ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಆಗ್ರಹ

7
ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

ಜಿಲ್ಲಾ ಉಸ್ತುವಾರಿ ಸಚಿವರ ನೇಮಕಕ್ಕೆ ಆಗ್ರಹ

Published:
Updated:

ಬೆಂಗಳೂರು: ಸರ್ಕಾರ ರಚನೆ ಆಗಿ ಒಂದು ತಿಂಗಳು ಕಳೆದಿದ್ದು, ಆದಷ್ಟು ಬೇಗ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕು ಎಂದು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಅಪಾರ ನಷ್ಟ ಉಂಟಾಗಿದ್ದು, ಪರಿಹಾರ ಕಾರ್ಯ ಕೈಗೊಳ್ಳಲು ಹಿನ್ನಡೆಯಾಗಿದೆ. ಉಸ್ತುವಾರಿ ಸಚಿವರು ಇದ್ದರೆ ಈ ಕಾರ್ಯಗಳನ್ನು ತ್ವರಿತವಾಗಿ ನಡೆಸಬಹುದಾಗಿದೆ ಎಂದು ಸಚಿವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅಹವಾಲು ತೋಡಿಕೊಂಡರು.

ಈ ಬಗ್ಗೆ ಆದಷ್ಟು ಬೇಗನೇ ತೀರ್ಮಾನ ತೆಗೆದುಕೊಳ್ಳುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.ಈ ಸಂದರ್ಭದಲ್ಲಿ ಕೆಲವು ಸಚಿವರು, ಆಯಾ ಜಿಲ್ಲೆಯ ಮಂತ್ರಿಗಳನ್ನು ಅದೇ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು ಎಂದು ಸಲಹೆ ನೀಡಿದರು. ಆದರೆ, ಇನ್ನು ಕೆಲವು ಸಚಿವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಯಾವುದೇ ಒಂದು ಜಿಲ್ಲೆಯ ಸಚಿವರನ್ನು ಅದೇ ಜಿಲ್ಲೆಗೆ ನೇಮಿಸುವುದಕ್ಕಿಂತ ಬೇರೆ ಜಿಲ್ಲೆಗಳಿಗೆ ನೇಮಿಸುವುದು ಸೂಕ್ತ ಎಂದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲರ ಸಲಹೆ– ಸೂಚನೆಗಳನ್ನು ಪಡೆದು ಮುಂದಿನ ಹೆಜ್ಜೆ ಇಡುವುದಾಗಿ ಕುಮಾರಸ್ವಾಮಿ ಹೇಳಿದರು ಎನ್ನಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವಂತೆ ಕಾಂಗ್ರೆಸ್‌ ಸಚಿವರು ಕೆಪಿಸಿಸಿ ಕಚೇರಿಯಲ್ಲಿ ಬೆಳಿಗ್ಗೆ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮೇಲೆ ತೀವ್ರ ಒತ್ತಡ ಹೇರಿದ್ದರು.

ರಾಜ್ಯದ ಸಾಕಷ್ಟು ಜಿಲ್ಲೆಗಳಲ್ಲಿ ಮಳೆ ಆಗಿದ್ದರೂ ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿ ಕೆಲವು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಇಂತಹ ಜಿಲ್ಲೆಗಳ ಕೆಲವು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ತಕ್ಷಣವೇ ಕುಡಿಯುವ ನೀರಿನ ವ್ಯವಸ್ಥೆ  ಮಾಡಬೇಕು ಎಂದು ಈ ಜಿಲ್ಲೆಗಳ ಶಾಸಕರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು.

ರಾಜ್ಯಪಾಲರ ಭಾಷಣಕ್ಕೆ ಒಪ್ಪಿಗೆ: ಜುಲೈ 2ರಂದು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಲಿರುವ ಭಾಷಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯಪಾಲರ ಭಾಷಣ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಪ್ರಣಾಳಿಕೆಗಳ ಆಶಯಗಳನ್ನು ಒಳಗೊಂಡಿರುತ್ತದೆ. ರೈತರ ಸಂಕಷ್ಟ ಮತ್ತು ಅದಕ್ಕಾಗಿ ಸಾಲ ಮನ್ನಾದಂತಹ ಕ್ರಮದ ಅಗತ್ಯವನ್ನು ಭಾಷಣದಲ್ಲಿ ಪ್ರತಿಪಾದಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ.

 ಹಳೇ ಯೋಜನೆಗಳ ಮುಂದುವರಿಕೆ

ಬಜೆಟ್ ಬಗ್ಗೆ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸೋಣ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಸಭೆಯಲ್ಲಿ ಸಲಹೆ ನೀಡಿದರು. ಇದಕ್ಕೆ ಉಳಿದವರು ಸಮ್ಮತಿ ನೀಡಿದರು ಎಂದು ಮೂಲಗಳು ತಿಳಿಸಿವೆ.

ಹಿಂದಿನ ಸರ್ಕಾರದ ಯೋಜನೆಗಳನ್ನೇ ಮುಂದುವರಿಸಲು ಉದ್ದೇಶಿಸಲಾಗಿದೆ. ಹೊಸ ಯೋಜನೆ ಸೇರಿಸುವ ಸಾಧ್ಯತೆ ಕಡಿಮೆ. ಬಜೆಟ್‌ ಕುರಿತು ಚರ್ಚೆ ನಡೆಯಲಿಲ್ಲ ಎಂದು ಸಚಿವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಪುಟದ ತೀರ್ಮಾನಗಳು

* ನಾಲ್ಕನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಹಂತ–ಹಂತವಾಗಿ ಜಾರಿ ಮಾಡಲು ಸಚಿವ ಸಂಪುಟ ಒಪ್ಪಿಗೆ.

* ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಹಣಕಾಸು ಆಯೋಗದ ಶಿಫಾರಸಿನಂತೆ ಶೇ 48 ರಷ್ಟು ಅನುದಾನ ನೀಡಲು ತೀರ್ಮಾನ. ಈ ಹಿಂದೆ ಶೇ 40 ರಷ್ಟು ನೀಡಲಾಗುತ್ತಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !