ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಾಚರಣೆ: ಜನಜಂಗುಳಿಗೆ ಅವಕಾಶ ಬೇಡ- ಸರ್ಕಾರವನ್ನು ಕೋರಿದ ಬಿಬಿಎಂಪಿ

Last Updated 2 ಡಿಸೆಂಬರ್ 2020, 14:53 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನಜಂಗುಳಿ ಸೇರುವುದಕ್ಕೆ ಅವಕಾಶ ಕಲ್ಪಿಸಬಾರದು. ಹೊಸ ವರ್ಷವನ್ನು ಸ್ವಾಗತಿಸಲು ಸಾರ್ವಜನಿಕ ರಸ್ತೆಗಳು, ಪಬ್‌ಗಳು, ಬಾರ್‌ ಮತ್ತು ರೆಸ್ಟೋರಂಟ್‌ಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದನ್ನು ನಿಷೇಧಿಸಬೇಕು ಎಂದು ಬಿಬಿಎಂಪಿಯು ಸರ್ಕಾರವನ್ನು ಕೋರಿದೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೋವಿಡ್ ನಿಯಂತ್ರಿಸಲು ನಡೆದಿರುವ ಸಿದ್ಧತೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಈ ಕುರಿತು ಇತ್ತೀಚೆಗೆ ವಿಧಾನಸೌಧದಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ, ಹಾಗೂ ಕಂದಾಯ ಸಚಿವ ಆರ್‌.ಅಶೋಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಅಭಿಪ್ರಾಯ ಕೇಳಿದ್ದರು. ನಗರದಲ್ಲಿ ಈ ಹಿಂದೆ ನಿತ್ಯ 6 ಸಾವಿರಗಳಷ್ಟು ಕೋವಿಡ್‌ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈ ಪ್ರಮಾಣ ಈಗ 600ಕ್ಕೆ ಇಳಿದಿದೆ. ಗಣೇಶ ಚತುರ್ಥಿ, ನವರಾತ್ರಿ ಹಾಗೂ ದೀಪಾವಳಿ ಹಬ್ಬಗಳನ್ನು ಆಚರಿಸುವಾಗಲೂ ಹೆಚ್ಚು ಜನ ಸೇರಲು ಅವಕಾಶ ನೀಡದ ಕಾರಣ ಕೋವಿಡ್‌ ಹತೋಟಿಯಲ್ಲಿದೆ. ಈಗ ಚಳಿಗಾಲ ಬೇರೆ. ಹಾಗಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನಜಂಗುಳಿ ಸೇರುವುದಕ್ಕೆ ಅವಕಾಶ ನೀಡಬಾರದು ಎಂದು ಕೋರಿದ್ದೇವೆ’ ಎಂದು ತಿಳಿಸಿದರು.

‘ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌ ಮೊದಲಾದ ಕಡೆ ಪ್ರತಿ ಬಾರಿ ಹೊಸ ವರ್ಷಾಚರಣೆ ಹೇಗೆ ನಡೆಯುತ್ತದೆ ಎಂದು ನೋಡಿದ್ದೇವೆ. ಈ ರಸ್ತೆಗಳಲ್ಲಿ ಇರುವೆ ಹೋಗುವುದಕ್ಕೂ ಜಾಗವಿಲ್ಲವೇನೋ ಎಂಬಂತೆ ಜನ ಸೇರುತ್ತಾರೆ. ಅಂತಹ ಕಾರ್ಯಕ್ರಮಗಳು ಬೇಡ ಎಂಬುದಷ್ಟೇ ನಮ್ಮ ಸಲಹೆ’ ಎಂದು ಸ್ಪಷ್ಟಪಡಿಸಿದರು.

‘ಪಬ್‌, ಹೋಟೆಲ್‌ ರೆಸ್ಟೋರಂಟ್‌ ಹಾಗೂ ಕ್ಲಬ್‌ಗಳಲ್ಲಿ ಹೊಸ ವರ್ಷದ ಪ್ರಯುಕ್ತ ಟಿಕೆಟ್‌ಗಳನ್ನಿಟ್ಟು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ರಸಮಂಜರಿಗಳನ್ನು ಏರ್ಪಡಿಸುತ್ತಾರೆ. ಅಂತಹ ಕಾರ್ಯಕ್ರಮಗಳನ್ನೂ ನಿಷೇಧಿಸುವಂತೆ ಕೋರಿದ್ದೇವೆ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ನಿರೀಕ್ಷಿಸಿದ್ದೇವೆ’ ಎಂದರು.

‘50 ಆಸನ ಸಾಮರ್ಥ್ಯದ ಪಬ್‌ ಮತ್ತು ರೆಸ್ಟೋರಂಟ್‌ಗಳಲ್ಲಿ ನೂರಾರು ಮಂದಿ ಸೇರುವಂತಹ ಕಾರ್ಯಕ್ರಮ ಏರ್ಪಡಿಸುತ್ತಾರೆ. ಆಗ ಅಂತರ ಕಾಪಾಡುವುದು ಕಷ್ಟ. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಗ್ರಾಹಕರ ದೇಹದ ಉಷ್ಣಾಂಶ ತಪಾಸಣೆ, ಸ್ಯಾನಿಟೈಸರ್‌ ಬಳಕೆ, ಅಂತರ ಕಾಪಾಡುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಸುವುದಕ್ಕೆ ಅಭ್ಯಂತರ ಇಲ್ಲ’ ಎಂದು ತಿಳಿಸಿದರು.

‘ಹೊಸ ವರ್ಷಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿ, ಸೋಂಕು ಹರಡುವುದಕ್ಕೆ ಬಿಟ್ಟರೆ ಮತ್ತೆ ನಿಯಂತ್ರಿಸುವುದು ಕಷ್ಟವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT