ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿ–ಸೇಫ್‌’; ನಿಯಮ ಮೀರಿದರೆ ಕಠಿಣ ಕ್ರಮ

75 ಕಡೆಗಳಲ್ಲಿ ಪೊಲೀಸರ ಕಾರ್ಯಾಚರಣೆ
Last Updated 30 ಡಿಸೆಂಬರ್ 2019, 22:43 IST
ಅಕ್ಷರ ಗಾತ್ರ

ಬೆಂಗಳೂರು: ಮದ್ಯ ಕುಡಿದು ವಾಹನ ಚಲಾಯಿಸದಂತೆ ಜಾಗೃತಿ ಮೂಡಿಸಲು ಬೆಂಗಳೂರು ಸಂಚಾರ ಪೊಲೀಸರು ಈಗಾಗಲೇ ‘ಬಿ–ಸೇಫ್’ ಅಭಿಯಾನ ಶುರು ಮಾಡಿದ್ದು, ಹಲವೆಡೆ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿದ್ದಾರೆ.

ಅಭಿಯಾನದಿಂದ ಎಚ್ಚೆತ್ತುಕೊಳ್ಳದೇ ಇದೇ 31ರಂದು ರಾತ್ರಿ ಯಾರಾದರೂ ಮದ್ಯ ಕುಡಿದು ವಾಹನ ಚಲಾಯಿಸಿದರೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಚಾಲನಾ ಪರವಾನಗಿಯೂ ಅಮಾನತಾಗಲಿದೆ.

ಹೊಸ ವರ್ಷವನ್ನು ಸ್ವಾಗತಿಸಲು ಜನರು ಉತ್ಸುಕರಾಗಿದ್ದಾರೆ. ಹಲವೆಡೆ ಸಂಭ್ರಮಾಚರಣೆ ಹಾಗೂ ರಾತ್ರಿಯಿಡೀ ಸಂತೋಷ ಕೂಟಗಳನ್ನು ಆಯೋಜಿಸಲು ತಯಾರಿ ನಡೆದಿದೆ. ಇದೇ ಸಂದರ್ಭದಲ್ಲೇ ಮದ್ಯ ಸೇವಿಸಿ ಅದರ ಮತ್ತಿನಲ್ಲೇ ವಾಹನ ಚಲಾಯಿಸಿಕೊಂಡು ಹೋಗುವವರ ಮೇಲೆ ಸಂಚಾರ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಇದೇ ಮೊದಲ ಬಾರಿಗೆ ನಗರದ 175 ಕಡೆಗಳಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ವಾಹನ ತಪಾಸಣೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ. ಕೆಲ ಸಿಬ್ಬಂದಿಗೆ ಬಾಡಿ ಕ್ಯಾಮೆರಾಗಳನ್ನೂ ನೀಡಲಾಗಿದ್ದು, ಎದುರಿಗೆ ಇರುವ ವ್ಯಕ್ತಿಗಳ ಚಲನವಲನವೂ ಸೆರೆಯಾಗಲಿದೆ.

ಸಂತೋಷ ಕೂಟಗಳು ನಡೆಯುವ ಪಬ್‌, ಬಾರ್‌ ಆ್ಯಂಡ್‌ ರೆಸ್ಟೊರೆಂಟ್ ಹಾಗೂ ಹೋಟೆಲ್‌ಗಳ ಎದುರೇ ಪೊಲೀಸರು ತಪಾಸಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.ಹೋಟೆಲ್‌ನಿಂದ ಹೊರಗೆ ಬಂದು ವಾಹನ ಚಲಾಯಿಸಲು ಮುಂದಾಗುವವರನ್ನು ಸ್ಥಳದಲ್ಲೇ ತಡೆದು ಆಲ್ಕೋಮೀಟರ್‌ ಮೂಲಕ ತಪಾಸಣೆ ನಡೆಸಿ, ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ವಾಹನಗಳನ್ನು ಜಪ್ತಿ ಮಾಡಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಿದ್ದಾರೆ.

‘ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿದರೆ ಅನಾಹುತಗಳು ಸಂಭವಿಸುತ್ತವೆ. ಈ ಹಿಂದೆ ನಡೆದಿರುವ ಹಲವು ಅಪಘಾತಗಳಿಗೆ ಮದ್ಯ ಕುಡಿದಿದ್ದ ಚಾಲಕನೇ ಕಾರಣ ಎಂಬುದು ಗೊತ್ತಾಗಿದೆ. ಈ ಬಾರಿ ಅಂಥ ಘಟನೆಗಳಿಗೆ ಆಸ್ಪದ ನೀಡುವುದಿಲ್ಲ. ಹೀಗಾಗಿಯೇ ವಾಹನಗಳ ತಪಾಸಣೆ ಚುರುಕಿನಿಂದ ನಡೆಯಲಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ಹೇಳಿದರು.

‘ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ ಸೇರಿದಂತೆ ನಗರದ ಬಹುತೇಕ ಪ್ರದೇಶಗಳಲ್ಲಿ 31ರಂದು ರಾತ್ರಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿರುತ್ತಾರೆ. ರಸ್ತೆ ದಾಟುವವರು ಹಾಗೂ ಫುಟ್‌ಪಾತ್‌ ಮೇಲೆ ಓಡಾಡುವವರೂ ಹೆಚ್ಚಿರುತ್ತಾರೆ. ಹೀಗಾಗಿ ಚಾಲಕರು ನಿಧಾನವಾಗಿ ವಾಹನ ಚಲಾಯಿಸಬೇಕು’ ಎಂದರು.

‘ಮದ್ಯ ಕುಡಿದು ವಾಹನ ಓಡಿಸಿದರೆ ನಿಯಂತ್ರಣ ತಪ್ಪಿ ಅಪಘಾತಗಳು ಉಂಟಾಗುತ್ತವೆ. ಅಮಾಯಕರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಈ ಬಾರಿ ಯಾರೇ ನಿಯಮ ಮೀರಿದರೂ ಕಠಿಣ ಕ್ರಮ ನಿಶ್ಚಿತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT