ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ: ಖಂಡ್ರೆ ಮನೆತನದ್ದೇ ಅಧಿಪತ್ಯ

ಭದ್ರಕೋಟೆ ಭೇದಿಸಲು ಯುವ ಮುಖಂಡರ ಸಿದ್ಧತೆ
Last Updated 11 ಏಪ್ರಿಲ್ 2018, 9:17 IST
ಅಕ್ಷರ ಗಾತ್ರ

ಬೀದರ್‌: ಭಾಲ್ಕಿ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ರಾಜಕೀಯದಲ್ಲಿರುವ ‘ಖಂಡ್ರೆ ಮನೆತನ’ 47 ವರ್ಷಗಳ ಕಾಲ ಅಧಿಕಾರ ಅನುಭವಿಸಿದೆ. ಖಂಡ್ರೆ ದಾಯಾದಿಗಳಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಂಡರೂ ಅಧಿಕಾರ ತಮ್ಮ ಮನೆತನವನ್ನು ಬಿಟ್ಟು ಹೋಗದಂತೆ ನೋಡಿಕೊಂಡಿದೆ. ಈ ಬಾರಿಯೂ ಗೆಲುವು ಸಾಧಿಸಿ, ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವ ಕನಸು ಕಾಣುತ್ತಿದೆ.

ಒಂದು ಕಾಲದಲ್ಲಿ ಭಾಲ್ಕಿ ಕ್ಷೇತ್ರದಲ್ಲಿ ಖಂಡ್ರೆ ಮನೆತನದ ಒಪ್ಪಿಗೆ ಇಲ್ಲದೇ ಒಂದು ಹಕ್ಕಿಯೂ ರೆಕ್ಕೆ ಬಿಚ್ಚುವುದಿಲ್ಲ ಎನ್ನುವ ಮಾತಿತ್ತು! ಕ್ಷೇತ್ರದಲ್ಲಿ ಇನ್ನೊಬ್ಬರ ರಾಜಕೀಯ ಭವಿಷ್ಯವನ್ನೂ ಇದೇ ಕುಟುಂಬ ಬರೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ದಾಯಾದಿಗಳಲ್ಲಿ ಹೆಚ್ಚು ಬಿರುಕು ಕಾಣಿಸಿಕೊಂಡ ಕಾರಣ ಕ್ಷೇತ್ರದ ಮೇಲಿನ ನಿಯಂತ್ರಣ ನಿಧಾನವಾಗಿ ಸಡಿಲಗೊಳ್ಳುತ್ತಿದೆ. ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಡಿ.ಕೆ.ಸಿದ್ರಾಮ ಅವರು ಕಾಂಗ್ರೆಸ್‌ನ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಪ್ರಕಾಶ ಖಂಡ್ರೆ ಅವರಿಗೆ ಪ್ರಬಲ ಪೈಪೋಟಿ ನೀಡಿ ಸಹೋದರರ ಬೆವರು ಇಳಿಸಿದ್ದರು. ಈ ಬಾರಿಯೂ ಇಂತಹದ್ದೇ ಸ್ಥಿತಿ ನಿರ್ಮಾಣವಾಗುವ ಲಕ್ಷಣ ಕಂಡು ಬರುತ್ತಿದೆ.

ಸಚಿವ ಈಶ್ವರ ಖಂಡ್ರೆ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ದೊರೆಯುವುದು ಬಹುತೇಕ ಖಚಿತವಾಗಿದೆ. ಪ್ರಕಾಶ ಖಂಡ್ರೆ ಹಾಗೂ ಡಿ.ಕೆ.ಸಿದ್ರಾಮ ಇಬ್ಬರೂ ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿಗಳಾಗಿರುವ ಕಾರಣ ಗೊಂದಲ ಉಂಟಾಗಿದೆ. ಒಬ್ಬರಿಗೆ ಟಿಕೆಟ್‌ ಕೊಟ್ಟರೆ ಇನ್ನೊಬ್ಬರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ. ಇದರಿಂದ ಮತಗಳು ವಿಭಜನೆಯಾಗಲಿವೆ ಎನ್ನುವ ಆತಂಕದಲ್ಲಿ ಮುಖಂಡರು ಇದ್ದಾರೆ. ಬಿಜೆಪಿ ಟಿಕೆಟ್‌ ಯಾರಿಗೆ ಸಿಗಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.

‘ಕುಟುಂಬ ರಾಜಕಾರಣ ಕೊನೆಗಾಣಿಸಿ ಯುವಕರಿಗೆ ಒಂದು ಬಾರಿ ಅವಕಾಶ ಕೊಡುವಂತೆ ಮತದಾರರ ಬಳಿಗೆ ಹೋಗುತ್ತಿದ್ದೇನೆ. ಪಕ್ಷದ ಮುಖಂಡರು ನನ್ನ ಬೆಂಬಲಕ್ಕೆ ಇದ್ದಾರೆ. ಈ ಬಾರಿ ಇತಿಹಾಸ ನಿರ್ಮಾಣ ಮಾಡುವುದೇ ನನ್ನ ಗುರಿ’ ಎಂದು ಬಿಜೆಪಿ ಟಿಕೆಟ್‌ ಪ್ರಬಲ ಆಕಾಂಕ್ಷಿ ಡಿ.ಕೆ.ಸಿದ್ರಾಮ ಹೇಳುತ್ತಾರೆ.


ಖಂಡ್ರೆ ಸಾಮ್ರಾಜ್ಯ: 1957ರಿಂದ ಖಂಡ್ರೆ ಮನೆತನ ರಾಜಕೀಯದಲ್ಲಿದೆ. ಈಶ್ವರ ಖಂಡ್ರೆ ಅವರ ತಂದೆ ಭೀಮಣ್ಣ ಖಂಡ್ರೆ 1962ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು. 1967, 1978 ಹಾಗೂ 1983ರಲ್ಲಿ ಚುನಾಯಿತರಾಗಿದ್ದರು. 1972ರಲ್ಲಿ ಭೀಮಣ್ಣ ಖಂಡ್ರೆ ಸ್ಪರ್ಧಿಸಿರಲಿಲ್ಲ. 1985ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕಲ್ಯಾಣರಾವ್‌ ಮೊಳಕೇರಿ 1,504 ಮತಗಳ ಅಂತರದಿಂದ ಜಯ ಸಾಧಿಸಿದ್ದರು. 1989 ರಲ್ಲಿ ಭೀಮಣ್ಣ ಖಂಡ್ರೆ ಅವರು ತಮ್ಮ ಹಿರಿಯ ಪುತ್ರ ವಿಜಯಕುಮಾರ ಖಂಡ್ರೆ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿ 12,007 ಮತಗಳ ಅಂತರದಿಂದ ಗೆಲ್ಲಿಸಿ ಕಲ್ಯಾಣರಾವ್‌ ವಿರುದ್ಧ ಸೇಡು ತೀರಿಸಿಕೊಂಡಿದ್ದರು.

1994ರಲ್ಲೂ ವಿಜಯಕುಮಾರ ಖಂಡ್ರೆ ಗೆಲುವು ಪಡೆದಿದ್ದರು. ನಂತರ ಖಂಡ್ರೆ ಮನೆತನದಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಂಡಿತು. 1999ರ ಚುನಾವಣೆಯಲ್ಲಿ ವಿಜಯಕುಮಾರ ಖಂಡ್ರೆ ವಿರುದ್ಧ ಸೋದರ ಸಂಬಂಧಿ ಪ್ರಕಾಶ ಖಂಡ್ರೆ ಬಿಜೆಪಿಯಿಂದ ಸ್ಪರ್ಧೆಗಿಳಿದು ಶೇಕಡ 54.91 ರಷ್ಟು ಮತಗಳನ್ನು ಪಡೆದು ಆಯ್ಕೆಯಾಗುವ ಮೂಲಕ ತಮ್ಮ ತಾಕತ್ತು ತೋರಿಸಿದ್ದರು. 2004ರಲ್ಲಿ ಭೀಮಣ್ಣ ಖಂಡ್ರೆ ಅವರು ತಮ್ಮ ದ್ವಿತೀಯ ಪುತ್ರ ಈಶ್ವರ ಖಂಡ್ರೆ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದರು. ಆಗಲೂ ಬಿಜೆಪಿಯ ಪ್ರಕಾಶ ಖಂಡ್ರೆ 9,941 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.

2008ರಲ್ಲಿ ಸಕಲ ಸಿದ್ಧತೆ ಮಾಡಿಕೊಂಡು ಚುನಾವಣಾ ರಣರಂಗಕ್ಕೆ ಇಳಿದ ಈಶ್ವರ ಖಂಡ್ರೆ ದಾಯಾದಿ ಪ್ರಕಾಶ ಖಂಡ್ರೆ ಅವರನ್ನು ಪರಾಭವಗೊಳಿಸಿ ವಿಧಾನಸಭೆ ಪ್ರವೇಶ ಪಡೆದರು. 2013ರಲ್ಲಿ ಬಿಜೆಪಿ ಹೋಳಾದಾಗ ಕೆಲ ಮುಖಂಡರು ಕೆಜೆಪಿ ಸೇರಿದ್ದರು. ಆ ಚುನಾವಣೆಯಲ್ಲಿ ಯಡಿಯೂರಪ್ಪ ಅನುಯಾಯಿ ಡಿ.ಕೆ.ಸಿದ್ರಾಮ ಕೆಜೆಪಿಯಿಂದ ಸ್ಪರ್ಧಿಸಿದ್ದರಿಂದ ಮತಗಳು ವಿಭಜನೆಯಾಗಿ ಈಶ್ವರ ಖಂಡ್ರೆ ಸತತ ಎರಡನೇ ಬಾರಿಗೆ ಆಯ್ಕೆಯಾದರು. ಡಿ.ಕೆ. ಸಿದ್ರಾಮ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಕಾಶ ಖಂಡ್ರೆ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು.

ಕೆಜೆಪಿ ಗೊಂದಲ: ಬಿಜೆಪಿಯಲ್ಲಿ ಈಗಲೂ ಗೊಂದಲ ಇದೆ. ಯಡಿಯೂರಪ್ಪ ಅವರ ಬೆಂಬಲಿಗರೇ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳಾಗಿದ್ದಾರೆ. ಈಗಲೂ ಕಾರ್ಯಕರ್ತರಲ್ಲಿ ಮೂಲ ಬಿಜೆಪಿ ಹಾಗೂ ‘ಇಂಪೋರ್ಟಡ್‌ ಕೆಜೆಪಿ’ ಎನ್ನುವ ಭಾವನೆ ಇದೆ.

‘ಯಡಿಯೂರಪ್ಪ ಅವರು ಔರಾದ್‌ಗೆ ಬಂದಾಗ ಅದು ಸ್ಫೋಟಗೊಂಡಿತ್ತು. ಯಡಿಯೂರಪ್ಪ ಅವರು ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಕೊಡುವ ಭರವಸೆ ಕೊಟ್ಟು ಸಮಾಧಾನ ಪಡಿಸಿ ಹೋಗಿದ್ದರು. ಆದರೆ, ಇದೀಗ ಭಾಲ್ಕಿಯಲ್ಲಿ ಗೊಂದಲ ಕಾಣಿಸಿಕೊಂಡಿದೆ. ಪಕ್ಷದ ಮುಖಂಡರು ಬಾಯಿ ಬಿಡುತ್ತಿಲ್ಲ’ ಎಂದು ಹೇಳುತ್ತಾರೆ ಪಕ್ಷದ ಕಾರ್ಯಕರ್ತರು.

ಭಾಲ್ಕಿ ಅಥವಾ ಬೀದರ್‌ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಕೊಡುವಂತೆ ಪ್ರಕಾಶ ಖಂಡ್ರೆ ಅವರು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಒಟ್ಟಾರೆ ಸಹೋದರ ಸಂಬಂಧಿಯನ್ನು ಸೋಲಿಸಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದಾರೆ.

‘ಭಾಲ್ಕಿಯಲ್ಲಿ ಕುಟುಂಬ ರಾಜಕೀಯ ಇದೆ ಎನ್ನುವುದನ್ನು ನಾನು ಅಲ್ಲಗಳೆಯಲಾರೆ. ಜನ ಸೇವೆ ಮಾಡಲು ನನಗೂ ಅವಕಾಶ ದೊರೆಯಲಿ ಎನ್ನುವುದು ನನ್ನ ಇಚ್ಛೆ. ಈಗಿನ ಶಾಸಕರ ದುರಾಡಳಿತ ಅಂತ್ಯಗೊಳಿಸಲು ಭಾಲ್ಕಿಯಿಂದ ಸ್ಪರ್ಧಿಸುವುದು ಅನಿವಾರ್ಯವಾಗಿದೆ’ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳುತ್ತಾರೆ.

**

1957ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿದ್ದ ಭಾಲ್ಕಿಯಿಂದ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳಾದ ಬಳವಂತರಾವ್‌ ಹಾಗೂ ಬಿ.ಶ್ಯಾಮಸುಂದರ ಚುನಾಯಿತರಾಗಿದ್ದರು – ಕಾಜಿ ಅರ್ಷದ್‌ ಅಲಿ, ಮಾಜಿ ಸದಸ್ಯ, ವಿಧಾನ ಪರಿಷತ್‌.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT