ಡಿಆರ್‌ಡಿಒಗೆ ನುಗ್ಗಲು ಯತ್ನಿಸಿದ ಕುಡುಕರ ಬಂಧನ

7
ಸೆಕ್ಯುರಿಟಿ ಸೂಪರ್‌ವೈಸರ್ ಮೇಲೆ ಹಲ್ಲೆ * ಕೊಲೆ ಯತ್ನ ಆರೋಪದಡಿ ಎಫ್‌ಐಆರ್

ಡಿಆರ್‌ಡಿಒಗೆ ನುಗ್ಗಲು ಯತ್ನಿಸಿದ ಕುಡುಕರ ಬಂಧನ

Published:
Updated:

ಬೆಂಗಳೂರು: ಸಿ.ವಿ.ರಾಮನ್‌ನಗರದಲ್ಲಿರುವ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಆವರಣ ಪ್ರವೇಶಿಸಲು ಯತ್ನಿಸಿದ್ದ ಮೂವರು ಹೋಟೆಲ್‌ ನೌಕರರು ಬೈಯಪ್ಪನಹಳ್ಳಿ ಪೊಲೀಸರ ಅತಿಥಿಗಳಾಗಿದ್ದಾರೆ.

ಹೊಸ ತಿಪ್ಪಸಂದ್ರದ ನಿವಾಸಿಗಳಾದ ಮಹೇಶ್, ಪ್ರೇಮ್ ಹಾಗೂ ದೇವಾನಂದ ಬಂಧಿತರು. ಅ.1ರ ರಾತ್ರಿ ಪಾನಮತ್ತರಾಗಿ ಡಿಆರ್‌ಡಿಒ ಬಳಿ ತೆರಳಿದ್ದ ಆರೋಪಿಗಳು, ‘ಈಗ ನಾವು ಒಳಗೆ ಹೋಗಬೇಕು. ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದರೆ, ನೀವೂ ಆಚೆ ಬನ್ನಿ’ ಎಂದು ದಾಂದಲೆ ನಡೆಸಿದ್ದರು.

ಸೆಕ್ಯುರಿಟಿ ಸೂಪರ್‌ವೈಸರ್‌ಗಳಾದ ಸುಂದರಮೂರ್ತಿ ಹಾಗೂ ಜೈಕುಮಾರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪಿಗಳು, ವಿಚಾರಿಸಲು ಬಂದ ಯದುಕೃಷ್ಣನ್ ಎಂಬುವರ ಹೊಟ್ಟೆಗೂ ಒದ್ದಿದ್ದರು. ಕುಸಿದು ಬಿದ್ದ ಅವರು, ಸ್ವಲ್ಪ ಸಮಯದಲ್ಲೇ ಪ್ರಜ್ಞೆ ತಪ್ಪಿದ್ದರು ಎಂದು ಪೊಲೀಸರು ಹೇಳಿದರು.

ಇದರಿಂದ ಕುಪಿತಗೊಂಡ ಸುಂದರಮೂರ್ತಿ, ಕೂಡಲೇ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿದ್ದರು. ಆಗ ಆರೋಪಿಗಳು, ‘ಯಾರಿಗೋ ಫೋನ್ ಮಾಡಿದ್ದೆ. ಅವರೂ ಬರಲಿ. ಎಲ್ಲರಿಗೂ ಒಟ್ಟಿಗೇ ಚಳಿ ಬಿಡಿಸ್ತೀವಿ’ ಎಂದು ಕೂಗಾಡಿದ್ದರು. ಬಳಿಕ ಕೋಲು ಮುರಿದುಕೊಂಡು ಸುಂದರಮೂರ್ತಿ ಹಾಗೂ ಜೈಕುಮಾರ್‌ಗೂ ಥಳಿಸಿದ್ದರು.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಸ್ಥಳಕ್ಕೆ ಬಂದು ಹತ್ತಕ್ಕೂ ಹೆಚ್ಚು ಸೆಕ್ಯುರಿಟಿ ಗಾರ್ಡ್‌ಗಳು, ಆ ಮೂವರನ್ನೂ ಹಿಡಿದು ಕೋಣೆಯೊಂದರಲ್ಲಿ ಕೂಡಿದ್ದರು. ಬಳಿಕ ಹೊಯ್ಸಳ ಸಿಬ್ಬಂದಿ ಹೋಗಿ, ಆರೋಪಿಗಳನ್ನು ಠಾಣೆಗೆ ಕರೆತಂದರು ಎಂದು ಪೊಲೀಸರು ಮಾಹಿತಿ ನೀಡಿದರು.

‘ದಾಂದಲೆ ಸಂಬಂಧ ಸುಭೇದಾರ್ ಮೇಜರ್ ಕಮಲ್ ಸಿಂಗ್ ಅವರು ದೂರು ಕೊಟ್ಟಿದ್ದು, ಅತಿಕ್ರಮ ಪ್ರವೇಶ (ಐಪಿಸಿ 447), ಅಕ್ರಮ ಬಂಧನ (341), ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ (353), ಕೊಲೆ ಯತ್ನ (307) ಹಾಗೂ ಜೀವಬೆದರಿಕೆ (506) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೇಜರ್‌ ದವಡೆಗೆ ಗುದ್ದಿದರು

‘ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ನಾನೂ ಸ್ಥಳಕ್ಕೆ ಹೋದೆ. ಆಗ ನನ್ನ ದವಡೆಗೂ ಗುದ್ದಿದ ಆ ಮೂವರು, ‘ನೀನು ಹೊರಗೆ ಸಿಗು. ಜೀವ ತೆಗೆಯುತ್ತೇವೆ’ ಎಂದು ಬೆದರಿಕೆ ಹಾಕಿದರು’ ಎಂದು ಕಮಲ್ ಸಿಂಗ್ ದೂರಿನಲ್ಲಿ ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 2

  Sad
 • 0

  Frustrated
 • 4

  Angry

Comments:

0 comments

Write the first review for this !