ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಕೆಎಸ್‌ಆರ್‌ಟಿಸಿ ನೌಕರರ ಅವಲಂಬಿತರಿಗೆ ಅಪಘಾತ ಪರಿಹಾರ ವಿಮೆ ಹಾಗೂ ರೋಗ, ಇನ್ನಿತರ ಕಾರಣಗಳಿಂದ ಮೃತಪಟ್ಟವರ ಅವಲಂಬಿತರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಧನವನ್ನು ಬುಧವಾರ ವಿತರಿಸಲಾಯಿತು.
ಹಾಸನ ವಿಭಾಗದ ಅರಕಲಗೂಡು ಘಟಕದಲ್ಲಿ ಚಾಲಕ ಕಂ ನಿರ್ವಾಹಕರಾಗಿದ್ದ ರಾಜೇಶ್ ಡಿ.ಸಿ. ಜುಲೈ 29ರಂದು ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಕುಟುಂಬದವರಿಗೆ ವಿಮೆ ₹1 ಕೋಟಿ ಮತ್ತು ಉಪಧನ, ಭವಿಷ್ಯ ನಿಧಿ, ನೌಕರರ ಕುಟುಂಬ ಕಲ್ಯಾಣ ಯೋಜನೆ, ಡಿಆರ್‌ಬಿಎಫ್ ಹಾಗೂ ಗುಂಪು ವಿಮಾ ಪರಿಹಾರ ಮೊತ್ತ ₹ 14.19 ಲಕ್ಷ ನೀಡಲಾಯಿತು.
ಹೃದಯಾಘಾತ, ಕ್ಯಾನ್ಸರ್, ಪಾರ್ಶ್ವವಾಯು ಇನ್ನಿತರ ಕಾರಣಗಳಿಂದ 16 ನೌಕರರು ಮೃತಪಟ್ಟಿದ್ದು, ಅವರ ಕುಟುಂಬದವರಿಗೆ ₹10 ಲಕ್ಷ ಪರಿಹಾರ ವಿತರಿಸಲಾಯಿತು.
ಪರಿಹಾರ ಧನ ವಿತರಿಸಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ನೌಕರರ ಜೀವಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ. ಆದರೂ ಪರಿಹಾರ ಮೊತ್ತವನ್ನು ಸದುಪಯೋಗ ಪಡಿಸಿಕೊಂಡು ಸುಸೂತ್ರವಾಗಿ ಜೀವನ ನಿರ್ವಹಣೆ ಮಾಡಬೇಕು’ ಎಂದು ಸಲಹೆ ನೀಡಿದರು.
‘₹1 ಕೋಟಿ ವಿಮಾ ಯೋಜನೆ ಜಾರಿಯಾದ ಬಳಿಕ ಅಪಘಾತದಲ್ಲಿ 17 ನೌಕರರು ಮೃತಪಟ್ಟಿದ್ದಾರೆ. ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಧನ ₹3 ಲಕ್ಷ ಇತ್ತು. ವಿವಿಧ ಕಾರಣಗಳಿಂದ ಮೃತಪಡುವವರ ಸಂಖ್ಯೆ ಹೆಚ್ಚಿರುವುದನ್ನು ಮನಗಂಡು ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಕಾರ್ಮಿಕ ಸಂಘಟನೆಗಳು ಒತ್ತಾಯಿಸಿದ್ದವು. ಅದರಂತೆ ₹10 ಲಕ್ಷಕ್ಕೆ ಏರಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಕೇಂದ್ರ ಕಚೇರಿಯಲ್ಲಿ ಪರಿಹಾರದ ಚೆಕ್‌ಗಳನ್ನು ವಿತರಿಸಿದ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ‘ಸಾರಿಗೆ ಸಿಬ್ಬಂದಿ ಶ್ರಮ ಜೀವಿಗಳಾಗಿದ್ದು, ನಿಗಮವು ಅವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ’ ಎಂದು ತಿಳಿಸಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್, ನಿರ್ದೇಶಕಿ (ಸಿಬ್ಬಂದಿ ಮಾತ್ತು ಜಾಗೃತ) ನಂದಿನಿದೇವಿ, ಕಾರ್ಮಿಕ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.