ಬೆಂಗಳೂರು: ‘ರಂಗನಾಥ್ ರಾಮಚಂದ್ರ ದಿವಾಕರ್ ಅವರು 11 ವರ್ಷದ ಬಾಲಕರಾಗಿದ್ದಾಗಲೇ ಮಹಾತ್ಮ ಗಾಂಧೀಜಿ ಅವರ ಪ್ರಭಾವಕ್ಕೊಳಗಾಗಿ ಅವರ ನೇರ ಶಿಷ್ಯರಾಗಿದ್ದರು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.
ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಸೋಮವಾರ ಆಯೋಜಿಸಿದ್ದ ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ–18 ಕಾರ್ಯಕ್ರಮದಲ್ಲಿ ‘ಡಾ.ಆರ್.ಆರ್. ದಿವಾಕರ್’ ಅವರ ಕುರಿತು ಉಪನ್ಯಾಸ ನೀಡಿದರು.
‘ದಿವಾಕರ್ ಅವರು ಅಸಹಕಾರ ಚಳವಳಿ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ನೇರವಾಗಿ ಭಾಗಿಯಾಗಿ ಎಂಟು ಬಾರಿ ಜೈಲುವಾಸ ಅನುಭವಿಸಿದ್ದರು. ತಮ್ಮ ಯೌವ್ವನದ ಸುಖವನ್ನು ತ್ಯಾಗ ಮಾಡಿ, ಭಾರತೀಯರೆಲ್ಲರೂ ಸುಖವಾಗಿ ಬದುಕುಲು ಸ್ವಾತಂತ್ರ್ಯ ಸಂಗ್ರಾಮದ ತಂದೆಯಾದರು’ ಎಂದು ಬಣ್ಣಿಸಿದರು.
‘ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಕರ್ನಾಟಕದ ಏಕೈಕ ವ್ಯಕ್ತಿ ಮೈಲಾರ ಮಹಾದೇವ ಅವರನ್ನು ಗಾಂಧೀಜಿ ಅವರ ಸಬರಮತಿ ಆಶ್ರಮಕ್ಕೆ ಕಳುಹಿಸಿಕೊಟ್ಟವರು ದಿವಾಕರ್. ಖಾದಿ, ಚರಕದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು’ ಎಂದು ನೆನಪಿಸಿಕೊಂಡರು.
ಲೇಖಕ ರಾ.ನಂ. ಚಂದ್ರಶೇಖರ, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಉಪಸ್ಥಿತರಿದ್ದರು.