ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದವಸಧಾನ್ಯ ಪೊಟ್ಟಣ ವಿತರಣೆ ಆರಂಭ

58,532 ಪೊಟ್ಟಣಗಳಿಗೆ ಬೇಡಿಕೆ l ಮಹದೇವಪುರದಲ್ಲಿ 21 ಸಾವಿರ ಮಂದಿಯಿಂದ ಕೋರಿಕೆ
Last Updated 4 ಏಪ್ರಿಲ್ 2020, 21:25 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ –19 ರೋಗ ಹರಡುವಿಕೆ ನಿಯಂತ್ರಿಸಲು ವಿಧಿಸಿರುವ ಲಾಕ್‌ಡೌನ್‌ ವೇಳೆ ಸಂಕಷ್ಟಕ್ಕೆ ಸಿಲುಕಿರುವ ಬಡವರು, ನಿರ್ಗತಿಕರು ಹಾಗೂ ಕಟ್ಟಡ ಕಾರ್ಮಿಕರಿಗೆ ದವಸಧಾನ್ಯಗಳನ್ನು ಒಳಗೊಂಡ ಪೊಟ್ಟಣಗಳ ವಿತರಣೆಯನ್ನು ಪಾಲಿಕೆ ಅಧಿಕಾರಿಗಳು ಶನಿವಾರ ಆರಂಭಿಸಿದರು.

‘‌ಒಟ್ಟು 58,532 ಮಂದಿ ದವಸಧಾನ್ಯ ಒದಗಿಸುವಂತೆ ಬೇಡಿಕೆ ಸಲ್ಲಿಸಿದ್ದರು. ನಾವು ಸದ್ಯಕ್ಕೆ ಪಾಲಿಕೆ ವತಿಯಿಂದ ಸುಮಾರು 20 ಸಾವಿರ ಮಂದಿಗೆ ದವಸ ಧಾನ್ಯ ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. 9 ಸಾವಿರಕ್ಕೂ ಅಧಿಕ ಪೊಟ್ಟಣಗಳನ್ನು ಈಗಾಗಲೇ ಕಳುಹಿಸಿಕೊಟ್ಟಿದ್ದೇವೆ’ ಎಂದು ದವಸಧಾನ್ಯ ವಿತರಣೆಯ ನೋಡಲ್ ಅಧಿಕಾರಿ ಸರ್ಫರಾಜ್‌ ಖಾನ್‌ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸ್ಥಳೀಯ ಜನಪ್ರತಿನಿಧಿಗಳ ಬದಲು ಅಧಿಕಾರಿಗಳೇ ಕಿಟ್‌ ವಿತರಣೆ ಮಾಡುತ್ತಿದ್ದಾರೆ.

‘ನಾವು ಆಯಾ ವಲಯದ ಜಂಟಿ ಆಯುಕ್ತರಿಗೆ ಪೊಟ್ಟಣಗಳನ್ನು ಕಳುಹಿಸಿಕೊಟ್ಟಿದ್ದೇವೆ. ಫಲಾನುಭವಿಗಳನ್ನು ಗುರುತಿಸಲು ಸ್ಥಳೀಯ ಜನಪ್ರತಿನಿಧಿಗಳ ನೆರವನ್ನೂ ಪಡೆದಿದ್ದೇವೆ’ ಎಂದು ಸರ್ಫರಾಜ್‌ ಖಾನ್‌ ತಿಳಿಸಿದರು.

ಮಹದೇವಪುರ ವಲಯದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ನಿರಾಶ್ರಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ವಲಯದಿಂದ 21 ಸಾವಿರಕ್ಕೂ ಹೆಚ್ಚು ಮಂದಿ ದವಸಧಾನ್ಯಗಳ ಕಿಟ್‌ಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಬಳಿಕ ಹೆಚ್ಚಿನ ಸಂಖ್ಯೆಯ ಬೇಡಿಕೆ ವ್ಯಕ್ತವಾಗಿರುವುದು ಯಲಹಂಕ ವಲಯದಲ್ಲಿ. ಇಲ್ಲಿ ಸುಮಾರು 15 ಸಾವಿರ ಮಂದಿ ಬೇಡಿಕೆ ಸಲ್ಲಿಸಿದ್ದಾರೆ.

ಅರಮನೆ ಮೈದಾನದ ತ್ರಿಪುರ ವಾಸಿನಿ ಸಭಾಂಗಣವೂ ಸೇರಿದಂತೆ ನಾಲ್ಕು ಕಡೆಗಳಲ್ಲಿ ದವಸಧಾನ್ಯಗಳ ಪೊಟ್ಟಣವನ್ನು ಸಿದ್ಧಪಡಿಸುವ ಕಾರ್ಯ ಭರದಿಂದ ಸಾಗಿದೆ. ಇಸ್ಕಾನ್‌ನವರು 3,630 ಪೊಟ್ಟಣಗಳನ್ನು ಒದಗಿಸಿದ್ದಾರೆ. ಒಬ್ಬರಿಗೆ 20 ದಿನಗಳಿಗೆ ಬೇಕಾಗುವಷ್ಟು ದವಸಧಾನ್ಯ ಹಾಗೂ ಇತರ ಅಗತ್ಯ ಸಾಮಗ್ರಿ ಈ ಪೊಟ್ಟಣದಲ್ಲಿರುತ್ತದೆ.

3.09 ಲಕ್ಷ ಲೀಟರ್‌ ಹಾಲು ವಿತರಣೆ

ಪಾಲಿಕೆ ವತಿಯಿಂದ ಜನರಿಗೆ ಶನಿವಾರ 3.09 ಲಕ್ಷ ಲೀಟರ್‌ಗಳಷ್ಟು ನಂದಿನಿ ಹಾಲನ್ನು ಉಚಿತವಾಗಿ ವಿತರಿಸಲಾಯಿತು. ಪಶ್ಚಿಮ ವಲಯದಲ್ಲಿ ಅತಿಹೆಚ್ಚು (80 ಸಾವಿರ ಲೀ) ಹಾಲು ವಿತರಿಸಲಾಗಿದೆ. ಭಾನುವಾರ 3.19 ಲಕ್ಷ ಲೀ. ಹಾಲು ವಿತರಿಸುವ ಉದ್ದೇಶವನ್ನು ಪಾಲಿಕೆ ಹೊಂದಿದೆ.

ಬೇಡಿಕೆ ಸಲ್ಲಿಸಿದವರ ವಿವರ

42,851 -ಕರ್ನಾಟಕದವರು

15,681 -ಹೊರರಾಜ್ಯಗಳ ವಲಸಿಗರು

761 -ಗರ್ಭಿಣಿಯರು

9,189 -ಮಕ್ಕಳು

2,269 -ಹಿರಿಯ ನಾಗರಿಕರು

ವಲಯವಾರು ಬೇಡಿಕೆ ವಿವರ

ಪೂರ್ವ; 2,159

ಪಶ್ಚಿಮ; 2,739

ದಕ್ಷಿಣ; 2,185

ಬೊಮ್ಮನಹಳ್ಳಿ; 4,655

ಮಹದೇವಪುರ; 21,709

ಆರ್‌.ಆರ್‌.ನಗರ; 5,169

ದಾಸರಹಳ್ಳಿ; 5,000

ಯಲಹಂಕ; 14,916

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT