ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಡ್ಡಾಯ ಸರ್ಕಾರಿ ಸೇವೆ’ಯಡಿ ‘ನಮ್ಮ ಕ್ಲಿನಿಕ್‌’ಗೆ ವೈದ್ಯರು: ಬಿಬಿಎಂಪಿ ಕೋರಿಕೆ

Last Updated 5 ಡಿಸೆಂಬರ್ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ‘ನಮ್ಮ ಕ್ಲಿನಿಕ್‌’ ಆರಂಭಕ್ಕೆ ಸರ್ಕಾರದ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ. ವೈದ್ಯರ ಕೊರತೆ ನೀಗಿಸಲು ‘ಕಡ್ಡಾಯ ಸರ್ಕಾರಿ ಸೇವೆ’ಯಡಿ ವೈದ್ಯರನ್ನು ಸರ್ಕಾರ ನೇಮಿಸಲು ಆದೇಶಿಸಲಿ ಎಂದು ಬಿಬಿಎಂಪಿ ಬಯಸಿದೆ.

‘ಸ್ನಾತಕೋತ್ತರ ಪದವಿಗೆ ನೀಟ್‌ ಪರೀಕ್ಷೆಗೆ ಸಿದ್ಧರಾಗುವ ಹಿನ್ನೆಲೆಯಲ್ಲಿ ಎಂಬಿಬಿಎಸ್‌ ಮುಗಿಸಿದ ವೈದ್ಯರು ಕೆಲಸಕ್ಕೆ ಬರುತ್ತಿಲ್ಲ. ‘ಕಡ್ಡಾಯ ಸರ್ಕಾರಿ ಸೇವೆ’ಯಲ್ಲಿ ನಿಯೋಜಿಸಿದರೆ ನಮ್ಮ ಕ್ಲಿನಿಕ್‌ಗೆ ವೈದ್ಯರ ಕೊರತೆ ಉಂಟಾಗುವುದಿಲ್ಲ. ಪ್ರತಿ ವರ್ಷವೂ ಇದೇ ರೀತಿ ಮುಂದುವರಿಸಬಹುದು. ಅಲ್ಲದೆ, ಸ್ನಾತಕೋತ್ತರ ಪದವಿಯಲ್ಲೂ ಪ್ರಾಯೋಗಿಕ ತರಬೇತಿ ಕಡ್ಡಾಯವಾಗಿರುವುದರಿಂದ ಅವರನ್ನೂ ‘ನಮ್ಮ ಕ್ಲಿನಿಕ್‌’ಗೆ ನಿಯೋಜಿಸಬೇಕು ಎಂದು ಕೋರಲಾಗಿದೆ. ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಬೇಕಿದೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ. ತ್ರಿಲೋಕ ಚಂದ್ರ ತಿಳಿಸಿದರು.

ಪ್ರತಿ ವಾರ್ಡ್‌ಗೆ ಒಂದರಂತೆ 243 ‘ನಮ್ಮ ಕ್ಲಿನಿಕ್‌’ ಆರಂಭಿಸಲು ಯೋಜಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸುಮಾರು 100 ಕ್ಲಿನಿಕ್‌ಗಳ ಕಟ್ಟಡ, ಮೂಲಸೌಕರ್ಯಗಳು ಸಿದ್ಧವಾಗಿವೆ. ಉಳಿದ ಕ್ಲಿನಿಕ್‌ಗಳ ಸೌಲಭ್ಯಗಳು ಅಂತಿಮ ಹಂತದಲ್ಲಿವೆ. ಆದರೆ, ವೈದ್ಯರು ಮಾತ್ರ ಬರುತ್ತಿಲ್ಲ.

ಬಿಬಿಎಂಪಿ ಕೆಲವು ತಿಂಗಳಿಂದ ನೇರ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ನರ್ಸ್‌ ಹಾಗೂ ಲ್ಯಾಬ್‌ ಟೆಕ್ನಿಷಿಯನ್‌ಗಳು ನೇಮಕವಾಗಿದ್ದಾರೆ. ಆದರೆ, ವೈದ್ಯರು ನೇಮಕಾತಿ ಆದೇಶ ಪಡೆದರೂ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಸುಮಾರು 80 ವೈದ್ಯರಷ್ಟೇ ಕ್ಲಿನಿಕ್‌ಗೆ ಹಾಜರಾಗುವ ಭರವಸೆ ನೀಡಿದ್ದಾರೆ.

ನ.28ರಂದೂ ನೇರ ನೇಮಕಾತಿಗಾಗಿ ಬಿಬಿಎಂಪಿ ಮತ್ತೆ ಪ್ರಕಟಣೆ ಹೊರಡಿಸಿತ್ತು. 10 ವೈದ್ಯರು ಮಾತ್ರ ಸಂದರ್ಶನಕ್ಕೆ ಹಾಜರಾಗಿದ್ದರು. ಹೀಗಾಗಿ, ಬಿಬಿಎಂಪಿ ಸರ್ಕಾರದ ಮುಂದೆ ಹೊಸ ಪ್ರಸ್ತಾವ ಇರಿಸಿದೆ. ಒಂದು ವರ್ಷ ‘ಕಡ್ಡಾಯ ಸರ್ಕಾರಿ ಸೇವೆ’ ಮಾಡಬೇಕಾದ ವೈದ್ಯರನ್ನು ಬಿಬಿಎಂಪಿಯ ‘ನಮ್ಮ ಕ್ಲಿನಿಕ್‌’ಗಳಿಗೆ ನೇಮಕ ಮಾಡುವಂತೆ ಮನವಿ ಮಾಡಲಾಗಿದೆ. ಬೆಂಗಳೂರಿನಲ್ಲೇ ಹಲವು ವೈದ್ಯರು ಕೆಲಸ ಮಾಡಲು ಇಚ್ಛಿಸುತ್ತಾರೆ. ಹೀಗಾಗಿ, ಈ ‘ಕಡ್ಡಾಯ ಸೇವೆ’ ‘ನಮ್ಮ ಕ್ಲಿನಿಕ್‌’ಗಳಲ್ಲೇ ಆಗಲಿ ಎನ್ನುವುದು ಬಿಬಿಎಂಪಿಯ ಕೋರಿಕೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT