ಶನಿವಾರ, ಸೆಪ್ಟೆಂಬರ್ 25, 2021
24 °C
ರಸ್ತೆಯಲ್ಲಿ ಗುಂಡಿಗಳದ್ದೆ ದರ್ಬಾರು; ಮಳೆಯಾದರೆ ಹೊಂಡ, ಬಿಸಿಲಾದರೆ ದೂಳು

ದೊಡ್ಡಕಲ್ಲಸಂದ್ರ–ಗೊಟ್ಟಿಗೆರೆ ಪ್ರಯಾಣ ಹೈರಾಣ: ರಸ್ತೆಯಲ್ಲಿ ಗುಂಡಿಗಳದ್ದೆ ದರ್ಬಾರ್

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಸ್ತೆಯ ತುಂಬೆಲ್ಲಾ ಗುಂಡಿಗಳ ದರ್ಬಾರು, ಮಳೆಯಾದರೆ ಗುಂಡಿಯಲ್ಲಿ ಬೀಳುವುದು, ಬಿಸಿಲಾದರೆ ದೂಳು ಕುಡಿಯುವ ವಾಹನ ಸವಾರರು, ಕಾಡುತ್ತಿರುವ ಆಸ್ತಮಾ...

ಇದು ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದಿಂದ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಸಂಪರ್ಕಿಸುವ ಅಂಜನಾಪುರ ಮುಖ್ಯ ರಸ್ತೆಯ ದುಸ್ಥಿತಿ. ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರ ಮೆಟ್ರೊ ನಿಲ್ದಾಣದ ಸಮೀಪದಿಂದ ಆರಂಭವಾಗುವ ಅಂಜನಾಪುರ ಮುಖ್ಯ ರಸ್ತೆಯಲ್ಲಿ ಗೊಟ್ಟಿಗೆರೆ ಕಡೆಗೆ ಹೊರಟರೆ ಗುಂಡಿಗಳ ನಡುವೆ ರಸ್ತೆ ಎಲ್ಲಿದೆ ಎಂದು ಹುಡುಕಾಡಬೇಕಾದ ಸ್ಥಿತಿ ಇದೆ.

2007ರಲ್ಲಿ ಸುತ್ತಮುತ್ತಲ ಬಡಾವಣೆಗಳು ಬಿಬಿಎಂಪಿ ಸೇರ್ಪಡೆಯಾದರೂ, ಈ ರಸ್ತೆ ನಿರ್ವಹಣೆ ಮಾತ್ರ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ವ್ಯಾಪ್ತಿಯಲ್ಲೇ ಇದೆ. ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಗೆ ಜಲ ಮಂಡಳಿಯಿಂದ ಅಗೆದು ಮಣ್ಣು ಮುಚ್ಚಲಾಗಿದೆ. ಆದರೆ, ರಸ್ತೆ ಮರು ನಿರ್ಮಾಣ ಮಾತ್ರ ಆಗಿಲ್ಲ.

ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಕಡೆಗೆ ಹೋಗಲು ಇರುವ ಪ್ರಮುಖ ಸಂಪರ್ಕ ರಸ್ತೆ ಇದಾಗಿದೆ. 12 ವರ್ಷಗಳಿಂದ  ಅಭಿವೃದ್ಧಿ ಕಾಣದಿರುವುದರಿಂದ ರಸ್ತೆಯ ತುಂಬೆಲ್ಲಾ ಗುಂಡಿಗಳೇ ತುಂಬಿಕೊಂಡಿವೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡರೆ ವಾಹನ ಚಾಲನೆ ಮಾಡುವುದೇ ಕಷ್ಟವಾಗಿದೆ. ಬೈಕ್ ಸವಾರರು ಗುಂಡಿಗಳಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುವುದು ನಿತ್ಯವೂ ಸಾಗಿದೆ ಎನ್ನುತ್ತಾರೆ ಸ್ಥಳೀಯರು.

‘ಬಿಸಿಲಾದರೆ ಇಡೀ ರಸ್ತೆ ದೂಳುಮಯವಾಗುತ್ತದೆ. ಅದರ ನಡುವೆಯೇ ವಾಹನಗಳು ಸಾಗುವುದರಿಂದ ಸುತ್ತಮುತ್ತಲ ಬಡಾವಣೆಗಳ ಜನರಿಗೆ ಆಸ್ತಮಾ ಕಾಡುತ್ತಿದೆ’ ಎಂದು ನಾರಾಯಣನಗರದ ನಿವಾಸಿ ಪವನ್ ವಸಿಷ್ಠ ಹೇಳುತ್ತಾರೆ.

’ಈ ರಸ್ತೆಯ ಗುಂಡಿಗಳಿಗೆ ಹೆದರಿ ವಾಹನ ಸವಾರರು ಈಗ ಎಲೆಕ್ಟ್ರಾನಿಕ್ ಸಿಟಿಗೆ ಹೋಗಲು ಬೇರೆ ರಸ್ತೆಯೊಂದನ್ನು ಕಂಡುಕೊಂಡಿದ್ದಾರೆ. ಕೋಣನಕುಂಟೆ, ಜಂಬು ಸವಾರಿ ದಿಣ್ಣೆ ಮಾರ್ಗದಲ್ಲಿ ಸುತ್ತಾಡಿಕೊಂಡು ತೆರಳುತ್ತಿದ್ದಾರೆ. ಆ ರಸ್ತೆಯಲ್ಲೀಗ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತಿದೆ’ ಎಂದು ಅವರು ಹೇಳಿದರು.

‘ಬಿಡಿಎ ಅಧಿಕಾರಿಗಳಿಗೆ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರಿಗೆ ಮನವಿ ಸಲ್ಲಿಸಿ ಸಾಕಾಗಿ ಹೋಗಿದೆ. ಹೊಸ ತಂತ್ರಜ್ಞಾನದಲ್ಲಿ ರಸ್ತೆ ಅಭಿವೃದ್ಧಿ ಆಗಲಿದೆ ಎಂದು ಬಿಡಿಎ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, 12 ವರ್ಷಗಳಿಂದ ಜನ ಅನುಭವಿಸುತ್ತಿರುವ ತೊಂದರೆಗೆ ಮುಕ್ತಿ ದೊರಕಿಲ್ಲ’ ಎಂದರು.

‘ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಇನ್ನೆರಡು ವಾರದಲ್ಲಿ ಬಿಡಿಎ ಆರಂಭಿಸದಿದ್ದರೆ ಸುತ್ತಮುತ್ತಲ ಬಡಾವಣೆಗಳ 500ಕ್ಕೂ ಹೆಚ್ಚು ಜನ ಸೇರಿ ಕನಕಪುರ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದರು.

ಹೊಸ ತಂತ್ರಜ್ಞಾನದ ರಸ್ತೆಗೆ ಯೋಜನೆ
’ರಾಜ್ಯದಲ್ಲೇ ಮೊದಲ ಬಾರಿಗೆ ಸಿಮೆಂಟ್‌ ಸ್ಟೆಬಿಲೈಸೇಷನ್‌ ತಂತ್ರಜ್ಞಾನದ ಬಳಸಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ’ ಎಂದು ಬಿಡಿಎ ಎಂಜಿನಿಯರಿಂಗ್ ಸದಸ್ಯ ಎಚ್‌.ಆರ್. ಶಾಂತರಾಜಣ್ಣ ತಿಳಿಸಿದರು.

’ಹಳೇ ರಸ್ತೆಯಲ್ಲಿನ ಜಲ್ಲಿ ತೆಗೆದು ಮತ್ತೆ ಹೊಸದಾಗಿ ಜಲ್ಲಿ ಹಾಕುವ ಬದಲಿಗೆ ಅಲ್ಲಿರುವ ಡಾಂಬರ್, ಜಲ್ಲಿಯನ್ನೇ ಒಂದು ಅಡಿಯಷ್ಟು ಆಳದವರಿಗೆ ಯಂತ್ರಗಳ ಮೂಲಕ ಪುಡಿ ಮಾಡಲಾಗುವುದು. ಅದಕ್ಕಾಗಿ ಜರ್ಮನಿಯಿಂದ ಯಂತ್ರವನ್ನೂ ತರಿಸಲಾಗುತ್ತಿದೆ. ಪುಡಿಯಾದ ಬಳಿಕ ಸಿಮೆಂಟ್‌ ಬೆರೆಸಿ ಗಟ್ಟಿ ಮಾಡಲಾಗುವುದು. ನಂತರ ಅದರ ಮೇಲೆ ಡಾಂಬರ್ ಹಾಕುವುದರಿಂದ ಕಡಿಮೆ ವೆಚ್ಚದಲ್ಲಿ ಉತ್ತಮ ರಸ್ತೆ ನಿರ್ಮಾಣವಾಗಲಿದೆ’ ಎಂದು ಹೇಳಿದರು.

‘6.8 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಗೆ ₹25 ಕೋಟಿ ಅಂದಾಜಿನ ಯೋಜನೆ ರೂಪಿಸಲಾಗಿದೆ. ಸೇತುವೆ ಮತ್ತು ಚರಂಡಿಗಳ ನಿರ್ಮಾಣವೂ ಈ ಮೊತ್ತದಲ್ಲೇ ಒಳಗೊಂಡಿದೆ. ಮಳೆಗಾಲ ಮುಗಿದ ಬಳಿಕ ಕಾಮಗಾರಿ ಆರಂಭವಾಗಲಿದೆ. 5 ವರ್ಷಗಳ ತನಕ ರಸ್ತೆ ನಿರ್ವಹಣೆಯನ್ನು ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯೇ ನೋಡಿಕೊಳ್ಳಲಿದೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು