ಭಾನುವಾರ, ಡಿಸೆಂಬರ್ 8, 2019
21 °C
ನಕಲಿ ದಾಖಲೆ ಸೃಷ್ಟಿಸಿ ಜಾಮೀನು ಪಡೆಯಲು ನೆರವು

ಮತ್ತೊಬ್ಬ ಮಹಿಳೆಯ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೈಲು ಸೇರಿದ್ದ ಆರೋಪಿಗಳಿಗೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಮೀನು ಪಡೆಯಲು ನೆರವು ನೀಡುತ್ತಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಮತ್ತೊಬ್ಬ ಮಹಿಳೆಯನ್ನು ಸೋಮವಾರ ಬಂಧಿಸಿದ್ದಾರೆ.

ನೆಲಮಂಗಲದ ರೇಖಾ (35) ಬಂಧಿತ ಮಹಿಳೆ. ರೇಖಾಳಿಂದ ಐದು ಕಂಪ್ಯೂಟರ್ ಮತ್ತು ಇತರ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ಪ್ರಕರಣದಲ್ಲಿ ಬಂಧನದಲ್ಲಿರುವ ಹೆಸರಘಟ್ಟದ ಮಧುಕುಮಾರ್ ನೀಡಿದ ಮಾಹಿತಿ ಆಧರಿಸಿ ರೇಖಾಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

‌ನೆಲಮಂಗಲ ಮುಖ್ಯರಸ್ತೆ
ಯಲ್ಲಿ ಜೆರಾಕ್ಸ್ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರವನ್ನು ರೇಖಾ ನಡೆಸುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಮಧುಕುಮಾರ್, ರೇಖಾ ಅವರನ್ನು ಪರಿಚಯಿಸಿಕೊಂಡಿದ್ದಾನೆ. ಈ ವೇಳೆ ನಕಲಿ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟರೆ ಪ್ರತಿ ದಾಖಲೆಗೆ ₹ 100ರಿಂದ ₹ 150 ಕೊಡುವುದಾಗಿ ಆಮಿಷ ಒಡ್ಡಿದ್ದ. ಹಣದ ಆಸೆಯಿಂದ ನಕಲಿ ಮತದಾರರ ಗುರುತಿನ ಚೀಟಿ, ಪಾನ್‍ ಕಾರ್ಡ್, ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳನ್ನು ರೇಖಾ ಮಾಡಿಕೊಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಪ್ರಕರಣದ ಸೂತ್ರಧಾರಿ ಪಾವಗಡದ ಮಾಚರಾಜನಹಳ್ಳಿಯ ರತ್ನಮ್ಮ (46), ಹೆಸರಘಟ್ಟದ ಮಧುಕುಮಾರ್ (37), ಚಿತ್ರದುರ್ಗದ ಚಳ್ಳಕೆರೆಯ ನರಸಿಂಹಮೂರ್ತಿ ಬಸವಕುಮಾರ್ (27) ಮತ್ತು ಆಂಧ್ರಪ್ರದೇಶದ ಕಡಪದಲ್ಲಿ ನೆಲೆಸಿದ್ದ ಪಾವಗಡದ ರಮಾದೇವಿ (40) ಎಂಬವರನ್ನು ಸಿಸಿಬಿ ಪೊಲೀಸರು ನ. 14ರಂದು ಬಂಧಿಸಿದ್ದರು. ಆರೋಪಿಗಳು ಮೃತಪಟ್ಟವರ ಭೂ ದಾಖಲೆಗಳನ್ನು ಆನ್‍ಲೈನ್‍ ಮೂಲಕ ಕಳವು ಮಾಡುತ್ತಿದ್ದರು.

ಬಳಿಕ ಮಧುಕುಮಾರ್, ರೇಖಾಳ ಮೂಲಕ ಆ ಮೃತ ವ್ಯಕ್ತಿಗಳ ಹೆಸರಿನಲ್ಲಿ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಜೈಲು ಅಥವಾ ಕೋರ್ಟ್ ಆವರಣದಲ್ಲಿ ವಿವಿಧ ಪ್ರಕರಣಗಳ ಆರೋಪಿಗಳನ್ನು ಪರಿಚಯಿಸಿಕೊಂಡು ಜಾಮೀನು ಕೊಡಿಸುವುದಾಗಿ ಪ್ರತಿ ಆರೋಪಿಯಿಂದ ₹ 5ಸಾವಿರದಿಂದ ₹ 10 ಸಾವಿರ ಪಡೆಯುತ್ತಿದ್ದರು ಎಂದು ಸಿಸಿಬಿ ಪೊಲೀಸರು ಹೇಳಿದರು.

ಪ್ರತಿಕ್ರಿಯಿಸಿ (+)