ಜೋಡಿ ಕೊಲೆ ಪ್ರಕರಣ: ಅವ್ವ ಮಾದೇಶ್ ಸೇರಿ ಎಂಟು ಜನರ ಖುಲಾಸೆ

7
avva madesha

ಜೋಡಿ ಕೊಲೆ ಪ್ರಕರಣ: ಅವ್ವ ಮಾದೇಶ್ ಸೇರಿ ಎಂಟು ಜನರ ಖುಲಾಸೆ

Published:
Updated:

ಬೆಂಗಳೂರು: ಜೋಡಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮೈಸೂರಿನ ಮಾಜಿ ಕಾರ್ಪೊರೇಟರ್ ಅವ್ವಾ ಮಾದೇಶ ಸೇರಿದಂತೆ ಎಂಟು ಜನ ಆರೋಪಿಗಳನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.

ಈ ಕುರಿತಂತೆ ಅವ್ವ ಮಾದೇಶ, ಆತನ ಸಹೋದರ ಮಂಜು ಹಾಗೂ ಆರು ಜನ ಸಹಚರರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮಾನ್ಯ ಮಾಡಿದೆ.

ಖುಲಾಸೆಗೊಂಡವರು: ಮಾದೇಶ ಅಲಿಯಾಸ್‌ ಅವ್ವಾ ಮಾದೇಶ, ಆತನ ಸಹೋದರ ಮಂಜು, ಸಹಚರರಾದ ಸತೀಶ ಅಲಿಯಾಸ್ ಪಾಲಹಳ್ಳಿ ಸತೀಶ, ಚಂದು ಅಲಿಯಾಸ್‌ ಚಂದ್ರು, ರವಿ ಅಲಿಯಾಸ್ ಒಂಟಿಕೊಪ್ಪಲು ರವಿ, ಶಿವಕುಮಾರ್ ಅಲಿಯಾಸ್ ಕಾಳಪ್ಪ, ರಮೇಶ್‌ ಅಲಿಯಾಸ್‌ ಅಂಬಿ ಅಲಿಯಾಸ್ ಅಂಬರೀಷ ಮತ್ತು ಕೆ.ಕೆ ಅಲಿಯಾಸ್ ಕಾರ್ತೀಕ.

ರಾಜೇಶ್ ಅಲಿಯಾಸ್‌ ಗಾಂಧಿ ಹಾಗೂ ರಾಮು ಎಂಬುವರನ್ನು ಅವ್ವ ಮಾದೇಶ ಹಾಗೂ ಸಹಚರರು 2008ರ ಮೇ 14ರಂದು ಹುಣಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹಿಂದಿನ ಮುದ್ದಪ್ಪ ಫಾರ್ಮ್‌ ಹೌಸ್‌ನಲ್ಲಿ ಮಚ್ಚು, ಲಾಂಗುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪ ಹೊತ್ತಿದ್ದರು.

ಪ್ರಕರಣದಲ್ಲಿ ಮೈಸೂರಿನ ಸೆಷನ್ಸ್ ಕೋರ್ಟ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

‘ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳು ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಾಕ್ಷ್ಯಧಾರಗಳ ಕೊರತೆಯಿಂದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ’ ಎಂದು ನ್ಯಾಯಪೀಠ ಪ್ರಕಟಿಸಿದೆ.

ಅವ್ವಾ ಮಾದೇಶ ಹಾಗೂ ಮಂಜು ಪರ ಹಷ್ಮತ್‌ ಪಾಷಾ, ಚಂದು ಮತ್ತು ರಮೇಶ್‌ ಬಾಬು ಪರ ಹಿರಿಯ ವಕೀಲ ರವಿ ಬಿ.ನಾಯಕ್ ಹಾಗೂ ಉಳಿದವರ ಪರ ಪರಮೇಶ್ವರಪ್ಪ ವಾದ ಮಂಡಿಸಿದರು.

ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಉಂಟಾದ ಮನಸ್ತಾಪವೇ ಕೊಲೆಗೆ ಕಾರಣ ಎನ್ನಲಾಗಿತ್ತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !