ಕಾಂಗ್ರೆಸ್‌ ಸಚಿವರಿಗೆ ಡಿಕೆಶಿ ಉಪಾಹಾರ ಕೂಟ: ರಹಸ್ಯ ರಾಜಕೀಯ ಲೆಕ್ಕಾಚಾರ?

7

ಕಾಂಗ್ರೆಸ್‌ ಸಚಿವರಿಗೆ ಡಿಕೆಶಿ ಉಪಾಹಾರ ಕೂಟ: ರಹಸ್ಯ ರಾಜಕೀಯ ಲೆಕ್ಕಾಚಾರ?

Published:
Updated:
Deccan Herald

ಬೆಂಗಳೂರು: ಎಲ್ಲ 16 ಕಾಂಗ್ರೆಸ್‌ ಸಚಿವರನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಕ್ರೆಸೆಂಟ್‌ ರಸ್ತೆಯಲ್ಲಿರುವ ತಮ್ಮ ಸರ್ಕಾರಿ ನಿವಾಸಕ್ಕೆ ಗುರುವಾರ ಬೆಳಿಗ್ಗೆ 8 ಗಂಟೆಗೆ ಉಪಾಹಾರಕ್ಕೆ ಆಹ್ವಾನಿಸಿದ್ದಾರೆ.

ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ವಿಷಯ ಚರ್ಚೆಯಲ್ಲಿರುವ ಮಧ್ಯೆ ಶಿವಕುಮಾರ್‌ ಉಪಾಹಾರ ‌ಕೂಟ ಆಯೋಜಿಸಿರುವುದು ಕುತೂಹಲ ಮೂಡಿಸಿದೆ.

ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಸೇರಿ ಎಲ್ಲ ಸಚಿವರು ಉಪಾಹಾರಕ್ಕೆ ತೆರಳುವ ಸಾಧ್ಯತೆ ಇದೆ.

ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಾತಿಗೆ ಹೆಚ್ಚಿನ ಮನ್ನಣೆ ಸಿಗಲಿದೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ದಟ್ಟವಾಗಿದೆ. ಜೊತೆಗೆ, ಕೆಲವು ಸಚಿವರ ಖಾತೆಗಳನ್ನು ಬದಲಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಈ ನಡುವೆ ಶಿವಕುಮಾರ್‌ ಅವರು‌ ಸಚಿವರನ್ನು ಉಪಾಹಾರ ನೆಪದಲ್ಲಿ ಒಟ್ಟುಗೂಡಿಸುತ್ತಿರುವುದು ರಹಸ್ಯ ರಾಜಕೀಯ ಲೆಕ್ಕಾಚಾರ ಎಂದೇ ವಿಶ್ಲೇಷಿಸಲಾಗಿದೆ.

ಚಳವಳಿ ಬೇಡ: ಡಿಕೆಶಿ ಮನವಿ
ತಮ್ಮ ಪರವಾಗಿ ಯಾವುದೇ ಪ್ರತಿಭಟನೆ, ಚಳವಳಿ ಹಾಗೂ ಹೋರಾಟ ಮಾಡಬಾರದು ಎಂದು ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

‘ನನಗೆ ಈ ನೆಲದ ಕಾನೂನಿನ ಮೇಲೆ ಅಪಾರ ಗೌರವ ಮತ್ತು ನಂಬಿಕೆ ಇದೆ. ನನಗೆ ಎದುರಾಗಿರುವ ಸವಾಲು ಹಾಗೂ ಸಮಸ್ಯೆಗಳನ್ನು ಕಾನೂನಾತ್ಮಕ ಹಾಗೂ ರಾಜಕೀಯವಾಗಿ ಎದುರಿಸುವ ಶಕ್ತಿಯೂ ಇದೆ. ರಾಜಕೀಯ ಎದುರಾಳಿಗಳಿಗೆ ರಾಜಕೀಯವಾಗಿಯೇ ಉತ್ತರ ಕೊಡುತ್ತೇನೆ’ ಎಂದು ಹೇಳಿದ್ದಾರೆ.

‘ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾವುದೇ ಚಳವಳಿ ನಡೆಸುವುದಾಗಲಿ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವುದಾಗಲಿ ಮಾಡುವುದು ಬೇಡ. ಇಂಥ ಹೋರಾಟಗಳಿಂದ ಜನಸಾಮಾನ್ಯರಿಗೂ ತೊಂದರೆ ಆಗುತ್ತದೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !