ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್ ಹಣ ಡ್ರಾ: ವರದಿ ನೀಡಲು ಸೂಚನೆ

ಬ್ಯಾಂಕ್‌ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಸಭೆ; ಮತ ಯಂತ್ರ, ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ಇಂದು
Last Updated 7 ಏಪ್ರಿಲ್ 2018, 6:11 IST
ಅಕ್ಷರ ಗಾತ್ರ

ಬಳ್ಳಾರಿ:  ‘ಎರಡು ತಿಂಗಳ ಅವಧಿಯಲ್ಲಿ ಒಮ್ಮೆಯೂ ಹಣ ಪಡೆಯದೇ ದಿಢೀರ್ ಆಗಿ ಹಣ ಪಡೆಯುವವರ ಬ್ಯಾಂಕ್ ಖಾತೆಗಳ ವಿವರ ನೀಡಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್‌ ಪ್ರಸಾದ್‌ ಮನೋಹರ್ ಸೂಚಿಸಿದರು.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸಂಜೆ ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಎರಡು ತಿಂಗಳ ಅವಧಿಯಲ್ಲಿ ₹1 ಲಕ್ಷಕ್ಕೂ ಹೆಚ್ಚು ಹಣ ಪಡೆಯುವ ಮತ್ತು ಠೇವಣಿ ಇಡುವ ಪ್ರತಿಯೊಬ್ಬರ ಖಾತೆ ಮಾಹಿತಿ ನೀಡಬೇಕು’ ಎಂದು ಸ್ಪಷ್ಟಪಡಿಸಿದರು.

‘ಜಿಲ್ಲೆಯಲ್ಲಿರುವ ಎಲ್ಲ 320 ಬ್ಯಾಂಕ್ ಶಾಖೆಗಳೂ ವರದಿ ಸಲ್ಲಿಸುವುದು. ಕಡ್ಡಾಯ. ಎಲ್ಲವನ್ನೂ ಕ್ರೋಢೀಕರಿಸಿ ಆಯಾ ಬ್ಯಾಂಕ್‌ ವ್ಯವಸ್ಥಾಪಕರು ನಿತ್ಯವೂ ಚುನಾವಣಾ ವೆಚ್ಚ ಪರಿಶೀಲನಾ ವಿಭಾಗಕ್ಕೆ ಸಲ್ಲಿಸಬೇಕು’ ಎಂದರು.

ಕ್ರಿಮಿನಲ್‌ ಮೊಕದ್ದಮೆ: ‘ನಿಗದಿಪಡಿಸಿದ ಅವಧಿಯೊಳಗೆ ವರದಿ ಸಲ್ಲಿಸದಿದ್ದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ ಸೆಕ್ಷನ್ 32ರ ಅನ್ವಯ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಬ್ಯಾಂಕ್ ಸಂಚಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಚುನಾವಣಾ ಪ್ರಕ್ರಿಯೆಗೆ ಎಲ್ಲರೂ ಸಹಕರಿಸಬೇಕು. ಅತಿಯಾದ ಹಣದ ವ್ಯವಹಾರ ನಡೆದರೂ ವರದಿ ಮಾಡದೇ ಸುಮ್ಮನಿರುವುದು ಕೂಡ ಅಪರಾಧ’ ಎಂದ ಅವರು, ‘ಸಭೆಗೆ ಗೈರುಹಾಜರಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಸುವುದು’ ಎಂದೂ ಹೇಳಿದರು.

ಹಣ ವರ್ಗಾವಣೆಯ ಮಾಹಿತಿ: ‘ಶಾಖೆಗಳಿಗೆ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡದೆ ಹಣ ರವಾನಿಸಿದರೆ, ದಾಖಲೆಗಳು ಇಲ್ಲದಿದ್ದರೆ ಚೆಕ್‌ಪೋಸ್ಟ್‌ಗಳಲ್ಲಿ ಹಣವನ್ನು ವಶಪಡಿಸಿಕೊಳ್ಳಲಾಗುವುದು. ಚುನಾವಣೆ ಪ್ರಕ್ರಿಯೆ
ಮುಗಿಯುವವರೆಗೂ ವಾಪಸ್‌ ಕೊಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ.ರಾಜೇಂದ್ರ ಇದ್ದರು.

ವಿವಿ ಪ್ಯಾಟ್ ಪ್ರಾತ್ಯಕ್ಷಿಕೆ ಇಂದು

ಬಳ್ಳಾರಿ:  ವಿಧಾನಸಭಾ ಚುನಾವಣೆಯಲ್ಲಿ ಬಳಕೆಯಾಗುವ ಮತ ಯಂತ್ರ ಮತ್ತು ಮತದಾನ ಖಾತರಿ ಯಂತ್ರಗಳ ಕಾರ್ಯನಿರ್ವಹಣೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಏ.7 ರಂದು ನಡೆಯಲಿದೆ ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್ ತಿಳಿಸಿದ್ದಾರೆ.

ಬೆಳಿಗ್ಗೆ 11 ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತ್ತು ಮಧ್ಯಾಹ್ನ 3 ಕ್ಕೆ ಹೊಸಪೇಟೆಯ ಚಿತ್ತವಾಡಿಗೆಯಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜ್ ಎದುರಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದಿದ್ದಾರೆ.

‘ಸಂಘ– ಸಂಸ್ಥೆಗಳ ಮೇಲೆ ಕಣ್ಣಿಡಿ’

ಬಳ್ಳಾರಿ: ‘ಪಕ್ಷಗಳು ಮತ್ತು ಅಭ್ಯರ್ಥಿಗಳು ಸ್ವಸಹಾಯ ಸಂಘಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಓಲೈಸುವುದು ಸಹಜ. ಹಾಗಾಗಿ ಸಂಘ–ಸಂಸ್ಥೆಗಳ ಮೇಲೂ ಕಣ್ಣಿಡುವುದು ಕಡ್ಡಾಯ’ ಎಂದರು.

‘ಸ್ವಸಹಾಯ ಗುಂಪುಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಖಾತೆಗಳಿಗೆ ಕನಿಷ್ಠ ₹50 ಸಾವಿರ  ಠೇವಣಿಯಾದರೂ ಮಾಹಿತಿ ನೀಡಬೇಕು’ ಎಂದು ಅವರು ಸ್ಪಷ್ಟಪಡಿಸಿದರು.

**

ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಮೇರೆಗೆ ಏಳು ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗಿದೆ – ಡಾ.ವಿ.ರಾಮಪ್ರಸಾದ್‌ ಮನೋಹರ್‌, ಜಿಲ್ಲಾ ಚುನಾವಣಾಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT