ಬೆಂಗಳೂರು: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ದೇಶವ್ಯಾಪಿ ಮುಷ್ಕರ ಕರೆಗೆ ಸ್ಪಂದಿಸಿ, ನಗರದ ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲೂ ಹೊರ ರೋಗಿ ವಿಭಾಗಗಳ (ಒಪಿಡಿ) ಸೇವೆ ಬಂದ್ ಮಾಡಿ ಪ್ರತಿಭಟಿಸಲಾಯಿತು.
ಮುಷ್ಕರ ನಗರದಲ್ಲಿ ಯಶಸ್ವಿಯಾಗಿದ್ದು, ಇದರಿಂದ ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಾಯಿತು. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆ ಖಾಸಗಿ ಆಸ್ಪತ್ರೆಗಳ ಒಪಿಡಿ ಸಂಪೂರ್ಣ ಬಂದಾಗಿದ್ದವು.
ಕೋಲ್ಕತ್ತದಲ್ಲಿ ನಡೆದಿದ್ದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಐಎಂಎ ಮುಷ್ಕರಕ್ಕೆ ಕರೆ ನೀಡಿತ್ತು.
ವಿಕ್ಟೋರಿಯಾ, ಕೆ.ಸಿ.ಜನರಲ್, ಜಯನಗರ ಸಾರ್ವಜನಿಕ ಆಸ್ಪತ್ರೆ ಸೇರಿ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಒಪಿಡಿ ಸೇವೆ ಇರಲಿಲ್ಲ. ಆಸ್ಪತ್ರೆಗಳಿಗೆ ಬಂದಿದ್ದವರು ‘ಒಪಿಡಿ ಬಂದ್’ ಎಂಬ ಫಲಕಗಳನ್ನು ಹಾಕಿದ್ದರೂ ಆಸ್ಪತ್ರೆಗಳ ಆವರಣದಲ್ಲಿಯೇ ಮಧ್ಯಾಹ್ನದವರೆಗೂ ಕಾದು ಮನೆಗೆ ತೆರಳಿದರು. ಹೊರರೋಗಿ ವಿಭಾಗ ಹೊರತುಪಡಿಸಿ ಉಳಿದ ಸೇವೆಗಳಲ್ಲಿ ವ್ಯತ್ಯಯವಾಗಲಿಲ್ಲ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ‘ತುರ್ತು ಸೇವೆಗಳು ಮಾತ್ರ ಲಭ್ಯ’ ಎಂಬ ಫಲಕಕಂಡುಬಂತು. ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಕಪ್ಪುಪಟ್ಟಿ ಧರಿಸಿ, ಆಸ್ಪತ್ರೆ ಮುಂದೆ ಪ್ರತಿಭಟಿಸಿದರು. ಈ ವೇಳೆ ಚಿಕಿತ್ಸೆಗಾಗಿ ವಿವಿಧೆಡೆಯಿಂದ ಬಂದಿದ್ದ ರೋಗಿಗಳು ಆಸ್ಪತ್ರೆಯ ಆವರಣದಲ್ಲಿಯೇ ಕೆಲ ಗಂಟೆಗಳು ಕಾದರು. ಅವರಿಗೆ ವೈದ್ಯರಿಲ್ಲದ ಕಾರಣ ನಾಳೆ ಬರುವಂತೆ ಆಸ್ಪತ್ರೆ ಸಿಬ್ಬಂದಿ ಸೂಚಿದರು.
‘ಡಯಾಲಿಸಿಸ್‌ಗಾಗಿ ಬಂದಿದ್ದೇನೆ. ಮುಷ್ಕರದ ಬಗ್ಗೆ ತಿಳಿದಿರಲಿಲ್ಲ. ನಾಳೆ ಬರಲು ಸೂಚಿಸುತ್ತಿದ್ದಾರೆ. ಸಮಸ್ಯೆಯಾಗುತ್ತಿದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಗೆ ಚಿಕ್ಕಬಾಣಾವರದಿಂದ ಬಂದಿದ್ದ ರೋಗಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಕೆ.ಸಿ.ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದ ಗರ್ಭಿಣಿಯೊಬ್ಬರು ಪರದಾಟ ನಡೆಸಿದರು. ರಕ್ತಸ್ರಾವದ ಕಾರಣ ಲಗ್ಗೆರೆ ಸರ್ಕಾರಿ ಆಸ್ಪತ್ರೆಗೆ ತೆರಳಿ, ಅಲ್ಲಿ ಚಿಕಿತ್ಸೆ ಸಿಗದಿದ್ದರಿಂದ ಅವರು ತಾಯಿಯೊಂದಿಗೆ ಕೆ.ಸಿ.ಜನರಲ್ ಆಸ್ಪತ್ರೆಗೆ ಬಂದಿದ್ದರು.
‘ಮಗಳು ಎಂಟು ತಿಂಗಳ ಗರ್ಭಿಣಿ. ರಕ್ತಸ್ರಾವದ ಕಾರಣ ಬಂದಿದ್ದೇವೆ. ಮುಷ್ಕರದ ಮಾಹಿತಿ ಇರಲಿಲ್ಲ. ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ದೂರವಾಣಿ ಕರೆ ಮಾಡಿದ್ದು, ಆಸ್ಪತ್ರೆಗೆ ಬರುವುದಾಗಿ ತಿಳಿಸಿದ್ದಾರೆ. ಕಾಯುತ್ತಿದ್ದೇವೆ’ ಎಂದು ಮಹಿಳೆಯೊಬ್ಬರು ತಿಳಿಸಿದರು.
ಕಿಮ್ಸ್, ಅಪೋಲೊ, ಮಣಿಪಾಲ್, ವೈದೇಹಿ, ಮಲ್ಲಿಗೆ, ಸುಗುಣ, ಫೋರ್ಟಿಸ್, ನಾರಾಯಣ ಹೆಲ್ತ್, ಆಸ್ಪರ್ ಸೇರಿದಂತೆ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿಯೂ ಒಪಿಡಿ ಸೇವೆಯು ಜತೆಗೆ ಕ್ಲಿನಿಕ್‌ಗಳು ಬಂದ್ ಆಗಿದ್ದವು. ಇಎಸ್‌ಐ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ರಾಜಾಜಿನಗರದ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದರು.
ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಆವರಣಲ್ಲಿ ವೈದ್ಯರು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿ 1,500 ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಕರ್ತವ್ಯನಿರತ ವೈದ್ಯರಿಗೆ ಸುರಕ್ಷತೆಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ (ಕೆಎಆರ್‌ಡಿ) ನೇತೃತ್ವದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದ ಬಳಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಮೊಂಬತ್ತಿ ಹಿಡಿದು ಪ್ರತಿಭಟಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.