ಭಾನುವಾರ, ಏಪ್ರಿಲ್ 5, 2020
19 °C
ವಿಳಂಬಕ್ಕೆ ಅಧಿಕಾರಿಗಳ ಬೇಜವಾಬ್ದಾರಿ ಕಾರಣ: ಬಿಬಿಎಂಪಿ ಸದಸ್ಯರ ಆರೋಪ– ಆಕ್ರೋಶ

ಮನೆ ಬಾಗಿಲಿಗೆ ಟಿಡಿಆರ್: ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಸ್ತೆ ವಿಸ್ತರಣೆಗೆ ಜಾಗ ಬಿಟ್ಟುಕೊಡುವವರ ಮನೆ ಬಾಗಿಲಿಗೇ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ಪತ್ರಗಳನ್ನು ತಲುಪಿಸಲು ಬಿಬಿಎಂಪಿ ನಿರ್ಧರಿಸಿದೆ.

ಮೇಯರ್ ಗಂಗಾಂಬಿಕೆ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪಾಲಿಕೆ ಸಭೆಯಲ್ಲಿ ನಗರದ ಶಾಸಕರು ಮತ್ತು ಸದಸ್ಯರು ಪಕ್ಷಾತೀತವಾಗಿ ವಿಷಯ ಪ್ರಸ್ತಾಪಿಸಿ ವಿಳಂಬಕ್ಕೆ ಕಾರಣವಾಗುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಷಯದ ಬಗ್ಗೆ ಧ್ವನಿ ಎತ್ತಿದ ಬೊಮ್ಮನಹಳ್ಳಿ ಶಾಸಕ ಸತೀಶ್‌ರೆಡ್ಡಿ, ‘ಬನ್ನೇರುಘಟ್ಟ ರಸ್ತೆ, ಸರ್ಜಾಪುರ ರಸ್ತೆ ಹಾಗೂ ಬೇಗೂರು ರಸ್ತೆ ವಿಸ್ತರಣೆ ಯೋಜನೆಗೆ ಜಾಗ ಬಿಟ್ಟುಕೊಡಲು ಜನರನ್ನು ಒಪ್ಪಿಸಿದ್ದೇವೆ. ಆದರೆ, ಅಧಿಕಾರಿಗಳು ಟಿಡಿಆರ್ ಪತ್ರ ವಿತರಣೆ ಮಾಡಲು ಅನಗತ್ಯ ವಿಳಂಬ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಬನ್ನೇರುಘಟ್ಟ ರಸ್ತೆ ವಿಸ್ತರಣೆಗೆ ₹150 ಕೋಟಿ ಇದ್ದ ಯೋಜನಾ ಮೊತ್ತ ಈಗ ₹200 ಕೋಟಿಗೆ ಏರಿಕೆಯಾಗಿದೆ. ಪಾಲಿಕೆಗೆ ₹50 ಕೋಟಿ ಹೊರೆ ಆಗಿದೆ. ಅಧಿಕಾರಿಗಳು ಮಾಡಿದ ವಿಳಂಬವೇ ಇದಕ್ಕೆ ಕಾರಣವಾಗಿದ್ದು, ಅಂಥವರಿಗೆ ಶಿಕ್ಷೆ ಏನು? ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಮನವಿ ಮಾಡಿದರು.

‘ರಸ್ತೆ ವಿಸ್ತರಣೆಗೆ ಜಾಗ ನೀಡುವುದಲ್ಲದೇ, ಟಿಡಿಆರ್ ಪ್ರಮಾಣಪತ್ರ ಪಡೆಯಲು ಬಿಬಿಎಂಪಿ ಮತ್ತು ಬಿಡಿಎ ಕಚೇರಿಗಳನ್ನು ಜನ ಸುತ್ತಬೇಕೇ? ಈ ಗೊಂದಲದಿಂದಾಗಿಯೇ ಟಿಡಿಆರ್‌ಗೆ ಜನ ಒಪ್ಪುತ್ತಿಲ್ಲ’ ಎಂದರು.

‘ಈ ಮೂರು ರಸ್ತೆ ವಿಸ್ತರಣೆ ಆಗದಿದ್ದರೆ ಜನರು ಪಾಲಿಕೆಗೆ ಹಿಡಿಶಾಪ ಹಾಕಲಿದ್ದಾರೆ. ಹೀಗಾಗಿ ಒಂದೇ ಸೂರಿನಡಿ ಟಿಡಿಆರ್ ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ರಾಜರಾಜೇಶ್ವರಿನಗರ ಶಾಸಕ ಮುನಿರತ್ನ, ‘ನಗರದಲ್ಲಿ ಮುಖ್ಯವಾಗಿ 14 ರಸ್ತೆಗಳ ವಿಸ್ತರಣೆ ಆಗಬೇಕಿದೆ. ತುಮಕೂರು ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್‌ ನಿರ್ಮಾಣ ಆಗಬೇಕಿದೆ. ಗೊರಗುಂಟೆ ಪಾಳ್ಯದಲ್ಲಿ ಅಂಡರ್ ಪಾಸ್ ನಿರ್ಮಾಣ ಆಗಬೇಕಿದೆ. ಟಿಡಿಆರ್ ಗೊಂದಲದಿಂದಾಗಿ ಎಲ್ಲಾ ಯೋಜನೆಗಳು ವಿಳಂಬ ಆಗುತ್ತಿವೆ’ ಎಂದರು.

‘ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ’ ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ಸದಸ್ಯರಾದ ಸತ್ಯನಾರಾಯಣ, ಮಂಜುನಾಥರೆಡ್ಡಿ, ಲಕ್ಷ್ಮಿನಾರಾಯಣ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದರು.

ತರಾಟೆ: ಟಿಡಿಆರ್‌ ವಿತರಣೆಗೆ ಆಗುತ್ತಿರುವ ವಿಳಂಬಕ್ಕೆ ಮೇಯರ್ ಸೂಚನೆಯಂತೆ ಕಾರಣ ತಿಳಿಸಲು ಮುಖ್ಯ ಎಂಜಿನಿಯರ್ ಸೋಮಶೇಖರ್ ಮುಂದಾದರು. ‘ರಸ್ತೆಗೆ ಜಾಗ ನೀಡುತ್ತಿರುವವರ ಆಸ್ತಿಗೆ ಸಂಬಂಧಿಸಿದ ಮೂಲ ದಾಖಲೆಗಳನ್ನು ಸಂಗ್ರಹಿಸುವುದು ಕಷ್ಟವಾಗುತ್ತಿದೆ. ಮೂಲ ದಾಖಲೆಗಳಿಲ್ಲದೆ ಟಿಡಿಆರ್ ವಿತರಿಸಲು ಆಗುತ್ತಿಲ್ಲ’ ಎಂದು ಉತ್ತರ ನೀಡಿದರು.

ಇದರಿಂದ ಅಸಮಾಧಾನಗೊಂಡ ಮಂಜುನಾಥ ರೆಡ್ಡಿ ‘ಈ ರೀತಿಯ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದೀರಿ ಎಂದರೆ ನಿಮಗೆ ಇಚ್ಛಾಶಕ್ತಿ ಇಲ್ಲ ಎಂದೇ ಅರ್ಥ. ರಸ್ತೆ ವಿಸ್ತರಣೆಗೆ ಜಾಗದ ಲಭ್ಯತೆ ಇಲ್ಲದಿದ್ದರೆ ಯಾವ ಆಧಾರದಲ್ಲಿ ಕಾಮಗಾರಿ ಆರಂಭಿಸಿದ್ದೀರಿ, ಜನರ ಹಣವನ್ನೇಕೆ ಪೋಲು ಮಾಡುತ್ತಿದ್ದೀರಿ, ಸಭೆಯಲ್ಲಿ ಈ ರೀತಿಯ ಉತ್ತರ ನೀಡಲು ನಿಮಗೆ ನಾಚಿಕೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಪ್ರಮುಖ ವಿಷಯ ಆಗಿರುವ ಕಾರಣ ಈ ಸಭೆಯಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸರಿಯಾದ ಮಾರ್ಗ
ಗಳನ್ನು ತಿಳಿಸಿ’ ಎಂದು ಗಂಗಾಂಬಿಕೆ ಸೂಚಿಸಿದರು.

ಶೀಘ್ರ ಆದೇಶ: ‘ಟಿಡಿಆರ್‌ ಪ್ರಮಾಣಪತ್ರ ವಿತರಣೆಗೆ ನಾನೇ ಮುತುವರ್ಜಿ ವಹಿಸುತ್ತೇನೆ. ಭೂಸ್ವಾಧೀನ ಕಚೇರಿಯನ್ನು ಸರ್ಜಾಪುರ ರಸ್ತೆ ಕಡೆಗೆ ಸ್ಥಳಾಂತರ ಮಾಡಲಾಗುವುದು. ಈಗಾಗಲೇ ಒಪ್ಪಿಗೆ ಪತ್ರ ನೀಡಿರುವ ಭೂಮಾಲೀಕರಿಗೆ ತಕ್ಷಣವೇ ಟಿಡಿಆರ್‌ ವಿತರಿಸಲಾಗುವುದು. ಅಗತ್ಯ ಇರುವ ಬಾಕಿ ಜಾಗಕ್ಕೆ ಮಾಲೀಕರನ್ನು ಒಪ್ಪಿಸಲು ಜನಪ್ರತಿನಿಧಿಗಳ ಜತೆ ಸೇರಿ ಸಭೆ ನಡೆಸಿ ತಕ್ಷಣವೇ ಮನೆ ಬಾಗಿಲಲ್ಲೇ ಟಿಡಿಆರ್ ವಿತರಿಸುವ ಭರವಸೆ ನೀಡಲಾಗುವುದು. ಈ ಮೂರು ವಿಷಯಗಳ ಕುರಿತು ಸದ್ಯದಲ್ಲೇ ಆದೇಶ ಹೊರಡಿಸುತ್ತೇನೆ’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಉತ್ತರ ನೀಡಿದರು.

1:3 ಅನುಪಾತ ಆಧಾರದಲ್ಲಿ ಟಿಡಿಆರ್‌

ಅಭಿವೃದ್ಧಿ ಯೋಜನೆಗೆ ಜಾಗ ನೀಡುವವರಿಗೆ ಸದ್ಯ 1:2 ಅನುಪಾತದಲ್ಲಿ ಟಿಡಿಆರ್ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು 1:3 ಅನುಪಾತಕ್ಕೆ ಹೆಚ್ಚಿಸಲು ನಗರಾಭಿವೃದ್ಧಿ ಇಲಾಖೆಗೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.

‘ಟಿಡಿಆರ್‌ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಲಾಗಿದೆ. 1:3 ಅನುಪಾತಕ್ಕೆ ಹೆಚ್ಚಿಸುವ ಬಗ್ಗೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಿ ಎಂದು ಅವರು ಸೂಚಿಸಿದ್ದಾರೆ. ಅವರ ಮನೆ ಬಾಗಿಲಲ್ಲೇ ಟಿಡಿಆರ್ ಪ್ರಮಾಣ ವಿತರಿಸಲು ಕ್ರಮ ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದ್ದಾರೆ’ ಎಂದರು.

ಇಬ್ಬರು ಸದಸ್ಯರಿಂದ ಪ್ರಮಾಣ ವಚನ

ಉಪಚುನಾವಣೆಯಲ್ಲಿ ವಿಜೇತರಾದ ಸಗಾಯಪುರ ವಾರ್ಡ್‌ನ ಸದಸ್ಯೆ ಪಳನಿಯಮ್ಮ ಮತ್ತು ಕಾವೇರಿಪುರ ವಾರ್ಡ್‌ನ ಸಿ. ಪಲ್ಲವಿ ಪ್ರಮಾಣ ವಚನ ಸ್ವೀಕರಿಸಿದರು.

ಬಳಿಕ ಇಬ್ಬರಿಗೂ ಮೇಯರ್ ಗಂಗಾಂಬಿಕೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಸಿ. ಪಲ್ಲವಿ ಅವರಿಗೆ ಬಿಜೆಪಿ ಸದಸ್ಯರು ಸಭೆಯಲ್ಲೇ ಪ್ರತ್ಯೇಕವಾಗಿ ಸನ್ಮಾನ ಮಾಡಿದರು. ಕಾಂಗ್ರೆಸ್ ಸದಸ್ಯರು ಕೂಡ ಶಾಲು, ಹಾರ ತರಿಸಿ ಪಳನಿಯಮ್ಮ ಅವರನ್ನು ಅಭಿನಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು