ಭಾನುವಾರ, ನವೆಂಬರ್ 17, 2019
23 °C
ಮಧ್ಯಾಹ್ನದ ಬಳಿಕ ಆರಂಭವಾದ ಒಪಿಡಿ ಸೇವೆ l 800ಕ್ಕೂ ಅಧಿಕ ವೈದ್ಯರಿಂದ ಪ್ರಧಾನಿಗೆ ಪತ್ರ

ಸಿಹಿ ಹಂಚಿ ಕಿರಿಯ ವೈದ್ಯರ ವಿಜಯೋತ್ಸವ

Published:
Updated:
Prajavani

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ಕಾರ್ಯಕರ್ತರನ್ನು ಬಂಧಿಸುವ ಜತೆಗೆ ಆಸ್ಪತ್ರೆಗಳಲ್ಲಿ ಸುರಕ್ಷತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟ ಕಿರಿಯ ವೈದ್ಯರು, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ‘ನಿರಂತರ ಹೋರಾಟದ ಫಲ ಈ ಜಯ ಸಿಕ್ಕಿದೆ’ ಎಂದು ವಿಜಯೋತ್ಸವ ಆಚರಿಸಿದರು. 

ಬೆಳಿಗ್ಗೆಯೇ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರೂ ಕೂಡಾ ಕಿರಿಯ ವೈದ್ಯರು ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆಯನ್ನು ಮುಂದುವರಿಸಿ, ‘ಆಸ್ಪತ್ರೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು’ ಎಂದು ಒತ್ತಾಯಸಿದರು. ‘ವೈದ್ಯರಿಗೆ ಸೇವೆ ಸಲ್ಲಿಸಲು ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು’ ಎಂದು 800ಕ್ಕೂ ಅಧಿಕ ಮಂದಿ ಪ್ರಧಾನಿಗೆ ಪತ್ರ ಬರೆದರು. ಕಿರಿಯ ವೈದ್ಯ ಸಂಘದ ಅಧ್ಯಕ್ಷ ಎಲ್.ಎನ್.ರೆಡ್ಡಿ ಪ್ರತಿಭಟನೆಯನ್ನು ಅಂತ್ಯಗೊಳಿಸಿರುವುದಾಗಿ ಮಧ್ಯಾಹ್ನ 3 ಗಂಟೆಗೆ ಘೋಷಿಸಿದರು. 

‘ಕಿರಿಯ ವೈದ್ಯರ ಬಹುತೇಕ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ, ವೈದ್ಯರ ರಕ್ಷಣೆಗೆ ವಿಶೇಷ ರಕ್ಷಣಾ ಪಡೆಯ ನೇಮಕ ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತದೆ’ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಡೀನ್ ಡಾ. ಜಯಂತಿ ತಿಳಿಸಿದರು. 

ಒಪಿಡಿ ಬಂದ್ ವಾಪಸ್: ಕಿರಿಯ ವೈದ್ಯರು ಪ್ರತಿಭಟನೆ ಕೈಬಿಡುತ್ತಿದ್ದಂತೆಯೇ ಐಎಂಎ ಕೂಡಾ ಒಪಿಡಿ ಬಂದ್‌ಗೆ ನೀಡಿದ್ದ ಕರೆಯನ್ನು ವಾಪಸ್ ಪಡೆಯಿತು. ಮಧ್ಯಾಹ್ನದವರೆಗೆ ಕೆಲವೆಡೆ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. 

24 ಗಂಟೆ ಒಪಿಡಿ ಬಂದ್‌ಗೆ ಐಎಂಎ ಕರೆ ನೀಡಿದ್ದರಿಂದ ನಾರಾಯಣ ಹೆಲ್ತ್, ರಂಗದೊರೆ, ಮಲ್ಯ, ಫೋರ್ಟಿಸ್, ಬೃಂದಾವನ, ಸುಗುಣಾ, ಅಪೋಲೊ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳ ಒಪಿಡಿ ಬೆಳಿಗ್ಗೆ ಕೆಲ ಗಂಟೆಗಳು ಬಂದ್ ಆಗಿದ್ದವು. ಒಳರೋಗಿಗಳಿಗೆ ಆರೋಗ್ಯ ಸೇವೆ ಹಾಗೂ ತುರ್ತು ಚಿಕಿತ್ಸೆ ಎಂದಿನಂತೆ ನಡೆಯಿತು. ಕೆಲ ಹೊರ ರೋಗಿಗಳು ಮಾಹಿತಿ ಕೊರತೆಯಿಂದ ಬೆಳಿಗ್ಗೆ ಆಸ್ಪತ್ರೆಗೆ ಬಂದು ವಾಪಸ್ ಆದರು. ಮಧ್ಯಾಹ್ನದ ಬಳಿಕ ಒಪಿಡಿ ಕಾರ್ಯಾರಂಭಿಸಿದರೂ ರೋಗಿಗಳ ಸಂಖ್ಯೆ ಕಡಿಮೆಯಿತ್ತು. 

ಕಿಮ್ಸ್‌ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಎಂದಿನಂತೆ ಕಾರ್ಯನಿರ್ವಹಿಸಿತು.

‘ನನ್ನ ಕಣ್ಣನ್ನು ಕಿತ್ತುಕೊಂಡಿದ್ದಾರೆ’
‘ನನಗೆ ಈಗ ಒಂದು ಕಣ್ಣು ಕಾಣಿಸುತ್ತಿಲ್ಲ. ನಾನೊಬ್ಬ ಅಮಾಯಕನಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆಯಲ್ಲಿ ಲೋಪ ಎಸಗುವ ಮೂಲಕ ನನ್ನ ಕಣ್ಣನ್ನು ಕಿತ್ತುಕೊಂಡಿದ್ದಾರೆ. ಇದೀಗ ನನಗೆ ಪರಿಹಾರ ಒದಗಿಸಿಕೊಡಿ’ ಎಂದು ಮೈಸೂರಿನ ವೆಂಕಟಾಚಲಪತಿ ಎಂಬುವರು ಮಿಂಟೊ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

‘ಕಣ್ಣಿನ ಪೊರೆ ತೆಗೆಸಲು ಒಂದು ವರ್ಷದ ಹಿಂದೆ ಶಸ್ತ್ರಚಿಕಿತ್ಸೆಗೆ ಮಿಂಟೊ ಆಸ್ಪತ್ರೆಗೆ ಬಂದಿದ್ದೆ. ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಮಾಡಿದ ಎಡವಟ್ಟಿನಿಂದ ಬಲಗಣ್ಣಿನ ದೃಷ್ಟಿ ಶಾಶ್ವತವಾಗಿ ಹೋಗಿದೆ. ಈ ನೋವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ಆಗಿರಲಿಲ್ಲ. ಯಾವುದೇ ಕಾರಣಕ್ಕೂ ಸಾಮಾನ್ಯ ಜನರ ಜತೆಗೆ ಆಟವಾಡಬೇಡಿ’ ಎಂದು ಮನವಿ ಮಾಡಿದರು. 

ಪ್ರತಿಕ್ರಿಯಿಸಿ (+)