ಶನಿವಾರ, ಜುಲೈ 24, 2021
20 °C
ನೈಸ್‌ ರಸ್ತೆಯ ಅಕ್ಕ–ಪಕ್ಕದ ನಿವಾಸಿಗಳಿಗೆ ದುರ್ವಾಸನೆಯ ಸಂಕಷ್ಟ

ರಸ್ತೆ ಮೇಲೆಯೇ ಹರಿಯುತ್ತಿದೆ ಕೊಳಚೆ ನೀರು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಉತ್ತರ ತಾಲ್ಲೂಕಿನ ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೈಸ್‌ ರಸ್ತೆಯ ಪಕ್ಕದ ಮಾರ್ಗದ ಕೆಳಸೇತುವೆಯ ಕೆಳಗೆ ಕೊಳಚೆ ನೀರು ಹರಿಯುತ್ತಿದೆ. ಈ ಮಾರ್ಗದಲ್ಲಿ ಓಡಾಡಲೂ ಆಗದಷ್ಟು ನೀರು ನಿಂತಿದ್ದು, ದುರ್ವಾಸನೆ ಹೆಚ್ಚಾಗಿದೆ.

‘ಈ ಬಗ್ಗೆ ಈ ಹಿಂದೆ ಪ್ರಜಾವಾಣಿಯಲ್ಲಿ ವರದಿ ಬಂದಾಗ, ಬಿಬಿಎಂಪಿ ಅಧಿಕಾರಿಗಳು, ಪಂಚಾಯಿತಿ ಸಿಬ್ಬಂದಿ ಸರಿ ಮಾಡಿಸಿದ್ದರು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮತ್ತೆ ಸಮಸ್ಯೆಯಾಗಿದೆ. ಕೊಳಚೆ ನೀರಿನ ವಾಸನೆ ತಡೆಯಲು ಆಗುತ್ತಿಲ್ಲ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅಕ್ಕ–ಪಕ್ಕದ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ’ ಎಂದು ಕೆಂಗೇರಿಯಲ್ಲಿ ಕಾಲೇಜೊಂದರ ಪ್ರಾಚಾರ್ಯರಾಗಿರುವ ಸ್ಥಳೀಯ ನಿವಾಸಿ ರಮೇಶ್‌ ಹೇಳಿದರು.

‘ಹಗಲು ಹೊತ್ತು ಕೊಳಚೆ ನೀರಿನ ಸಮಸ್ಯೆಯಾದರೆ, ರಾತ್ರಿ ವೇಳೆ ಈ ಕೆಳಸೇತುವೆ ಮೂಲಕ ಹಾದು ಹೋಗಲು ಭಯವಾಗುತ್ತದೆ. ಕಳ್ಳರ ಕಾಟವೂ ಹೆಚ್ಚಾಗಿದೆ’ ಎಂದು ಅವರು ದೂರಿದರು.

‘ಮೊದಲು ಈ ರಸ್ತೆಯುದ್ದಕ್ಕೂ ಕಸದ ರಾಶಿ ಇರುತ್ತಿತ್ತು. ಈಗ ಆ ಸಮಸ್ಯೆಯಿಲ್ಲ. ಆದರೆ, ಕೊಳಚೆ ನೀರು ಹರಿಯುವುದು ಮಾತ್ರ ನಿಂತಿಲ್ಲ. ಈ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡುಹಿಡಿಯಬೇಕಾಗಿದೆ’ ಎಂದು ಟೊಯೊಟಾ ಕಂಪನಿ ಉದ್ಯೋಗಿ, ವಿಶ್ವೇಶ್ವರಯ್ಯ ಬಡಾವಣೆಯ ನಿವಾಸಿ ಸುಧಾಕರ್‌ ಹೇಳಿದರು.

‘ಕೊಡಿಗೆಹಳ್ಳಿ ಕೆರೆ ತುಂಬಿ ಹರಿದ ನೀರಿನ ಜೊತೆಗೆ, ನೈಸ್‌ ಕಂಪನಿಯ ಕಟ್ಟಡದ ಕೊಳಚೆ ನೀರು ಸೇರಿ ಈ ರಸ್ತೆಯಲ್ಲಿ ಹರಿಯುತ್ತಿದೆ. ಈ ಬಗ್ಗೆ ಕೊಡಿಗೆಹಳ್ಳಿ ಪಂಚಾಯಿತಿ ಅಧಿಕಾರಿಗಳಿಗೆ, ಬಿಬಿಎಂಪಿಯವರಿಗೆ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ವಿಜಯಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಈ ರಸ್ತೆಯಲ್ಲಿ ಓಡಾಡಲಾಗದೆ ಎಷ್ಟೋ ಜನ ಜಾರಿ ಬಿದ್ದಿದ್ದಾರೆ. ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲೂ ಅಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ ಎಂದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು