ಬುಧವಾರ, ಜುಲೈ 6, 2022
22 °C
ನೂತನ ಹೈಬ್ರಿಡ್‌ ತಂತ್ರಜ್ಞಾನದಲ್ಲಿ ನಿರ್ಮಿಸಿದ ಕಟ್ಟಡ ಲೋಕಾರ್ಪಣೆಗೊಳಿಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್‌

ಡಿಆರ್‌ಡಿಒ ಕಟ್ಟಡ ಸಂಕೀರ್ಣ 45 ದಿನಗಳಲ್ಲೇ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಅಂಗ ಸಂಸ್ಥೆಯಾದ ವೈಮಾನಿಕ ಅಭಿವೃದ್ಧಿ ಸಂಸ್ಥೆಯ (ಎಡಿಇ) ಹೊಸ ತಿಪ್ಪಸಂದ್ರದ ಪ್ರಾಂಗಣದಲ್ಲಿ ವಿಮಾನ ಹಾರಾಟ ನಿಯಂತ್ರಣ ವ್ಯವಸ್ಥೆಯ ಏಕೀಕೃತ ಕಟ್ಟಡ ಸಂಕೀರ್ಣವನ್ನು (ಎಫ್‌ಸಿಎಸ್‌) ದಾಖಲೆಯ 45 ದಿನಗಳಲ್ಲಿ ನಿರ್ಮಿಸಿದೆ. ದೇಸಿ ಹೈಬ್ರಿಡ್‌ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ಏಳು ಅಂತಸ್ತುಗಳ ಈ ಕಟ್ಟಡವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಗುರುವಾರ ಲೋಕಾರ್ಪಣೆಗೊಳಿಸಿದರು. 

ಡಿಆರ್‌ಡಿಒ ಎಲ್‌ ಆ್ಯಂಡ್‌ ಟಿ ಸಹಯೋಗದಲ್ಲಿ ಈ ಕಟ್ಟಡ ಸಂಕೀರ್ಣ ನಿರ್ಮಿಸಲಾಗಿದೆ. ಮದ್ರಾಸ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಹಾಗೂ ರೂರ್ಕಿ ಐಐಟಿಗಳು ಇದರ ವಿನ್ಯಾಸಗೊಳಿಸುವಿಕೆಲ್ಲಿ ತಾಂತ್ರಿಕ ನೆರವು ಒದಗಿಸಿವೆ. ಅತ್ಯಾಧುನಿಕ ಮಧ್ಯಮ ಯುದ್ಧ ವಿಮಾನಗಳ ಸುಧಾರಣೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ  ಚಟುವಟಿಕೆಗಳಿಗೆ ಈ ಕಟ್ಟಡ ಬಳಕೆ ಆಗಲಿದೆ. ವೈಮಾನಿಕ ಅಭಿವೃದ್ಧಿ ಸಂಸ್ಥೆಯು ಯುದ್ಧ ವಿಮಾನದ ಎಲೆಕ್ಟ್ರಾನಿಕ್ಸ್‌ ಪರಿಕರಗಳನ್ನೂ ಇಲ್ಲಿ ಅಭಿವೃದ್ಧಿಪಡಿಸಲಿದೆ.   

‘ಈ ಹೈಬ್ರಿಡ್ ತಂತ್ರಜ್ಞಾನವು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮೈಲುಗಲ್ಲು. ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತವು ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲು ಇದು ಕಾರಣವಾಗಲಿದೆ. ನಿರ್ಮಾಣ ಪ್ರಕ್ರಿಯೆಯ ಉತ್ಪಾದಕತೆಯನ್ನು ಇದು ಹೆಚ್ಚಿಸಲಿದೆ. ಸಂಪನ್ಮೂಲದ ಸದ್ಬಳಕೆಯನ್ನು ಉತ್ತೇಜಿಸಲಿದೆ. ಸರಕು ವ್ಯರ್ಥವಾಗುವುದನ್ನು ತಡೆದು, ನಷ್ಟವನ್ನು ತಪ್ಪಿಸಲಿದೆ. ನಿರ್ಮಾಣ ಕಾರ್ಯವು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ನೆರವಾಗಲಿದೆ’ ಎಂದು ರಾಜನಾಥ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಯುದ್ಧ ವಿಮಾನಗಳ ಪೈಲೆಟ್‌ಗಳಿಗೆ ನೈಜ ಅನುಭವ ಒದಗಿಸುವ ಸಿಮುಲೇಟರ್‌ ತರಬೇತಿ ನೀಡುವುದಕ್ಕೂ ಈ ಕಟ್ಟಡ ಬಳಕೆ ಆಗಲಿದೆ. ಪೈಲಟ್‌ಗಳು ತಪ್ಪುಗಳಿಂದ ಪಾಠ ಕಲಿಯುವಾಗಲೂ ಯಾವುದೇ ನಷ್ಟವಾಗದಂತಹ ತರಬೇತಿ ಇದರಿಂದ ಸಾಧ್ಯ. ಈ ಅತ್ಯಾಧುನಿಕ ಕಟ್ಟಡ ಸಂಕೀರ್ಣವು ರಾಷ್ಟ್ರೀಯ ಭದ್ರತೆ ವ್ಯವಸ್ಥೆಯನ್ನು ಬಲಿಷ್ಟಗೊಳಿಸುವಲ್ಲಿ ಈ ಮಹತ್ತರ ಪಾತ್ರ ವಹಿಸಲಿದೆ’ ಎಂದು ರಕ್ಷಣಾ ಸಚಿವರು ಬಣ್ಣಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ನವಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ನಮ್ಮ ಸರ್ಕಾರದ ಆಶಯ. ಇದಕ್ಕೆ ಡಿಆರ್‌ಡಿಓ ಸಹಕಾರ ಅಗತ್ಯ. ರಾಜ್ಯದ ನಿರ್ಮಾಣ ಚಟುವಟಿಕೆಗೆ ಈ ಹೈಬ್ರಿಡ್‌ ತಂತ್ರಜ್ಞಾನ ಬಳಸಿ ಸಂಪನ್ಮೂಲ ಹಾಗೂ ಸಮಯ ಉಳಿಸಬಹುದು’ ಎಂದರು. 

ಏನಿದು ಹೈಬ್ರಿಡ್‌ ತಂತ್ರಜ್ಞಾನ?
ಡಿಆರ್‌ಡಿಒ ಎಲ್ ಆ್ಯಂಡ್‌ ಟಿ ಜೊತೆ ಜಂಟಿಯಾಗಿ ಅಭಿವೃದ್ಧಿಪಡಿಸಿದ ಹೈಬ್ರಿಡ್‌ ತಂತ್ರಜ್ಞಾನದಲ್ಲಿ ಸಾಂಪ್ರದಾಯಿಕ ವಿಧಾನದ ಜೊತೆಗೆ, ಪ್ರಿ– ಎಂಜಿನಿಯರಿಂಗ್‌ ಮತ್ತು ಪ್ರಿ– ಕಾಸ್ಟ್‌ ವಿಧಾನ ಅಳವಡಿಸಿಕೊಳ್ಳಲಾಗಿದೆ. ತೊಲೆಗಳನ್ನು ಹಾಗೂ ಕಂಬಗಳ ಚೌಕಟ್ಟುಗಳನ್ನು ಉಕ್ಕಿನ ತಟ್ಟೆಗಳಿಂದ ನಿರ್ಮಿಸಲಾಗುತ್ತದೆ. ಕಂಬಗಳು ಉಕ್ಕಿನ ಟೊಳ್ಳಾದ ಕೊಳವೆಗಳಂತಿದ್ದು, ಅವುಗಳಿಗೆ ಕಾಂಕ್ರೀಟನ್ನು ಭರ್ತಿ ಮಾಡಲಾಗುತ್ತದೆ. ಮೊದಲೇ ಸಿದ್ಧಪಡಿಸಲಾದ ಸ್ಲ್ಯಾಬ್‌ಗಳನ್ನು ಸ್ಥಳಕ್ಕೆ ತಂದು ಜೋಡಿಸಲಾಗುತ್ತದೆ. ಇದೇ ವೇಳೆ ಕಾಂಕ್ರೀಟೀಕರಣವನ್ನೂ ನಡೆಸುವ ಮೂಲಕ ಒಣ ಜೋಡಣೆಗಳನ್ನು ತಪ್ಪಿಸಲಾಗುತ್ತದೆ. ಕಾಂಕ್ರೀಟ್‌ಗೆ ಉಕ್ಕು ಶಾಶ್ವತವಾದ ಚೌಕಟ್ಟನ್ನು ಒದಗಿಸುತ್ತದೆ. ಇದು ಸಮಯ ಹಾಗೂ ಶ್ರಮವನ್ನು ಗಣನೀಯವಾಗಿ ಕಡಿಮೆಗೊಳಿಸುತ್ತದೆ.

*

ಹೈಬ್ರಿಡ್‌ ತಂತ್ರಜ್ಞಾನ ಬಳಸಿ 65 ದಿನಗಳಲ್ಲಿ ಅತ್ಯುತ್ತಮ ಕಟ್ಟಡವನ್ನು ನಿರ್ಮಿಸಲಾಗಿದೆ. ಸರ್ಕಾರದ ಟೆಂಡರ್ ಪ್ರಕ್ರಿಯೆ ಅವಧಿಯಲ್ಲಿ ಏಳು ಮಹಡಿ ಕಟ್ಟಡ ಕಟ್ಟಿರುವುದು ಯಾವುದೇ ಚಮತ್ಕಾರಕ್ಕಿಂತಲೂ ಕಡಿಮೆ ಇಲ್ಲ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

*

ಈ ಅಪೂರ್ವ ಕಟ್ಟಡ ಯೋಜನೆಯು ನವಭಾರತದ ನವಶಕ್ತಿಯ ಮೂರ್ತ ರೂಪ. ದೇಶ ಮಾತ್ರವಲ್ಲ ಇಡೀ ಜಗತ್ತಿನ ಗಮನ ಸೆಳೆದ ಈ ತಂತ್ರಜ್ಞಾನ ಆತ್ಮನಿರ್ಭರ ಭಾರತದ ಶಕ್ತಿಯ ಪ್ರತಿಬಿಂಬ.
-ರಾಜನಾಥ ಸಿಂಗ್, ರಕ್ಷಣಾ ಸಚಿವ

ಅಂಕಿ ಅಂಶ
1.3 ಲಕ್ಷ ಚದರ ಅಡಿ: 
ಎಫ್‌ಸಿಎಸ್‌ ಕಟ್ಟಡದ ವಿಸ್ತೀರ್ಣ
45 ದಿನಗಳು: ಕಟ್ಟಡ ನಿರ್ಮಾಣಕ್ಕೆ ತಗುಲಿದ ಅವಧಿ
7: ಕಟ್ಟಡದಲ್ಲಿರುವ ಮಹಡಿಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು