ಮಂಗಳವಾರ, ಜೂನ್ 15, 2021
25 °C
ದೂರು ನೀಡುವವರ ಸಂಖ್ಯೆ ಹೆಚ್ಚಳ l ಆರೋಪಿಗಳ ವಿರುದ್ಧ 52 ಎಫ್ಐಆರ್‌ ದಾಖಲು l ನಿಷೇಧಾಜ್ಞೆ ಮುಂದುವರಿಕೆ

ಎಸ್‌ಡಿಪಿಐ ಕಚೇರಿಯಲ್ಲಿ ಸಿಕ್ಕಿಬಿದ್ದ ಆರೋಪಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‌ ಭೈರಸಂದ್ರದಲ್ಲಿ ಮಂಗಳವಾರ ರಾತ್ರಿ (ಆ. 11) ಗಲಭೆ ಸೃಷ್ಟಿಸಿ ತಲೆಮರೆಸಿಕೊಂಡಿದ್ದ ಎಂಟು ಪ್ರಮುಖ ಆರೋಪಿಗಳು ನಗರದ ಎಸ್‌ಡಿಪಿಐ ಕಚೇರಿಯಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ಬಂಧಿಸಲಾಗಿರುವ ಎಸ್‌ಡಿಪಿಎ ಪಕ್ಷದ ಮುಖಂಡ ಮುಜಾಮ್ಮಿಲ್ ಪಾಷ ನೀಡಿದ್ದ ಮಾಹಿತಿಯಂತೆ ಸಿಸಿಬಿ ಪೊಲೀಸರ ತಂಡ, ಹೆಗಡೆ ನಗರದಲ್ಲಿರುವ ಪಕ್ಷಕ್ಕೆ ಸೇರಿದ ಕೊಠಡಿಗೆ ಹೋಗಿ ಶನಿವಾರ ರಾತ್ರಿ ಪರಿಶೀಲನೆ ನಡೆಸಿದೆ. ಕೊಠಡಿಯಲ್ಲಿ ಅಡಗಿ ಕುಳಿತಿದ್ದ ಎಂಟು ಮಂದಿಯನ್ನು ಬಂಧಿಸಿ, ವೈದ್ಯಕೀಯ ಹಾಗೂ ಕೊರೊನಾ ಪರೀಕ್ಷೆಗೆ ಒಳಪಡಿಸಿದೆ.

‘ಸಾವಿರಕ್ಕೂ ಹೆಚ್ಚು ಮಂದಿ ಗಲಭೆಯಲ್ಲಿ ಪಾಲ್ಗೊಂಡಿದ್ದ ಮಾಹಿತಿ ಇದೆ. ಘಟನೆಯ ವಿಡಿಯೊ ಹಾಗೂ ಬಂಧಿತ ಆರೋಪಿಗಳ ಹೇಳಿಕೆ ಆಧರಿಸಿ ಮತ್ತಷ್ಟು ಆರೋಪಿಗಳನ್ನು ಸೆರೆ ಹಿಡಿಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಹೆಗಡೆ ನಗರದ ಕಟ್ಟಡವೊಂದರ ನೆಲ ಮಹಡಿಯಲ್ಲಿ ಪಕ್ಷದ ಕಚೇರಿ ಇದೆ. ಮುಜಾಮ್ಮಿಲ್ ಪಾಷ ಹಾಗೂ ಇತರರು ಅದೇ ಕಚೇರಿಯಲ್ಲೇ ಹಲವು ಬಾರಿ ಸಭೆ ನಡೆಸಿದ್ದರು. ಗಲಭೆ ದಿನವೂ ಕಚೇರಿಯಲ್ಲಿ ಹಲವರು ಇದ್ದರು. ಅವರಲ್ಲಿ ಕೆಲವರು ಡಿ.ಜೆ.ಹಳ್ಳಿ ಠಾಣೆ ಬಳಿ ಬಂದು ಗಲಭೆ ಸೃಷ್ಟಿಸಿದ್ದರು. ಠಾಣೆ ಎದುರು ಬರುವಂತೆ ಇತರರಿಗೆ ಸಂದೇಶ ರವಾನಿಸಿ ಪ್ರಚೋದನೆ ನೀಡಿದ್ದರು’ ಎಂದೂ ವಿವರಿಸಿದರು.

52 ಎಫ್‌ಐಆರ್‌ ದಾಖಲು: ‘ಗಲಭೆ ಪ್ರಕರಣ ಸಂಬಂಧ ಇದುವರೆಗೂ 52 ಎಫ್‌ಐಆರ್‌ ದಾಖಲಾಗಿವೆ’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ತಿಳಿಸಿದರು.

‘ಡಿ.ಜೆ.ಹಳ್ಳಿ ಠಾಣೆಯಲ್ಲಿ 38 ಹಾಗೂ ಕೆ.ಜಿ. ಹಳ್ಳಿ ಠಾಣೆಯಲ್ಲಿ 14 ಎಫ್‌ಐಆರ್ ದಾಖಲಾಗಿವೆ. ಪೊಲೀಸರು ಹಾಗೂ ಸಾರ್ವಜನಿಕರು ದೂರುದಾರರಾಗಿದ್ದಾರೆ. ದೂರು ನೀಡುವರ ಸಂಖ್ಯೆ ಹೆಚ್ಚು
ತ್ತಲೇ ಇದ್ದು, ಎಫ್‌ಐಆರ್‌ ಸಂಖ್ಯೆಯೂ ಜಾಸ್ತಿ ಆಗಬಹುದು’ ಎಂದರು.

ನಿಷೇಧಾಜ್ಞೆ ಮುಂದುವರಿಕೆ: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ. ಆ. 18ರ ಬೆಳಿಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಡಿ.ಜೆ. ಹಳ್ಳಿ ಠಾಣೆ ಎದುರು ಆರೋಪಿಗಳ ಕುಟುಂಬಸ್ಥರು

ಗಲಭೆ ಪ್ರಕರಣ ಸಂಬಂಧ ಬಂಧಿಸಲಾದ ಆರೋಪಿಗಳು ಹಾಗೂ ವಶಕ್ಕೆ ಪಡೆದಿರುವ ವ್ಯಕ್ತಿಗಳ ಕುಟುಂಬಸ್ಥರು ಡಿ.ಜೆ.ಹಳ್ಳಿ ಠಾಣೆ ಎದುರು ಜಮಾಯಿಸಿ, ತಮ್ಮ ಕಡೆಯವರ ಬಗ್ಗೆ ಮಾಹಿತಿ ನೀಡುವಂತೆ ಪಟ್ಟು ಹಿಡಿದರು.

ತಂಡವಾಗಿ ಬಂದಿದ್ದ ಮಹಿಳೆಯರು, ಠಾಣೆ ಎದುರು ಕಣ್ಣೀರಿಟ್ಟರು. ‘ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಮನೆಗೆ ಬಂದು ಅವರನ್ನು  ಕರೆದುಕೊಂಡು ಹೋಗಿದ್ದಾರೆ. ಈಗ ಅವರು ಎಲ್ಲಿದ್ದಾರೆ ಎಂಬ ಮಾಹಿತಿಯನ್ನೂ ನೀಡುತ್ತಿಲ್ಲ’ ಎಂದು ಮಹಿಳೆಯರು ದೂರಿದರು.

ಮಹಿಳೆಯೊಬ್ಬರು, ‘ನನ್ನ ಪತಿ ಹಾಗೂ ಸಹೋದರನನ್ನು ಪೊಲೀಸರು ಕರೆದೊಯ್ದಿದ್ದಾರೆ. ಗಲಭೆ ನಡೆದ ದಿನ ಅವರು ಮನೆಯಲ್ಲೇ ಇರಲಿಲ್ಲ. ಗೋವಿಂದಪುರದಲ್ಲಿದ್ದ ಸಂಬಂಧಿಕರ ಮನೆಯಲ್ಲಿದ್ದರು’ ಎಂದರು.

ಸ್ಥಳದಲ್ಲಿದ್ದ ಮಹಿಳಾ ಸಿಬ್ಬಂದಿ, ‘ನಿಷೇಧಾಜ್ಞೆ ಜಾರಿಯಲ್ಲಿದೆ. ರಸ್ತೆಯಲ್ಲಿ ಗುಂಪಾಗಿ ನಿಲ್ಲುವುದು ತಪ್ಪು. ವಾಪಸು ಮನೆಗೆ ಹೋಗಿ. ತಪ್ಪು ಮಾಡಿಲ್ಲವೆಂದರೆ ಎಲ್ಲರೂ ಮನೆಗೆ ಬರುತ್ತಾರೆ’ ಎಂದರು.

ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ ಕೆಲ ಮಹಿಳೆಯರು, ‘ನಮ್ಮವರು ಬೆಂಕಿ ಹಚ್ಚಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ಸಾಕ್ಷ್ಯ ಏನಿದೆ’ ಎಂದು ಪ್ರಶ್ನಿಸಿದರು. ‘ಸೂಕ್ತ ಪುರಾವೆ ಇಟ್ಟುಕೊಂಡೇ ವಿಶೇಷ ತಂಡಗಳು ಆರೋಪಿಗಳನ್ನು ಬಂಧಿಸುತ್ತಿವೆ’ ಎಂದು ಹೇಳಿದ ಪೊಲೀಸರು, ಮಹಿಳೆಯರನ್ನು ಸ್ಥಳದಿಂದ ಕಳುಹಿಸಿದರು.

ದಾಳಿ ಹಿಂದೆ ವ್ಯವಸ್ಥಿತ ಷಡ್ಯಂತ್ರ: ಲಿಂಬಾವಳಿ

‘ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ, ಕಚೇರಿ ಮೇಲೆ ನಡೆದ ದಾಳಿಯ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆ ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

ಕೆ.ಜಿ. ಹಳ್ಳಿ, ಡಿ.ಜೆ ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಗಲಭೆ ನಡೆದ ಸ್ಥಳಕ್ಕೆ ಪಕ್ಷದ ಪರಿಶೀಲನಾ ತಂಡದ ಜೊತೆ ಭಾನುವಾರ ತೆರಳಿ ವೀಕ್ಷಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.

‘ದಾಳಿ ವೇಳೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪಲು ಸಾಧ್ಯವಾಗದಂತೆ ರಸ್ತೆಗಳಿಗೆ ತಡೆ ಹಾಕಿರುವುದು, ದ್ವಿಚಕ್ರ ವಾಹನಗಳನ್ನು ರಸ್ತೆಗೆ ಎಳೆದು ತಂದು ಬೆಂಕಿ ಹಚ್ಚಿರುವುದನ್ನು ನೋಡಿದರೆ ಇದೊಂದು ಯೋಜಿತ ಕೃತ್ಯದಂತೆ ಮೇಲ್ನೋಟಕ್ಕೆ ಗೊತ್ತಾಗುತ್ತದೆ’ ಎಂದರು.

‘ಗಲಭೆ ನಡೆದ ಕೆಲವು ಪ್ರದೇಶಗಳನ್ನಷ್ಟೆ ನಮ್ಮ ತಂಡ ವೀಕ್ಷಣೆ ಮಾಡಿದೆ. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತೇವೆ. ಬಳಿಕ, ರಾಜ್ಯ ಸರ್ಕಾರ ಮತ್ತು ಪಕ್ಷದ ನಾಯಕರಿಗೆ ವರದಿ ನೀಡುತ್ತೇವೆ’ ಎಂದು ತಿಳಿಸಿದರು.

‘ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ದಾಳಿಯಲ್ಲಿ ಯಾವುದೇ ಸಂಘಟನೆ ಭಾಗಿಯಾಗಿದ್ದರೂ ಅದರ ವಿರುದ್ಧ ಕ್ರಮ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಖಚಿತ’ ಎಂದು ಸಂಸದ ಪಿ.ಸಿ. ಮೋಹನ್‌ ಹೇಳಿದರು.

ತಂಡದಲ್ಲಿ ಪಕ್ಷದ ಉಪಾಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ್‌, ಎಂ. ಶಂಕರಪ್ಪ, ಸಂಸದ ಎ. ನಾರಾಯಣ ಸ್ವಾಮಿ ಮತ್ತು ಎಸ್‌ಸಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಕೂಡಾ ಇದ್ದರು.

ನಳಿನ್‌ ಭೇಟಿ ಇಂದು: ಗಲಭೆ ನಡೆದ ಸ್ಥಳಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಮತ್ತು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್‌.ಆರ್. ವಿಶ್ವನಾಥ್‌ ಅವರು ಸೋಮವಾರ ಸಂಜೆ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು