ಸೋಮವಾರ, ಮಾರ್ಚ್ 30, 2020
19 °C

ಕಾರ್ಯಕರ್ತರ ಧ್ವನಿಯಾಗುವೆ: ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಎಷ್ಟೇ ದೊಡ್ಡ ಹುದ್ದೆ ಪಡೆದರೂ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಕಾರ್ಯಕರ್ತರ ದನಿಯಾಗಿ ಹಾಗೂ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತೇನೆ’ ಎಂದು ಕೆಪಿಸಿಸಿಯ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಮೇಲೆ ದೊಡ್ಡ ನಂಬಿಕೆ ಇಟ್ಟು ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಬಯಸಿ ನನಗೆ ಈ ಜವಾಬ್ದಾರಿಯನ್ನು ಸೋನಿಯಾ ಗಾಂಧಿ ಅವರ ಕೈಯಲ್ಲಿ ಕೊಡಿಸಿದ್ದಾರೆ. ದೆಹಲಿ ನಾಯಕರಿಗೆ ನನ್ನ ಮೇಲೆ ಅಪಾರ ವಿಶ್ವಾಸವಿದೆ. ವಿದ್ಯಾರ್ಥಿ ನಾಯಕನಾಗಿದ್ದಾಗ ರಾಜೀವ್ ಗಾಂಧಿ ಅವರು ನನ್ನನ್ನು ಗುರುತಿಸಿ ಟಿಕೆಟ್ ಕೊಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಾ ಬಂದಿದ್ದೇನೆ’ ಎಂದರು.

‘ಶಾಸಕನಾಗಿ, ಮಂತ್ರಿಯಾಗಿ, ಪಕ್ಷದ ಕಾರ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಇವತ್ತು ಅಧ್ಯಕ್ಷನಾಗಿ ಘೋಷಣೆಯಾಗಿದ್ದರೂ ನಾನು ಪಕ್ಷದ ಕಾರ್ಯಕರ್ತನಾಗಿಯೇ ಇರುತ್ತೇನೆ. ಇವತ್ತೂ ಕಾರ್ಯಕರ್ತನೇ, ನಾಳೆಯೂ ಕಾರ್ಯಕರ್ತನೇ. ಕಾರ್ಯಕರ್ತರ ದನಿಯಾಗಿ ಈ ರಾಜ್ಯದ ಜನರ ಸೇವೆ ಮಾಡಬೇಕು ಎಂಬುದು ನನ್ನ ಆಸೆ’ ಎಂದರು.

‘ಎಲ್ಲ ಮುಖಂಡರನ್ನು ಜತೆಯಲ್ಲಿ ತೆಗೆದುಕೊಂಡು ಹೋಗುತ್ತೇನೆ. ಇಲ್ಲಿ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಬೇಕು ಎಂದು ಈ ಹಿಂದೆ ಹೇಳಿದ್ದೆ. ಅದಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ’ ಎಂದರು.

ಅಭಿನಂದಿಸಿದ ಮುಖಂಡರು
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ನೇಮಕಗೊಂಡ ಮಾಹಿತಿ ಕೇಳಿದ ತಕ್ಷಣ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರು ವಿಧಾನಸಭೆಯಲ್ಲಿ ಅಭಿನಂದಿಸಿದರು.

ಗದ್ದಲದಿಂದ ಕಲಾಪ ಮುಂದೂಡಿಕೆ ಆಗಿತ್ತು. ಆಗ ಸಚಿವ ಬಿ.ಶ್ರೀರಾಮುಲು, ರೇಣುಕಾಚಾರ್ಯ ಮುಂತಾದವರು ಶಿವಕುಮಾರ್‌ ಬಳಿ ತೆರಳಿ ಅಭಿನಂದಿಸಿದರು.

ಮೊಗಸಾಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌, ಎಂ.ಬಿ.ಪಾಟೀಲ, ಎಚ್‌.ಕೆ.ಪಾಟೀಲ ಮುಂತಾದವರು ಅಭಿನಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು