ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ನಿಧಾನ; ಅಪಾಯಕ್ಕೆ ಆಹ್ವಾನ

ಮಳೆಗಾಲ ಆರಂಭವಾದರೂ ಚರಂಡಿ ನವೀಕರಣ ಕಾಮಗಾರಿ ಅಪೂರ್ಣ
Last Updated 19 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಪದ್ಮನಾಭ ನಗರದ ಸಿ.ಜೆ. ವೆಂಕಟೇಶ ದಾಸ್ ರಸ್ತೆಯಲ್ಲಿನಮಳೆ ನೀರು ಚರಂಡಿ ಬಾಯಿ ಕಳೆದು ನಿಂತಿದ್ದು, ಸಾರ್ವಜನಿಕರು ಭಯದಿಂದ ಹೆಜ್ಜೆ ಹಾಕುತ್ತಿದ್ದಾರೆ.

ರಸ್ತೆಯ ಇಕ್ಕೆಲಗಳಲ್ಲಿ ತಲಾ ‌200 ಮೀಟರ್‌ ಮಳೆ ನೀರು ಚರಂಡಿಯ ನವೀಕರಣ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡು ಅದಾಗಲೇ ಒಂದು ತಿಂಗಳು ಉರುಳಿದೆ. ಮಳೆಗಾಲ ಆರಂಭವಾದರೂ ಅರ್ಧದಷ್ಟು ಕಾಮಗಾರಿ ಸಹ ಆಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಒಳಚರಂಡಿ ಪೈಪ್‌, ಸ್ಲ್ಯಾಬ್‌ ಅಳವಡಿಕೆ ಹಿನ್ನೆಲೆಯಲ್ಲಿ ಮಳೆ ನೀರು ಚರಂಡಿಯನ್ನು ರಸ್ತೆಯ ಎರಡು ಬದಿ ಒಡೆದು ಹಾಕಲಾಗಿದೆ.ಇದರಿಂದ ಪಾದಚಾರಿಗಳು ಓಡಾಡುವುದೇ ದುಸ್ತರವಾಗಿದೆ. ಇನ್ನೊಂದೆಡೆ ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶದ ಕೊರತೆಯಿಂದ ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ. ಪಾದಚಾರಿ ಮಾರ್ಗವನ್ನು ಸಹ ಸಂಪೂರ್ಣ ಕಿತ್ತು ಹಾಕಲಾಗಿದ್ದು, ವೃದ್ಧರು ಹಾಗೂ ಮಕ್ಕಳುರಸ್ತೆಯಲ್ಲಿ ನಡೆದಾಡಲು ಹರಸಾಹಸ ಪಡುತ್ತಿದ್ದಾರೆ.

ಮಳೆಗಾಲದಲ್ಲಿ ಹಳೆಯಮಳೆ ನೀರು ಚರಂಡಿಯಲ್ಲಿ ನೀರು ಬ್ಲಾಕ್‌ ಆಗಿ, ರಸ್ತೆಗೆ ಧುಮುಕುತ್ತಿತ್ತು. ಈ ಸಮಸ್ಯೆ ತಪ್ಪಿಸಲು ಸ್ಲ್ಯಾಬ್‌ ಅಳವಡಿಕೆ ಮಾಡಲಾಗುತ್ತಿದೆ. ಆದರೆ, ರಸ್ತೆಯ ಎರಡೂ ಕಡೆ ಮಳೆ ನೀರು ಚರಂಡಿಯನ್ನು ಒಡೆಯಲಾಗಿದೆ. ಸದ್ಯ ಒಂದು ಕಡೆ ಮಾತ್ರ ಕಾಮಗಾರಿ ಆರಂಭಿಸಲಾಗಿದೆ.

ಮನೆಯಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ: ‘ಹಂತ ಹಂತವಾಗಿಮಳೆ ನೀರು ಚರಂಡಿ ಒಡೆದು, ಕಾಮಗಾರಿ ಕೈಗೊಂಡಿದ್ದಲ್ಲಿ ಸಮಸ್ಯೆ ಉಂಟಾಗುತ್ತಿರಲಿಲ್ಲ. ಆದರೆ, ಎರಡೂ ಬದಿಗೆ ಒಡೆದಿರುವುದರಿಂದ ಗಲೀಜು ನೀರು ಹಾಗೂ ಕಸ ಒಂದೆಡೆ ನಿಂತುಕೊಳ್ಳುತ್ತಿದೆ. ಇದರಿಂದ ಕೆಟ್ಟ ವಾಸನೆ ಬರುತ್ತಿದ್ದು, ಮನೆಯಲ್ಲಿ ಕುಳಿತುಕೊಳ್ಳಲು ಆಗುತ್ತಿಲ್ಲ’ ಎಂದು ಪದ್ಮನಾಭನಗರದ ನಿವಾಸಿ ರಾಮಚಂದ್ರ ತಿಳಿಸಿದರು.

‘ಮಳೆಗಾಲ ಪ್ರಾರಂಭವಾದರೂಮಳೆ ನೀರು ಚರಂಡಿ ಕಾಮಗಾರಿಯನ್ನು ಬಿಬಿಎಂಪಿ ಪೂರ್ಣಗೊಳಿಸಿಲ್ಲ. ವಾಸನೆಯಿಂದಾಗಿಅಂಗಡಿಗೆ ಗಿರಾಕಿಗಳು ಸಹ ಬರುತ್ತಿಲ್ಲ. ಚರಂಡಿಯನ್ನು ಒಡೆದು ಹಾಗೆಯೇ ಬಿಟ್ಟಿರುವುದರಿಂದ ಮಕ್ಕಳು ಹಾಗೂ ವೃದ್ಧರು ಬಿದ್ದು ಗಾಯಮಾಡಿಕೊಳ್ಳುವ ಸಾಧ್ಯತೆಯಿದೆ. ಮಳೆ ಬಂದರೆ ಕೊಳಚೆ ನೀರು ಅಂಗಡಿಗೆ ಪ್ರವೇಶಿಸುತ್ತದೆ. ಅಧಿಕಾರಿಗಳು ಕೂಡ ಸ್ಪಂದಿಸುತ್ತಿಲ್ಲ’ ಎಂದು ಅಂಗಡಿ ಮಾಲೀಕ ಮನಿಷ್ ಅಳಲು ತೋಡಿಕೊಂಡರು.

ಗುತ್ತಿಗೆದಾರ ಶಿವಕುಮಾರ್ ಪ್ರತಿಕ್ರಿಯಿಸಿ, ‘ಜೆಸಿಬಿಯವರು ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ಚರಂಡಿಯನ್ನು ಒಡೆದು ಹಾಕಿದ್ದಾರೆ. ಇದರಿಂದ ನಾವು ಕೂಡ ಅಸಹಾಯಕರಾಗಿದ್ದೇವೆ.ಆದಷ್ಟು ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ. 4 ಅಡಿ ಸ್ಲ್ಯಾಬ್‌ ಹಾಕಿ, ಗ್ರಿಲ್‌ ಅಳವಡಿಸಲಾಗುತ್ತದೆ’ ಎಂದರು.

15ದಿನಗಳಲ್ಲಿ ಕಾಮಗಾರಿ ಪೂರ್ಣ

‘ಸಿ.ಜೆ. ವೆಂಕಟೇಶ ದಾಸ್ ರಸ್ತೆಯ ಅಡ್ಡ ರಸ್ತೆಗಳಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಐದು ರಸ್ತೆಗಳಲ್ಲಿ ನಾಲ್ಕು ರಸ್ತೆಗಳ ಕೆಲಸ ಮುಗಿಸಿದ್ದೇವೆ. ಮಳೆಗಾಲದಲ್ಲಿಚರಂಡಿ ನೀರು ರಸ್ತೆಗೆ ಧುಮುಕುತ್ತಿತ್ತು. ಹಾಗಾಗಿ ಮಳೆ ನೀರು ಚರಂಡಿ ಒಡೆದು,ಸ್ಲ್ಯಾಬ್‌ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. 15 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ಬಿಬಿಎಂಪಿ ಎಂಜಿನಿಯರ್ ಅಶೋಕ್‌ ಬಿರಾದರ ತಿಳಿಸಿದರು.

**

ಪಾದಚಾರಿ ಮಾರ್ಗವನ್ನು ಕಿತ್ತು ಎರಡು ತಿಂಗಳಾಗಿದೆ. ಎರಡೂ ಕಡೆ ಮಳೆ ನೀರು ಚರಂಡಿ ಒಡೆದಿರುವುದು ಸಮಸ್ಯೆಯನ್ನು ಉಂಟುಮಾಡಿದೆ. ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗುತ್ತಿದೆ

–ನಾಗೇಶ್, ಆಟೊ ಚಾಲಕ

**

ಒಡೆದ ಮಳೆ ನೀರು ಚರಂಡಿಗೆ ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿದೆ. ಇದೀಗ ಮಳೆ ಬಂದಲ್ಲಿ ನೀರು ರಸ್ತೆಗೆ ಬರುತ್ತದೆ. ಪಾದಚಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ
- ಕರುಣಾಕರ ಶೆಟ್ಟಿ, ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT