ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ರಿಯ ರಾಜಕಾರಣ ಪ್ರವೇಶಿಸಲ್ಲ: ಪ್ರಕಾಶ್‌ ರೈ

ಪತ್ರಕರ್ತರೊಂದಿಗೆ ಸಂವಾದದಲ್ಲಿ ಮಾತನಾಡಿದ ನಟ
Last Updated 4 ಮೇ 2018, 9:42 IST
ಅಕ್ಷರ ಗಾತ್ರ

ಹಾಸನ: ಸಕ್ರಿಯ ರಾಜಕಾರಣ ಪ್ರವೇಶ ಮಾಡದೇ ಜನರ ಧ್ವನಿಯಾಗಿ ಕೆಲಸ ಮಾಡುವೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.

ಪತ್ರಕರ್ತರೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ‘ರಾಜಕೀಯ ಪ್ರವೇಶ ಮಾಡುವ ಬಗ್ಗೆ ಹಲವರಿಗೆ ಅನುಮಾನ ಇದೆ. ಬಹಳಷ್ಟು ನಟರು ಬಂದು ಹೋಗಿದ್ದಾರೆ. ಕೆಲವರು ಆಸೆ, ಸಿದ್ಧಾಂತ ಹೇಳಿ ಕೈ ಕೊಟ್ಟಿದ್ದಾರೆ. ಮುಂದೊಂದು ದಿನ ನನ್ನನ್ನು ಯಾರಾದರೂ ಕೊಂಡುಕೊಳ್ಳಬಹುದು. ಜವಾಬ್ದಾರಿಯುತ ಪ್ರಜೆಯಾಗಿ ನನ್ನ ಕೆಲಸ ಮಾಡುವೆ’ ಎಂದು ಉತ್ತರಿಸಿದರು.

ಚುನಾವಣೆಗೂ ಮುನ್ನ ಬಿಜೆಪಿ ನೀಡಿದ ಭರವಸೆಗಳು ಯಾವುದು ಈಡೇರಿಲ್ಲ. ಇದನ್ನು ಪ್ರಶ್ನಿಸಿದವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಅವಧಿಯಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಏನೂ ಮಾಡಿಲ್ಲ ಎಂದು ಬಿಜೆಪಿಯವರು ಅಭಿವೃದ್ಧಿ ಮಾಡದಿದ್ದರೇ ಹೇಗೆ ಎಂದು ಪ್ರಶ್ನಿಸಿದರು.

ಪ್ರಶ್ನೆ ಮಾಡುವ ಹಕ್ಕನ್ನು ದಮನ ಮಾಡುವ ಪ್ರವೃತ್ತಿ ಉಳ್ಳ ಬಿಜೆಪಿ ಬದಲಿಗೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಅಥವಾ ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸಿ. ಬಿಜೆಪಿ ನಾಯಕರಿಗೆ ಯಾವುದೇ ಸಿದ್ಧಾಂತ ಇಲ್ಲ. ಅವರು ದೇಶಕ್ಕಾಗಿ, ಜನರಿಗಾಗಿ ಕೆಲಸ ಮಾಡುವುದಿಲ್ಲ. ಇನ್ನೊಬ್ಬರ ಸಿದ್ಧಾಂತವನ್ನು ನಮ್ಮ ಮೇಲೆ ಹೇರುವ ಆತಂಕಕಾರಿ ಕೆಲಸವನ್ನು ಆ ಪಕ್ಷ ಮಾಡುತ್ತಿದೆ ಎಂದು ಹರಿಹಾಯ್ದರು.

ಸಂಸದ ಪ್ರತಾಪ್ ಸಿಂಹ ಅವರ ನಡೆಗೆ ಕಿಡಿಕಾರಿದ ರೈ, ‘ನನ್ನಂತೆಯೇ ರಾಜಕುಮಾರ್, ವಿಷ್ಣುವರ್ಧನ್, ರಜನಿಕಾಂತ್ ಸೇರಿದಂತೆ ಅನೇಕರಿಗೆ ಎರಡೆರಡು ಹೆಸರುಗಳಿವೆ. ಅವರನ್ನೂ ಇವರು ಕೇಳುತ್ತಾರಾ?’ ಎಂದು ಪ್ರಶ್ನಿಸಿದ ಅವರು, ‘ಸಂಸದರಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಜನರ ಆಗು–ಹೋಗುಗಳಿಗೆ ಮೊದಲು ಸ್ಪಂದಿಸುವುದನ್ನು ಬಿಟ್ಟು ಟ್ವೀಟ್‌ನಲ್ಲೇ ಕಾಲಹರಣ ಮಾಡುವುದು ಬೇಡ’ ಎಂದು ತಿರುಗೇಟು ನೀಡಿದರು.

ಪ್ರಶ್ನಿಸುವ ಮನೋಭಾವ ಲಂಕೇಶ್‌ ಅವರಿಂದ ನನಗೆ ಬಂದಿದ್ದು. ‘just aSking’ ಎಂಬ ಸಂಸ್ಥೆ ಆರಂಭಿಸಿದ್ದೇನೆ. ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲು ಮೂರು ಸಾವಿರ ಜನರನ್ನು ಒಳಗೊಂಡ ತಂಡ ರಚಿಸುತ್ತಿದ್ದೇನೆ. ಇದು ನಿರಂತರವಾಗಿ ನಡೆಯಲಿದೆ ಎಂದರು.

‘ಧರ್ಮ ರಾಜಕೀಯದಿಂದ ದೂರ ಇರಲಿ’

‘ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ಪಕ್ಷವನ್ನೂ ಟೀಕಿಸದೇ ಸುಮ್ಮನಿರುವುದಿಲ್ಲ. ಒಂದು ಕೋಮಿನವರು ಅಥವಾ ಧರ್ಮದವರು ಮಾತ್ರ ಶ್ರೇಷ್ಠ ಎಂಬ ಮಾತನ್ನು ಒಪ್ಪುವುದಿಲ್ಲ. ಎಲ್ಲದಕ್ಕಿಂತ ಮನುಷ್ಯ ಧರ್ಮ ಮುಖ್ಯ. ಧರ್ಮವನ್ನು ರಾಜಕೀಯದಿಂದ ದೂರ ಇಡಬೇಕು ಎಂದರೆ ಹಿಂದೂ ಧರ್ಮ ವಿರೋಧಿ ಎಂಬ ಹಣೆಪಟ್ಟಿ ಕಟ್ಟುತ್ತಾರೆ. ವೈಯಕ್ತಿಕ ವಿಚಾರದ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಕ್ರೈಸ್ತ ಧರ್ಮದವರು ಮತಾಂತರ ಮಾಡಿದರೆ ಅದು ತಪ್ಪು. ಧರ್ಮ ಅವರ ಮನೆಯಲ್ಲಿರಬೇಕು. ಹಾಗೆಂದ ಮಾತ್ರಕ್ಕೆ ನಾನು ಐಸಿಸ್‌ ಬೆಂಬಲಿಸುತ್ತಿಲ್ಲ’ ಎಂದು ಪ್ರಕಾಶ್‌ ರೈ ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT