ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟು ಬಿಡದ ಕಿರಿಯ ವೈದ್ಯರು ಹೈರಾಣಾದ ರೋಗಿಗಳು

ರಕ್ತದಾನ ಮಾಡಿ ಪ್ರತಿಭಟನೆ
Last Updated 6 ನವೆಂಬರ್ 2019, 21:51 IST
ಅಕ್ಷರ ಗಾತ್ರ

ಬೆಂಗಳೂರು:ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಕೊಳೆ ಮೆತ್ತಿದ ಬಿಳಿ ಬಣ್ಣದ ಕೋಟ್‌ ಪ್ರದರ್ಶಿಸಿ ಪ್ರತಿಭಟಿಸಿದರು. ಇದರಿಂದಾಗಿ ಹೊರರೋಗಿಗಳ ಚಿಕಿತ್ಸಾ ಸೌಲಭ್ಯದಲ್ಲಿ (ಒಪಿಡಿ) ವ್ಯತ್ಯಯ ಉಂಟಾಗಿ, ರೋಗಿಗಳು ಚಿಕಿತ್ಸೆಗೆ ಪರದಾಟ ನಡೆಸಿದರು.

‘ಹಲ್ಲೆ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಕ್ಷಮೆ ಯಾಚಿಸಬೇಕು ಹಾಗೂ ಅವರ ವಿರುದ್ಧ ಕಾನೂನಿನ ಅಡಿಯಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಬುಧವಾರ ಐದು ದಿನ ಪೂರೈಸಿತು. ಮಿಂಟೊ ಕಣ್ಣಿನ ಆಸ್ಪತ್ರೆ, ವಿಕ್ಟೋರಿಯಾ, ವಾಣಿವಿಲಾಸ ಸೇರಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿಯಲ್ಲಿ ಬರುವ ಆಸ್ಪತ್ರೆಗಳ ಕಿರಿಯ ವೈದ್ಯರು ಪ್ರತಿಭಟನೆ ತೀವ್ರಗೊಳಿಸಿದರು.

ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹಾಗೂ ನಿವೃತ್ತ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕಿರಿಯ ವೈದ್ಯರ ಸಂಘದ ಪದಾಧಿಕಾರಿಗಳ ಜತೆಗೆ ಸಭೆ ನಡೆಸಿ, ಮನವೊಲಿಕೆಗೆ ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ. ಸಂಜೆಬಿಎಂಸಿಆರ್‌ಐ ಡೀನ್ ಡಾ. ಸತೀಶ್ ಕೂಡ ಸಭೆ ನಡೆಸಿದರು.

ಕ್ರಮ ಕೈಗೊಳ್ಳುವ ಭರವಸೆ:‘ಕರವೇ ಕಾರ್ಯಕರ್ತರ ವಿರುದ್ಧ ಸಿಆರ್‌ಪಿಸಿ 107ರ ಪ್ರಕಾರ ಹಾಗೂ 114ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ, ದೃಷ್ಟಿ ಕಳೆದುಕೊಂಡಿರುವವರು ನೀಡಿರುವ ದೂರನ್ನೂ ಪರಿಗಣಿಸಲಾ
ಗುವುದು’ ಎಂದು ಭಾಸ್ಕರ್‌ ರಾವ್‌ ತಿಳಿಸಿದರು.

ಪ್ರತಿಭಟನಾನಿರತ ಕಿರಿಯ ವೈದ್ಯರ ಪೈಕಿ 40ಕ್ಕೂ ಹೆಚ್ಚು ಮಂದಿ ವಿಕ್ಟೋರಿಯಾ ಆಸ್ಪತ್ರೆಯ ಆವರಣ
ದಲ್ಲಿರಕ್ತದಾನವನ್ನು ಮಾಡಿದರು. 15ಕ್ಕೂ ಅಧಿಕ ಕಿರಿಯ ವೈದ್ಯರು ಕಣ್ಣುಗಳ ದಾನದ ಪ್ರತಿಜ್ಞೆ ಕೈಗೊಂಡರು.

‘ಗುರುವಾರವೂ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ’ ಎಂದು ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ.ಎಲ್.ಎನ್. ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT