ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಮುಖ್ಯಮಂತ್ರಿ ಸಂಧಾನ ವಿಫಲ l ವೈದರ ಕೊರತೆ; ರೋಗಿಗಳಿಗೆ ತೊಂದರೆ

ಕಿರಿಯ ವೈದ್ಯರ ಪ್ರತಿಭಟನೆ ಮುಂದುವರಿಕೆ
Last Updated 4 ನವೆಂಬರ್ 2019, 19:01 IST
ಅಕ್ಷರ ಗಾತ್ರ

ಬೆಂಗಳೂರು: ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಸೋಮವಾರಕ್ಕೆ ಮೂರು ದಿನ ಪೂರೈಸಿದ್ದು, ವೈದ್ಯರ ಕೊರತೆಯಿಂದಾಗಿ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.

‘ಹಲ್ಲೆ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಕ್ಷಮೆ ಯಾಚಿಸಬೇಕು ಹಾಗೂ ಅವರ ವಿರುದ್ಧ ಕಾನೂನಿನ ಅಡಿಯಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕಿರಿಯ
ವೈದ್ಯರು ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆ ಆರಂಭಿಸಿದ್ದಾರೆ.

ಕಿರಿಯ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿ ಜೊತೆ ಸೋಮವಾರ ಸಭೆ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿಡಾ. ಸಿ.ಎನ್‌.ಅಶ್ವತ್ಥ ನಾರಾಯಣ, ‘ವೈದ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಸೂಕ್ತ ಭದ್ರತೆ ಒದಗಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪ್ರತಿಭಟನೆ ಹಿಂಪಡೆದು ಸೇವೆ ಮುಂದುವರಿಸಿ’ ಎಂದು ಕೋರಿದರು.

‘ಕಣ್ಣು ಕಳೆದುಕೊಂಡ ಸಂತ್ರಸ್ತರ ಪರವಾಗಿ ನಡೆದ ಹೋರಾಟದ ವೇಳೆ ಇಷ್ಟೆಲ್ಲ ಆಗಿದೆ. ಮುಂದೆ ಇಂಥ ಘಟನೆಗಳು ನಡೆಯದಂತೆ ಆಸ್ಪತ್ರೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಕರ್ನಾಟಕ ಭದ್ರತಾ ಪಡೆ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದೂ ಅವರು ತಿಳಿಸಿದರು.

ಅವರ ಮಾತಿಗೆ ಒಪ್ಪದ ಕಿರಿಯ ವೈದ್ಯರು, ‘ಹಲ್ಲೆ ಮಾಡಿದವರು ಕ್ಷಮೆ ಕೇಳಬೇಕು. ಅವರ ವಿರುದ್ಧ
ಕಾನೂನು ಕ್ರಮ ಜರುಗಿಸಬೇಕು. ಅಲ್ಲಿಯವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದು ಸಭೆಯಿಂದ ಹೊರನಡೆದರು.

ಸರದಿಯಲ್ಲಿ ನಿಂತಿದ್ದ ರೋಗಿಗಳು: ಮಿಂಟೊದಲ್ಲಿ ಸುಮಾರು 70 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ. ವಿಕ್ಟೋರಿಯಾ, ವಾಣಿವಿಲಾಸ ಸೇರಿ ಒಟ್ಟು 500 ಕಿರಿಯ ವೈದ್ಯರಿದ್ದಾರೆ. ಇವರೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ, ವೈದ್ಯರ ಕೊರತೆ ಎದುರಾಗಿದೆ.

ಮಿಂಟೊ ಕಣ್ಣಿನ ಆಸ್ಪತ್ರೆ, ವಿಕ್ಟೋರಿಯಾ, ವಾಣಿವಿಲಾಸ ಸೇರಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲೂ (ಬಿಎಂಸಿಆರ್‌ಐ) ಕಿರಿಯ ವೈದ್ಯರು ಇರಲಿಲ್ಲ.ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ಹಿರಿಯ ವೈದ್ಯರಷ್ಟೇ ರೋಗಿಗಳನ್ನು ತಪಾಸಣೆ ನಡೆಸಿದರು. ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳು ವೈದ್ಯರ ತಪಾಸಣೆಗಾಗಿ ಸರದಿಯಲ್ಲಿ ಗಂಟೆಗಟ್ಟಲೆ ನಿಂತಿದ್ದು ಕಂಡುಬಂತು. ಕಾದು ಸುಸ್ತಾದ ಕೆಲವರು ಆಸ್ಪತ್ರೆಯಿಂದ ಹೊರಟು ಹೋದರು.

‘ಮಿಂಟೊ ಆಸ್ಪತ್ರೆಗೆ ಬಡವರೇ ಹೆಚ್ಚಾಗಿ ಬರುತ್ತಾರೆ. ಕಿರಿಯ ವೈದ್ಯರು ಚಿಕಿತ್ಸೆ ನೀಡುತ್ತಿಲ್ಲ. ಬಡ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ನಮಗ್ಯಾಕೆ ಶಿಕ್ಷೆ’ ಎಂದು ರೋಗಿ ಕಮಲಮ್ಮ ಅಳಲು ತೋಡಿಕೊಂಡರು.

ರಾಜ್ಯದಾದ್ಯಂತ ಪ್ರತಿಭಟನೆ ಇಂದು
ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆಗೆ ಭಾರತೀಯ ವೈದ್ಯಕೀಯ ಮಂಡಳಿ ಬೆಂಬಲ ನೀಡಿದೆ.

‘ಮಂಗಳವಾರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT