ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಮೊದಲೇ ನೋಂದಣಿ ಮಾಡಿಕೊಂಡವರಿಗೆ ಚಿಕಿತ್ಸೆ ನೀಡಿದ ವೈದ್ಯರು
Last Updated 31 ಜುಲೈ 2019, 19:37 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರಚಿಸುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ದೇಶದಾದ್ಯಂತ ಕರೆ ನೀಡಿದ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವೈದ್ಯರು ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲಖಾಸಗಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಬುಧವಾರ ಬೆಳಿಗ್ಗೆ 6ಗಂಟೆಯಿಂದ ಗುರುವಾರ ಬೆಳಿಗ್ಗೆ 6 ಗಂಟೆವರೆಗೆ ತುರ್ತುಸೇವೆಗಳನ್ನು ಹೊರತುಪಡಿಸಿಒಪಿಡಿ ಸೇರಿದಂತೆ ಉಳಿದ ಸೇವೆಗಳನ್ನು ಸ್ಥಗಿತ ಮಾಡುವಂತೆ ಐಎಂಎ ಕರೆ ನೀಡಿತ್ತು. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಪರಿಣಾಮ ವೈದ್ಯರು ಎಂದಿನಂತೆ ಸೇವೆಗೆ ಹಾಜರಾಗಿದ್ದರು.

ಬೆಂಗಳೂರಿನಲ್ಲಿ ಕಿಮ್ಸ್, ಮಣಿಪಾಲ್, ಸುಗುಣಾ, ಫೋರ್ಟಿಸ್, ನಾರಾಯಣ, ರಾಮಯ್ಯ, ಅಪೊಲೊ, ಕೊಲಂಬಿಯಾ ಏಷ್ಯಾ, ವಿಕ್ರಂ ಸೇರಿದಂತೆ ವಿವಿಧ ಆಸ್ಪತ್ರೆಯಲ್ಲಿ ಮುಂಗಡವಾಗಿ ಬುಕಿಂಗ್ ಮಾಡಿಕೊಂಡಿದ್ದ ಹೊರರೋಗಿಗಳಿಗೆ ಸೇವೆ ನೀಡಲಾಯಿತು. ಬೃಂದಾವನ ಸೇರಿದಂತೆ ಕೆಲ ಆಸ್ಪತ್ರೆಗಳಲ್ಲಿ ಮಾತ್ರ ಹೊರರೋಗಿ ವಿಭಾಗವನ್ನು ಬಂದ್ ಮಾಡಲಾಗಿತ್ತು.

ಖಾಸಗಿ ಆಸ್ಪತ್ರೆ ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡು, ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿತ್ತು. ಇದರಿಂದಾಗಿ ವಿಕ್ಟೋರಿಯಾ, ಕೆ.ಸಿ. ಜನರಲ್, ಜಯನಗರ ಸರ್ಕಾರಿ ಆಸ್ಪತ್ರೆ, ವಾಣಿವಿಲಾಸ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿದ್ದರೂ ವೈದ್ಯಕೀಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಕಂಡುಬರಲಿಲ್ಲ.

‘ಐಎಂಎ ಕೇಂದ್ರ ಕಚೇರಿಯಿಂದ ಮಂಗಳವಾರ ಸಂಜೆ ಮುಷ್ಕರಕ್ಕೆ ಸೂಚನೆ ಬಂದಿತು. ಇದರಿಂದಾಗಿ ಖಾಸಗಿ ಆಸ್ಪತ್ರೆಗಳ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಗಡವಾಗಿ ನೋಂದಣಿ ಮಾಡಿಕೊಂಡಿದ್ದ ರೋಗಿಗಳಿಗೆ ಮಧ್ಯಾಹ್ನದವರೆಗೂ ವೈದ್ಯಕೀಯ ಸೇವೆ ನೀಡಲಾಗಿದೆ. ದೂರದ ಊರುಗಳಿಂದ ಬರುವ ರೋಗಿಗಳಿಗೆ ತೊಂದರೆ ಆಗಕೂಡದು ಎನ್ನುವುದು ನಮ್ಮ ಆಶಯ’ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‍ಗಳ ಒಕ್ಕೂಟದ (ಪಾನ) ಅಧ್ಯಕ್ಷ ಡಾ.ಆರ್. ರವೀಂದ್ರ ತಿಳಿಸಿದರು.

ಐಎಂಎ ಕಚೇರಿ ಮುಂದೆ ಪ್ರತಿಭಟನೆ: ನಗರದ ಐಎಂಎ ಕಚೇರಿಯ ಮುಂಭಾಗ‌ ರಾಜ್ಯ ಶಾಖೆ ಕಾರ್ಯದರ್ಶಿ ಡಾ.ಎಸ್. ಶ್ರೀನಿವಾಸ್ ಅವರ ನೇತೃತ್ವದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಎನ್‌ಎಂಸಿ ವಿರುದ್ಧ ಪ್ರತಿಭಟನೆ ನಡೆಸಿದರು. ‘ಗ್ರಾಮೀಣ ಭಾಗದಲ್ಲಿ ವೈದ್ಯರು ಸಿಗುತ್ತಿಲ್ಲ ಎಂಬ ಕಾರಣ ನೀಡಿ, ಎನ್‌ಎಂಸಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ನಮ್ಮ ವೈದ್ಯರಿಗೆ ಉತ್ತಮ ವೇತನ ಹಾಗೂ ಸೌಲಭ್ಯ ನೀಡಿದಲ್ಲಿ ಗ್ರಾಮೀಣ ಭಾಗಕ್ಕೆ ಹೋಗುತ್ತಾರೆ. ಈ ಮಸೂದೆ ಮೂಲಕ ವೈದ್ಯರು, ಆಸ್ಪತ್ರೆ ಹಾಗೂ ವಿದ್ಯಾರ್ಥಿಗಳನ್ನು ನಿಯಂತ್ರಣದಲ್ಲಿಡಲುಕೇಂದ್ರ ಸರ್ಕಾರ ಮುಂದಾಗಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT