ಬೆಂಗಳೂರು: ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮುಚ್ಚಿಸಲಾಗಿದ್ದ ಮೂಡಲಪಾಳ್ಯದ ಡಾ. ರಾಜು ಕೃಷ್ಣಮೂರ್ತಿಯವರ ಸಾಗರ್ ಕ್ಲಿನಿಕ್ ಬುಧವಾರದಿಂದ ಮತ್ತೆ ಕಾರ್ಯಾರಂಭ ಮಾಡಿತು.
ಆಸ್ಪತ್ರೆ ಮುಚ್ಚಿಸಿದ್ದರ ವಿರುದ್ಧ ಸಾರ್ವಜನಿಕರು ಮತ್ತು ರೋಗಿಗಳ ಸಂಬಂಧಿಕರು ಮಂಗಳವಾರ ಪ್ರತಿಭಟನೆ ನಡೆಸಿದ್ದರು.
’ಮಾಸ್ಕ್ ಹಾಕದೆ, ಸ್ಯಾನಿಟೈಸರ್ ಬಳಸದೆ ಚಿಕಿತ್ಸೆ ನೀಡುತ್ತಿರುವುದು ಸರಿಯಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ನೋಟಿಸ್ ನೀಡಿದ್ದರು. ದಿನಕ್ಕೆ ನೂರಾರು ಜನ ಬರುತ್ತಿರುವುದರಿಂದ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ವಿವರಣೆ ನೀಡಿದ್ದೆ. ಸರ್ಕಾರದ ಆದೇಶದನ್ವಯ, ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಮತ್ತೆ ಕ್ಲಿನಿಕ್ ಆರಂಭಿಸಲಾಗಿದೆ‘ ಎಂದು ಡಾ. ರಾಜು ಕೃಷ್ಣಮೂರ್ತಿ ’ಪ್ರಜಾವಾಣಿ‘ಗೆ ತಿಳಿಸಿದರು.
’ಕೆಲಸ ಮಾಡುವುದು ಬಿಟ್ಟು ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ನಾನೂ ಮನೆಯಲ್ಲಿದ್ದೆ. ಆದರೆ, ಸಾರ್ವಜನಿಕರು ತುಂಬಾ ಒತ್ತಾಯ ಮಾಡಿದ್ದರಿಂದ ಕೆಲಸ ಆರಂಭಿಸಿದ್ದೇನೆ‘ ಎಂದೂ ಅವರು ಹೇಳಿದರು.
’ಸಾಗರ್ ಕ್ಲಿನಿಕ್‌ಗೆ 18ರಂದು ಭೇಟಿ ನೀಡಿ ಡಾ. ರಾಜು ಅವರಿಗೆ ನೋಟಿಸ್ ನೀಡಲಾಗಿತ್ತು. ಕ್ಲಿನಿಕ್ ಮತ್ತೆ ಆರಂಭವಾಗಿರುವುದರ ಬಗ್ಗೆ ಮಾಹಿತಿ ಇಲ್ಲ. ಕೆಪಿಎಂಇ ಕಾಯ್ದೆಯನ್ವಯ ಅವರು ಕ್ಲಿನಿಕ್ ನಡೆಸುವುದಕ್ಕೆ ಸಂಬಂಧಿಸಿದಂತೆ ಪರವಾನಗಿ ಪತ್ರವನ್ನೂ ಅವರು ಈವರೆಗೆ ನೀಡಿಲ್ಲ. ಗುರುವಾರ ಕ್ಲಿನಿಕ್‌ಗೆ ಭೇಟಿ ನೀಡಿ ಮತ್ತೆ ವಿವರಣೆ ಪಡೆಯಲಾಗುವುದು‘ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಿ. ಶ್ರೀನಿವಾಸ್ ತಿಳಿಸಿದರು.
’ಜಿಲ್ಲಾ ಆರೋಗ್ಯಾಧಿಕಾರಿಗಳು ಪರವಾನಗಿ ಪತ್ರ ಕೇಳಿದಾಗ ನನ್ನ ಬಳಿ ಇರಲಿಲ್ಲ. ಮನೆಗೆ ಹೋಗಿ ತೆಗೆದುಕೊಂಡು ಬರುವುದಾಗಿ ಹೇಳಿದ್ದೆ. ಮನೆಗೆ ಹೋಗುವುದರೊಳಗೆ ಸಚಿವ ವಿ.ಸೋಮಣ್ಣ ಅವರು ತಮ್ಮ ಮನೆಗೆ ಕರೆಸಿಕೊಂಡು ವಿವರಣೆ ಪಡೆದರು. ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪರವಾನಗಿ ಪತ್ರ ತೋರಿಸಲಾಗುವುದು‘ ಎಂದು ಡಾ. ರಾಜು ಸ್ಪಷ್ಟಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.