ಬೆಂಗಳೂರು: 16ನೇ ಹಣಕಾಸು ಆಯೋಗವು ಕರ್ನಾಟಕದ ಪಾಲು ನಿರ್ಧರಿಸುವಾಗ ಬೆಂಗಳೂರಿನ ಪ್ರಗತಿಯನ್ನು ಪರಿಗಣಿಸಿ, ರಾಜ್ಯದ ಇತರ ಪ್ರದೇಶಗಳನ್ನು ನಿರ್ಲಕ್ಷಿಸಬಾರದು ಎಂದು ಆಮ್ ಆದ್ಮಿ ಪಾರ್ಟಿ (ಎಎಪಿ) ಸಲಹೆ ನೀಡಿದೆ.
ಎಎಪಿ ರಾಜ್ಯ ಘಟಕದ ಖಜಾಂಚಿ ಪ್ರಕಾಶ್ ನೆಡುಂಗಡಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬೆಂಗಳೂರು ನಗರ ಗಮನಾರ್ಹ ಪ್ರಗತಿ ಕಂಡಿದೆ. ಇಲ್ಲಿನ ತಲಾ ಆದಾಯವು ಹೆಚ್ಚಿದೆ. ಅದನ್ನೇ ಮಾನದಂಡವಾಗಿ ಇಟ್ಟುಕೊಂಡು ರಾಜ್ಯದ ಪಾಲು ನಿರ್ಧರಿಸಿದರೆ ರಾಜ್ಯಕ್ಕೆ ಅನ್ಯಾಯವಾಗುತ್ತದೆ. 14ನೇ ಹಣಕಾಸು ಆಯೋಗವು ರಾಜ್ಯಕ್ಕೆ ಶೇ 4.7 ನೀಡಿದ್ದರೆ, 15ನೇ ಹಣಕಾಸು ಆಯೋಗವು ಶೇ 3.6 ಮಾತ್ರ ನಿರ್ಧರಿಸಿತ್ತು. ಈ ವ್ಯತ್ಯಾಸದಿಂದ ರಾಜ್ಯಕ್ಕೆ ₹ 70 ಸಾವಿರ ಕೋಟಿ ನಷ್ಟವಾಗಿದೆ’ ಎಂದು ವಿವರಿಸಿದರು.
ರಾಜ್ಯದ ಕೆಲವು ಭಾಗಗಳು ಉತ್ತರ ಪ್ರದೇಶ, ಬಿಹಾರದ ಜಿಲ್ಲೆಗಳಂತೆ ಬಡವಾಗಿವೆ. ಅಲ್ಲಿನ ತಲಾ ಆದಾಯವನ್ನು ಪರಿಗಣಿಸಿ ಹಣಕಾಸು ಒದಗಿಸಿದರೆ ರೈತರು, ಕೃಷಿ, ಸಣ್ಣ ಉದ್ಯಮ, ಕೈಗಾರಿಕೆಗಳು ಜಿಲ್ಲೆಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ. ಆಗ ಜನರು ಬೆಂಗಳೂರಿಗೆ ವಲಸೆ ಬರುವುದು ತಪ್ಪಲಿದೆ ಎಂದು ತಿಳಿಸಿದರು.
ಬೆಂಗಳೂರನ್ನು ‘ಮೆಟ್ರೊ ಪಾಲಿಟನ್ ಸಿಟಿ’ ಎಂದು ಘೋಷಣೆ ಮಾಡಬೇಕು. ನಗರದ ಅಭಿವೃದ್ಧಿಗೆ ಪ್ರತ್ಯೇಕವಾಗಿ ಯೋಜನೆ ರೂಪಿಸಬೇಕು ಎಂದು ಎಎಪಿ ಮುಖಂಡ ದರ್ಶನ್ ಜೈನ್ ಆಗ್ರಹಿಸಿದರು.