ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕರಹಳ್ಳಿ ಕೆರೆ ನೀರು ಕಲುಷಿತ

ಹೊರಹೊಮ್ಮುತ್ತಿದೆ ವಾಸನೆ, ಪಕ್ಷಿಗಳ ಸಾವಲ್ಲಿ ಏರಿಕೆ
Last Updated 26 ಏಪ್ರಿಲ್ 2018, 12:49 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ಆವರಣದ ಕುಕ್ಕರಹಳ್ಳಿ ಕೆರೆಯ ನೀರು ಕಲುಷಿತಗೊಂಡಿದ್ದು, ಪಕ್ಷಿಗಳು ಸಾಯುತ್ತಿವೆ. ಕೊಳಚೆ ನೀರು ಒಳಸೇರುವುದೇ ಇದಕ್ಕೆ ಕಾರಣ ಎನ್ನುವುದು ಪರಿಸರತಜ್ಞರ ಅಳಲಾಗಿದೆ.

ಕುಕ್ಕರಹಳ್ಳಿ ಕೆರೆಗೆ ಸೇರುತ್ತಿದ್ದ ಒಳಚರಂಡಿ ನೀರನ್ನು ನಿಲ್ಲಿಸಲು ಪರಿಸರವಾದಿಗಳು ನಿರಂತರ ಹೋರಾಟ ನಡೆಸಿ ಯಶಸ್ವಿಯಾಗಿದ್ದರು. ಡಿ.ರಂದೀಪ್‌ ಅವರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಒಳಚರಂಡಿ ನೀರು ಕೆರೆಗೆ ಸೇರುವುದನ್ನು ನಿಲ್ಲಿಸಿ, ಮಳೆನೀರು ಒಳಗೆ ಹರಿದುಬರಲು ಕಿರು ಕಾಲುವೆಗಳನ್ನು ನಿರ್ಮಿಸಲಾಗಿತ್ತು. ಅಲ್ಲದೆ, ಪಡುವಾರಹಳ್ಳಿ ಭಾಗದಲ್ಲಿ ಬಾಕ್ಸ್ ಮಾದರಿ ಚರಂಡಿಗಳನ್ನು ನಿರ್ಮಿಸಿ ಮಳೆಗಾಲದಲ್ಲಿ ನೀರು ಹರಿಯುವಂತೆ ಕ್ರಮಗಳನ್ನೂ ತೆಗೆದುಕೊಳ್ಳಲಾಗಿತ್ತು.

ಆದರೆ, ಬೇಸಿಗೆ ಹೆಚ್ಚಿರುವ ಕಾರಣ ನೀರು ಬತ್ತಲಾರಂಭಿಸಿದೆ. ಊರಿನ ಕೊಳಚೆನೀರು ಕೆರೆಗೆ ಹರಿದುಬರಲು ಶುರುವಾಗಿದೆ. ಪಡುವಾರಹಳ್ಳಿಯಲ್ಲಿ ಬಟ್ಟೆ, ಪಾತ್ರೆ, ಹಸು ತೊಳೆದ ನೀರು ತೆರೆದ ಚರಂಡಿಗಳ ಮೂಲಕ ಕುಕ್ಕರಹಳ್ಳಿ ಕೆರೆಯ ಒಡಲು ಸೇರುತ್ತಿದೆ. ಬಾಕ್ಸ್‌ ಮಾದರಿ ಚರಂಡಿಯಲ್ಲಿ ಇದೇ ನೀರು ಈಗ ಹರಿಯುತ್ತಿದೆ. ಹಾಗಾಗಿ ಕೆರೆಯ ನೀರು ಕಲುಷಿತಗೊಳ್ಳುತ್ತಿದೆ ಎಂದು ಪರಿಸರವಾದಿ ಹಾಗೂ ವಜ್ಯಜೀವಿ ಛಾಯಾಗ್ರಾಹಕ ಶೈಲಜೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರಿಂದ ಪ್ರತಿನಿತ್ಯ ಬ್ಯಾಕ್‌ವಾಷ್‌ ನೀರು ದಿನದ 24 ಗಂಟೆಯೂ ಕೆರೆಗೆ ಸೇರುತ್ತಿದೆ. ಈ ನೀರು ಶುದ್ಧವಾದದ್ದೇ. ಆದರೆ, ಈ ನೀರಿನ ಜತೆಗೆ ಪಡುವಾರಹಳ್ಳಿಯ ಬಳಿ ಕಲುಷಿತ ನೀರು ಸೇರುತ್ತಿರುವುದು ಕೆರೆಯ ಜೀವಕ್ಕೆ ಅಪಾಯ ಒಡ್ಡುತ್ತಿದೆ. ಹಾಗಾಗಿ, ಬೇಸಿಗೆಯಲ್ಲಿ ಈ ಕೆರೆಯು ತುಂಬಿದ ಹಾಗೆ ಕಾಣಿಸುತ್ತದೆ. ವಾಸ್ತವದಲ್ಲಿ ನೀರು ಕೊಳೆತಿರುತ್ತದೆ. ಬೇಸಿಗೆಯಾದ ಕಾರಣ, ಆಮ್ಲಜನಕ ಪ್ರಮಾಣವೂ ನೀರಿನಲ್ಲಿ ಕಡಿಮೆಯಾಗಿ ಜೀವಿಗಳಿಗೆ ಮಾರಕವಾಗಿದೆ ಎಂದು ತಿಳಿಸಿದರು.

ಮೀನು, ಪಕ್ಷಿಗಳ ಸಾವು: ಕೆರೆಯ ನೀರು ಹಾಳಾಗುತ್ತಿರುವ ಕಾರಣ, 4 ತಿಂಗಳಲ್ಲಿ ಮೀನು ಹಾಗೂ ಪಕ್ಷಿಗಳ ಸಾವಿನ ಪ್ರಮಾಣ ಹೆಚ್ಚಾಗಿದೆ. ಫೆಬ್ರುವರಿಯಲ್ಲಿ ನಾಲ್ಕು ಪಕ್ಷಿಗಳು, ಏಪ್ರಿಲ್‌ನಲ್ಲಿ 1 ಪಕ್ಷಿ ಸತ್ತಿವೆ. ಸುಮಾರು 600ಕ್ಕೂ ಹೆಚ್ಚು ಮೀನುಗಳು ಸತ್ತಿವೆ. ಇದಕ್ಕೆ ನೀರು ಕಲುಷಿತಗೊಂಡಿರುವುದೇ ಪ್ರಮುಖ ಕಾರಣ ಎಂದು ಅವರು ವಿಶ್ಲೇಷಿಸಿದರು.

ಕೆರೆಯ ಆವರಣದೊಳಗೆ ದನ–ಕರುಗಳು ಬರುತ್ತಿವೆ. ಕೆರೆಯ ಸಂದರ್ಶನದ ಸಮಯ ಬೆಳಿಗ್ಗೆ 6ರಿಂದ 10 ಹಾಗೂ ಸಂಜೆ 4ರಿಂದ 7 ಇದೆ. ಆದರೆ ಒಂದು ಗಂಟೆ ಮುಂಚೆ ಹಾಗೂ ನಂತರ ಬಾಗಿಲುಗಳು ತೆರೆದಿರುತ್ತವೆ. ಕಾವಲು ಸಿಬ್ಬಂದಿ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸದೇ ಇರುವ ಕಾರಣ, ಪ್ರಾಣಿಗಳೂ ಒಳಬಂದು ಆವರಣದಲ್ಲಿ ಗಲೀಜು ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮಲಿನ ನೀರು; ಸಾವು– ಬಾರದ ವರದಿ

ಈಚೆಗಷ್ಟೇ ಕೆರೆಯಲ್ಲಿ 600ಕ್ಕೂ ಹೆಚ್ಚು ಮೀನುಗಳು ಮೃತಪಟ್ಟಿದ್ದ ಕಾರಣ ಅರಣ್ಯ ಇಲಾಖೆಯು ಪರೀಕ್ಷೆಗಾಗಿ ಕೊಯಮತ್ತೂರಿನ ಸಲೀಂ ಅಲಿ ಪಕ್ಷಿ ಅಧ್ಯಯನ ಮತ್ತು ಪ್ರಾಕೃತಿಕ ಇತಿಹಾಸ ಸಂಸ್ಥೆಗೆ ಮಾದರಿಗಳನ್ನು ಕಳುಹಿಸಿತ್ತು. ಆದರೆ, ಈವರೆಗೂ ವರದಿ ಇಲಾಖೆಗೆ ಸಿಕ್ಕಿಲ್ಲ.

ಈ ಕುರಿತು ಮಾತನಾಡಿದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ, ‘ಮೀನು ಹಾಗೂ ನೀರಿನ ಮಾದರಿಯನ್ನು ಕಳುಹಿಸಿ ವರದಿಗಾಗಿ ಕಾಯುತ್ತಿದ್ದೇವೆ. ಆದರೆ, ವರದಿ ಸಿಗುವುದು ವಿಳಂಬವಾಗಿದೆ’ ಎಂದು ತಿಳಿಸಿದರು. ಅಂತೆಯೇ ಪಕ್ಷಿಗಳ ಸಾವು ಸಹ ಆತಂಕ ಮೂಡಿಸಿದೆ. ನೀರಿನ ಗುಣಮಟ್ಟ ಪರೀಕ್ಷೆಯೇ ಪರಿಹಾರ ಎಂದರು.

ಪೆಲಿಕನ್‌ ಪಕ್ಷಿ ಸಾವು

‌ಮೈಸೂರು: ನಗರದ ಕುಕ್ಕರಹಳ್ಳಿ ಕೆರೆಯಲ್ಲಿ ಬುಧವಾರ ಪೆಲಿಕನ್‌ ಪಕ್ಷಿಯೊಂದು ಮೃತಪಟ್ಟಿದೆ. ಕೆರೆಯ ನೀರು ಕಲುಷಿತಗೊಂಡಿದ್ದು, ವಾಸನೆ ಬರುತ್ತಿರುವುದಾಗಿ ವಾಯುವಿಹಾರಕ್ಕೆ ಬರುತ್ತಿದ್ದ ನಾಗರಿಕರು ಹಲವು ದಿನಗಳಿಂದ ದೂರುತ್ತಿದ್ದರು. ಬುಧವಾರ ಬೆಳಿಗ್ಗೆ ಪೆಲಿಕನ್ ಪಕ್ಷಿಯು ಅಸ್ವಸ್ಥಗೊಂಡಿರುವುದನ್ನು ನಾಗರಿಕರು ಕಂಡಿದ್ದು, ಕೂಡಲೇ ನಗರದ ‘ಪೀಪಲ್‌ ಫಾರ್‌ ಅನಿಮಲ್‌’ ಸಂಸ್ಥೆಗೆ ಕರೆ ಮಾಡಿದ್ದಾರೆ.

ಸಂಸ್ಥೆಯ ಕಾರ್ಯಕರ್ತರು ಸ್ಥಳಕ್ಕೆ ಬಂದಿದ್ದು, ಪಶು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಪಕ್ಷಿಯು ಮೃತಪಟ್ಟಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸಂಪರ್ಕಕ್ಕೆ ಸಿಗದ ಕಾರಣ, ಪಕ್ಷಿಯನ್ನು ಹೆಚ್ಚುವರಿ ಪರೀಕ್ಷೆಗೆ ಕಳುಹಿಸಲು ಸಾಧ್ಯವಾಗಿಲ್ಲ ಎಂದು ಸಂಸ್ಥೆಯ ಸದಸ್ಯರು ತಿಳಿಸಿದರು. ‘ನನಗೆ ಮಾಹಿತಿ ಸಿಕ್ಕಿಲ್ಲ’ ಎಂದು ವನ್ಯಜೀವಿ ವಿಭಾಗದ ಉಪಅರಣ್ಯ ಸಂಕ್ಷಣಾಧಿಕಾರಿ ಏಡುಕುಂಡಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT