ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಹಬ್ಬದಲ್ಲಿ ಬೆಳಗಿದ ಬೆಂಗಳೂರು

ಸಾಲು ದೀಪಗಳಿಂದ ಕಂಗೊಳಿಸಿದ ಮನೆ – ಮಂದಿರ
Last Updated 28 ಅಕ್ಟೋಬರ್ 2019, 18:58 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದರೂ, ಹಬ್ಬದ ಸಡಗರ ಕಡಿಮೆಯಾಗಿರಲಿಲ್ಲ. ದೀಪಾವಳಿ ನಿಮಿತ್ತ ಮನೆ ಹಾಗೂ ಕಚೇರಿಗಳು ತಳಿರು–ತೋರಣಗಳಿಂದ ಕಂಗೊಳಿಸುತ್ತಿದ್ದವು.

ನಗರದಲ್ಲಿನ ಬಹುತೇಕ ಕಿರಾಣಿ ಅಂಗಡಿಗಳು, ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್ಸ್‌ ಅಂಗಡಿ, ಪಾತ್ರೆ ಅಂಗಡಿಗಳಲ್ಲಿ ಅಮಾವಾಸ್ಯೆ ಅಂಗವಾಗಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಸಂಜೆಯಾಗುತ್ತಿದ್ದಂತೆ ಮನೆ–ದೇಗುಲಗಳ ಮುಂದೆ ಬೆಳಗಿದ ಸಾಲು ದೀಪಗಳು ಎಲ್ಲೆಡೆ ಆಧ್ಯಾತ್ಮಿಕ ವಾತಾವರಣ ಸೃಷ್ಟಿಸಿದವು.

ವ್ಯಾಪಾರ, ಚೆನ್ನಾಗಿ ನಡೆಯಲಿ ಎಂದು ವ್ಯಾಪಾರಿಗಳು ಲಕ್ಷ್ಮೀದೇವಿಯಲ್ಲಿ ಪ್ರಾರ್ಥಿಸಿದರು. ವಾಹನಗಳನ್ನು ತೊಳೆದು ಹೂವು, ಕುಂಕುಮ, ವಿಭೂತಿ ಹಚ್ಚಿ ಸಿಂಗರಿಸಿದ್ದರು.

ಖರೀದಿ ಜೋರು: ಹೊಸ ಬಟ್ಟೆ, ದಿನಸಿ, ಕಬ್ಬು, ಬಾಳೆದಿಂಡು, ಹೂವು–ಹಣ್ಣು ಖರೀದಿ ಸೋಮವಾರವೂ ಭರ್ಜರಿಯಾಗಿ ನಡೆಯಿತು. ಮನೆಯ ಮುಂಭಾಗದಲ್ಲಿ ಕಟ್ಟಲಾಗುವ ಆಕಾಶಬುಟ್ಟಿ, ಆಲಂಕಾರಿಕ ವಸ್ತುಗಳು, ಹಣತೆ ಮತ್ತಿತರ ವಸ್ತುಗಳ ಖರೀದಿಗೆ ಗೃಹಿಣಿಯರು ಆಸಕ್ತಿ ತೋರಿದರೆ, ಪಟಾಕಿಗಳ ಖರೀದಿಗೆ ಮಕ್ಕಳು, ಯುವಕರು ಪೋಷಕರನ್ನು ಒತ್ತಾಯಿಸುತ್ತಿದ್ದುದು ಸಾಮಾನ್ಯವಾಗಿತ್ತು.

ಹಬ್ಬದ ಪ್ರಯುಕ್ತ ಗ್ರಾಹಕರನ್ನು ಸೆಳೆಯಲು ಹಲವು ರಿಯಾಯಿತಿಗಳನ್ನು ಘೋಷಿಸಲಾಗಿತ್ತು. ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್‌ ಉಪಕರಣಗಳ ಮಳಿಗೆಗಳು ಹಾಗೂ ಸಿಹಿ ತಿನಿಸುಗಳ ಮಳಿಗೆಗಳು ಗ್ರಾಹಕರಿಂದ ತುಂಬಿದ್ದವು.

ಪರಿಸರ ಜಾಗೃತಿ: ಒಂದೆಡೆ ಪಟಾಕಿ ಸಿಡಿಸುವ ಮೂಲಕ ಹಲವರು ಸಂಭ್ರಮಿಸುತ್ತಿದ್ದರೆ, ‘ಪಟಾಕಿ ಮುಕ್ತ’ ದೀಪಾವಳಿ ಆಚರಣೆಯಲ್ಲಿ ತೊಡಗುವ ಮೂಲಕ ಪರಿಸರ ಪ್ರೇಮ ಮೆರೆದರು. ಬನ್ನೇರುಘಟ್ಟ ಜೈವಿಕ ಉದ್ಯಾನವು ‘ಪಟಾಕಿ ಮುಕ್ತ ಹಸಿರು ಅಭಿಯಾನ’ ಹಮ್ಮಿಕೊಂಡಿತ್ತು.

ಪಟಾಕಿ ‘ಸದ್ದಡಗಿಸಿದ’ ಮಳೆ !

ಪಟಾಕಿ ಸಿಡಿಸಿ ಸಂಭ್ರಮಿಸಲು ಸಿದ್ಧಗೊಂಡಿದ್ದವರಿಗೆ ಭಾನುವಾರ ಸಂಜೆ ಸುರಿದ ಮಳೆ ನಿರಾಸೆ ತರಿಸಿತು. ಲಕ್ಷ್ಮೀ ಪಟಾಕಿ, ರಾಕೆಟ್‌, ಸುರ್‌ಸುರ್‌ಬತ್ತಿ, ಭೂಚಕ್ರ ಎಲ್ಲವೂ ಬಾಕ್ಸ್‌ನಲ್ಲಿಯೇ ‘ವಿಶ್ರಾಂತಿ’ ಪಡೆದವು.‍ಪಟಾಕಿ ಹಚ್ಚಿ ಸಂಭ್ರಮದಿಂದ ಹಬ್ಬ ಆಚರಿಸಲು ಬೆಳಿಗ್ಗೆಯಿಂದ ಸಂಜೆಯವರೆಗೆ ಕಾದಿದ್ದ ಮಕ್ಕಳಿಗೆ ವರುಣ ಬೇಸರ ತರಿಸಿದ.

ಸಂಚಾರ ವಿರಳ: ಹಬ್ಬದ ನಿಮಿತ್ತ ಬಹುತೇಕರು ಸ್ವಂತ ಊರಿಗೆ ತೆರಳಿದ್ದರಿಂದ ನಗರದ ಬಹುತೇಕ ರಸ್ತೆಗಳಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಎಂದಿನ ಸಂಚಾರ ದಟ್ಟಣೆ ಕಂಡು ಬರಲಿಲ್ಲ.

ಹೆಚ್ಚು ಹಾನಿ ತಪ್ಪಿಸಿದ ‘ವರುಣ’

ಪ್ರತಿ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಪಟಾಕಿ ಸಿಡಿದು ಗಾಯಗೊಂಡವರ ಸಂಖ್ಯೆ ಕಡಿಮೆ ಇತ್ತು. ಭಾನುವಾರ ಸಂಜೆ ಮಳೆ ಸುರಿದಿದ್ದರಿಂದ ಪಟಾಕಿ ಸಿಡಿಸುವವರ ಸಂಖ್ಯೆಯೂ ಕಡಿಮೆ ಇದ್ದುದು ಇದಕ್ಕೆ ಕಾರಣ.

ಹಿಂದಿನ ವರ್ಷ ನಾರಾಯಣ ನೇತ್ರಾಲಯದಲ್ಲಿ ಪಟಾಕಿ ಸಿಡಿದು ಗಾಯಗೊಂಡವರ 38 ಪ್ರಕರಣಗಳ ದಾಖಲಾಗಿದ್ದವು. ಈ ಬಾರಿ ಈವರೆಗೆ 11 ಜನ ಮಾತ್ರ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ವ್ಯವಸ್ಥಾಪ‍ಕರಾದ ಉಮಾ ಹೇಳಿದರು.

‘ಈ ಪೈಕಿ 10 ಮಕ್ಕಳು ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಕೆಲವು ಮಕ್ಕಳಿಗೆ ಗಂಭೀರ ಗಾಯವಾಗಿದೆ’ ಎಂದು ಅವರು ಹೇಳಿದರು.

ಪಟಾಕಿ ಸಿಡಿತದಿಂದ ಗಾಯಗೊಂಡ 14 ಜನ ಮಿಂಟೊ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ‘ಈ 14 ಜನರ ಪೈಕಿ, ಮಕ್ಕಳ ಸಂಖ್ಯೆಯೇ ಹೆಚ್ಚು’ ಎಂದು ವೈದ್ಯೆ ಡಾ. ಸುಜಾತಾ ರಾಥೋಡ್‌ ತಿಳಿಸಿದರು.

ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 10 ಮಕ್ಕಳು ದಾಖಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT