಕ್ಕದಲ್ಲೇ ಸುಧಾಕರ್‌ ಇದ್ದರು. ಇಲ್ಲಿ ₹710 ಕೋಟಿ ಮೊತ್ತದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ, ಆಶ್ರಯ ಪತ್ರ ವಿತರಣೆ ಸೇರಿದಂತೆ ಹಲವು ಕಾಮ ಗಾರಿಗಳಿಗೆ ಶಿಲಾನ್ಯಾಸ ಮಾಡಲಾಯಿತು.

ಅನರ್ಹ ಶಾಸಕ ಆರ್‌.ಶಂಕರ್‌ ಪ್ರತಿನಿಧಿಸುವ ರಾಣೆಬೆನ್ನೂರಿನಲ್ಲಿ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲ ಸೌಕರ್ಯ ಕಾಮಗಾರಿಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದರ ಒಟ್ಟು ಅಂದಾಜು ವೆಚ್ಚ ₹105 ಕೋಟಿ.

ಹಿರೇಕೆರೂರು ಕ್ಷೇತ್ರದಲ್ಲಿ ವಿವಿಧ 20 ಕಾಮಗಾರಿಗಳು, ತುಂಗಾ ಮೇಲ್ದಂಡೆ ಯೋಜನೆ ಕಟ್‌ ಕವರ್‌ ನಿರ್ಮಾಣ, ಪಂಚಾಯತ್‌ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದಿಂದ 13 ಕಾಮಗಾರಿ, ಸಮಾಜ ಕಲ್ಯಾಣ ಇಲಾಖೆಯ ಒಂದು ಕಾಮಗಾರಿ ಸೇರಿ ಒಟ್ಟು ₹119.60 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇದು ಅನರ್ಹ ಶಾಸಕ ಬಿ.ಸಿ.ಪಾಟೀಲ ಪ್ರತಿನಿಧಿಸುತ್ತಿದ್ದ ಕ್ಷೇತ್ರ.

ಹೊಸಕೋಟೆ ಕ್ಷೇತ್ರದಲ್ಲಿ ಅನುಗೊಂಡನಹಳ್ಳಿ ಮತ್ತು ಜಡಿಗೇನಹಳ್ಳಿ ಹೋಬಳಿ ವ್ಯಾಪಿಯ 30 ಕೆರೆಗಳಿಗೆ ಕೆ.ಆರ್‌.ಪುರ ಎಸ್‌ಟಿಸಿಯಿಂದ ನೀರು ತರುವ ಏತ ನೀರಾವರಿ ಯೋಜನೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಹೊಸಕೋಟೆವರೆಗೆ ಮೆಟ್ರೊ ವಿಸ್ತರಣೆ ಮಾಡಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುವ ಭರವಸೆ ನೀಡಿದ್ದೂ ಅಲ್ಲದೆ, ಸರ್ಕಾರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ, ಎಂ.ಟಿ.ಬಿ. ನಾಗರಾಜ್‌ ಕ್ಷೇತ್ರಕ್ಕೆ ಏನು ಬೇಕೊ ಕೇಳಿ ಕೊಡ್ತೀವಿ ಎಂಬುದಾಗಿ ಭರವಸೆ ನೀಡಿದರು. ಈ ಕಾರ್ಯಕ್ರಮದಲ್ಲಿ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್‌ ಅವರು ಮುಖ್ಯಮಂತ್ರಿ ಜತೆಗಿದ್ದರು.

ಉಪಚುನಾವಣೆ ನಡೆಯುವ ಕ್ಷೇತ್ರ ಗಳಲ್ಲಿ ಅನರ್ಹ ಶಾಸಕರಿಗೆ ಮಣೆ ಹಾಕುತ್ತಿರುವುದು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೊಸಬರು ಮತ್ತು ಹಳಬರ ಮಧ್ಯೆ ಸಮತೋಲನ ಕಾಯ್ದುಕೊಂಡು ಹೋಗಬೇಕು ಎಂದು ವರಿಷ್ಠರೂ ಸೂಚನೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)