ಸೋಮವಾರ, ನವೆಂಬರ್ 18, 2019
27 °C
ಕರವೇ ಕ್ಷಮೆಗೆ ಆಗ್ರಹ

ರಾಜ್ಯದಾದ್ಯಂತ ಶುಕ್ರವಾರ ಒಪಿಡಿ ಬಂದ್: ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ

Published:
Updated:
Prajavani

ಬೆಂಗಳೂರು: ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಶುಕ್ರವಾರ (ನ.8) ರಾಜ್ಯದಾದ್ಯಂತ ಆಸ್ಪತ್ರೆಗಳ ಹೊರರೋಗಿ ವಿಭಾಗವನ್ನು (ಒಪಿಡಿ) ಬಂದ್‌ ಮಾಡಿ ಪ್ರತಿಭಟಿಸಲು ವೈದ್ಯರು ಮುಂದಾಗಿದ್ದಾರೆ.

‘ಹಲ್ಲೆ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಕ್ಷಮೆಯಾಚಿಸಬೇಕು ಹಾಗೂ ಅವರ ವಿರುದ್ಧ ಕಾನೂನಿನ ಅಡಿಯಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ನಾಲ್ಕು ದಿನ ಪೂರೈಸಿತು. ಮಿಂಟೊ ಕಣ್ಣಿನ ಆಸ್ಪತ್ರೆ, ವಿಕ್ಟೋರಿಯಾ, ವಾಣಿವಿಲಾಸ ಸೇರಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿಯಲ್ಲಿ ಬರುವ ಆಸ್ಪತ್ರೆಗಳ ಕಿರಿಯ ವೈದ್ಯರು ಕರ್ತವ್ಯಕ್ಕೆ ಹಾಜರಾಗದ ಪರಿಣಾಮ ಚಿಕಿತ್ಸೆಯಲ್ಲಿ ವ್ಯತ್ಯಯ ಉಂಟಾಯಿತು. 

ಪ್ರತಿಭಟನೆಗೆ ಭಾರತೀಯ ವೈದ್ಯ ಕೀಯ ಸಂಘವು (ಐಎಂಎ) ಬೆಂಬಲ ಸೂಚಿಸಿದ್ದು, ಬುಧವಾರ ಹಾಗೂ ಗುರುವಾರ ಆಸ್ಪತ್ರೆಗಳಲ್ಲಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಹಲ್ಲೆಯ ವಿರುದ್ಧ ಪ್ರತಿಭಟಿಸಲಿದ್ದಾರೆ. ‘ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅಹೋರಾತ್ರಿ ಪ್ರತಿಭಟನೆಯನ್ನು ಕೈಗೊಳ್ಳುವ ಜತೆಗೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು’ ಎಂದು ಕಿರಿಯ ವೈದ್ಯರು ಎಚ್ಚರಿಸಿದ್ದಾರೆ. 

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಐಎಂಎ ರಾಜ್ಯ ಶಾಖೆ ಕಾರ್ಯದರ್ಶಿ ಡಾ.ಎಸ್.ಶ್ರೀನಿವಾಸ್, ‘ಏಕಾಏಕಿ ಒಪಿಡಿ ಸೇವೆಯನ್ನು ಬಂದ್ ಮಾಡಿದಲ್ಲಿ ರೋಗಿಗಳಿಗೆ ಸಮಸ್ಯೆ ಆಗಲಿದೆ. ಹಾಗಾಗಿ ಎರಡು ದಿನ ಸಮಯಾವಕಾಶ ನೀಡುತ್ತಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಕಾನೂನಿನ ಅಡಿ ಕ್ರಮ ಜಾರಿಗೊಳಿಸದಿದ್ದಲ್ಲಿ ಶುಕ್ರವಾರ ರಾಜ್ಯದ ಎಲ್ಲ ಆಸ್ಪತ್ರೆಗಳ ಒಪಿಡಿಯನ್ನು ಬೆಳಿಗ್ಗೆ 6ರಿಂದ ಸಂಜೆ 6ಗಂಟೆವರೆಗೆ ಸಂಪೂರ್ಣವಾಗಿ ಬಂದ್‌ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು. 

‘ಹಲ್ಲೆ ಮಾಡಿದವರನ್ನು ಬಂಧಿಸುವವರೆಗೂ ಪ್ರತಿಭಟನೆ ನಡೆಸಲಾಗುವುದು. ಕಾನೂನಿನ ಅಡಿಯಲ್ಲಿ ಕ್ರಮ ಜಾರಿಗೊಳಿಸದಿದ್ದಲ್ಲಿ ಅಹೋರಾತ್ರಿ ಪ್ರತಿಭಟನೆ ಕೈಗೊಳ್ಳಲು ತಿರ್ಮಾನಿಸಿದ್ದೇವೆ. ಅದೇ ರೀತಿ, ಉಪವಾಸವನ್ನೂ ನಡೆಸಲಾಗುತ್ತದೆ’ ಎಂದು ಪ್ರತಿಭಟನಾನಿರತ ವೈದ್ಯ ಡಾ. ವೈಶಾಖ್ ತಿಳಿಸಿದರು.

ರಸಪ್ರಶ್ನೆ ನಡೆಸಿದ ಪ್ರತಿಭಟನಾಕಾರರು: ವಿಕ್ಟೋರಿಯಾ ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದ ಕಿರಿಯ ವೈದ್ಯರು ಕೆಲಹೊತ್ತು ಕ್ವಿಜ್‌ ನಡೆಸಿ, ಸಮಯ ಕಳೆದರು. ಆಸ್ಪತ್ರೆ ಪ್ರಾರಂಭವಾದ ವರ್ಷ, ಜಿಲ್ಲೆಗಳ ವಿಶೇಷ ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಕೇಳಲಾಯಿತು. ಪ್ರತಿಭಟನಾಕಾರರು ಹಲ್ಲೆಯನ್ನು ಖಂಡಿಸಿ, ಫಲಕಗಳನ್ನು ಪ್ರದರ್ಶಿಸುವ ಜತೆಗೆ ನ್ಯಾಯ ಒದಗಿಸುವಂತೆ ಘೋಷಣೆಗಳನ್ನು ಕೂಗಿದರು. ಕಿರಿಯ ವೈದ್ಯರ ಪೋಷಕರು ಕೂಡಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತುರ್ತು ಚಿಕಿತ್ಸೆಗಳು ಎಂದಿನಂತೆ ದೊರೆತರೂ ಹೊರರೋಗಿ ವಿಭಾಗದಲ್ಲಿ ಕೆಲಹೊತ್ತು ರೋಗಿಗಳು ಕಾಯುತ್ತಿರುವ ದೃಶ್ಯ ಕಂಡುಬಂದಿತು. ಪ್ರತಿಭಟನಾಕಾರರು ಸಂಜೆ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಜಾಥಾ ನಡೆಸಿದರು. 

ಕೈಗಾರಿಕಾ ಭದ್ರತಾ ಪಡೆ ಚಿಂತನೆ
ಮಿಂಟೋ ಆಸ್ಪತ್ರೆಯ ಸಮಸ್ಯೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ. ವೈದ್ಯರ ಮುಷ್ಕರ ನಿಲ್ಲಿಸುವುದಕ್ಕೆ ಸಂಬಂಧಿಸಿದಂತೆ ತಕ್ಷಣವೇ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ವೈದ್ಯ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿರುವ ಕೆಲವು ವೈದ್ಯರು ಈ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

‘ವೈದ್ಯರ ನಿರ್ಲಕ್ಷ್ಯದಿಂದ ಹಲವರು ಕಣ್ಣು ಕಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಒಂದು ಮರ ಉರುಳಿದರೆ ಜನ ಸುಮ್ಮನಿರುವುದಿಲ್ಲ. ಹಲವರು ಕಣ್ಣುಗಳನ್ನು ಕಳೆದುಕೊಂಡಿರುವುದನ್ನು ಹೇಗೆ ಸಹಿಸಲು ಸಾಧ್ಯ. ಇವರಿಗೂ ನ್ಯಾಯ ಕೊಡಿಸಬೇಕು. ವೈದ್ಯರ ಮೇಲೆ ಹಲ್ಲೆ ನಡೆಸಿದವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು. ಇಬ್ಬರಿಗೂ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ’ ಎಂದರು.

ರಾಜ್ಯದ ಎಲ್ಲ ಪ್ರಮುಖ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಬಿಗಿ ಭದ್ರತೆ ನೀಡಲು ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸುವ ಚಿಂತನೆ ಇದೆ. ತುರ್ತು ಸಂದರ್ಭಗಳನ್ನು ನಿಭಾಯಿಸಲು ಇಂತಹ ಪಡೆಗಳ ಅಗತ್ಯವಿದೆ. ಯಾವುದೇ ಅಹಿತಕರ ಘಟನೆ ನಡೆದರೆ ತಕ್ಷಣವೇ ಸ್ಥಳಕ್ಕೆ ಧಾವಿಸಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)