ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಬಿಗಡಾಯಿಸುತ್ತಿದೆ ನೀರಿನ ಬವಣೆ

Last Updated 11 ಏಪ್ರಿಲ್ 2022, 19:35 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆಯಲ್ಲಿ ನಗರದ ಜನರನ್ನು ಬಿಡದೆ ಕಾಡುವ ಕುಡಿಯುವ ನೀರಿನ ಸಮಸ್ಯೆ, ಈ ಬಾರಿಯೂ ಕಾಡಲಾರಂಭಿಸಿದೆ. ಅದರಲ್ಲೂ ಹೊರವಲಯದಲ್ಲಿ ನೀರಿನ ಬವಣೆ ಹೆಚ್ಚಾಗಿದೆ.

800 ಚದರ ಕಿ.ಮೀ. ವಿಸ್ತಾರಕ್ಕೆ ವ್ಯಾಪಿಸಿರುವ ಬೆಂಗಳೂರಿಗೆ ನೀರಿನ ಸಮಸ್ಯೆ ಪ್ರತಿವರ್ಷ ಕಾಡುತ್ತಲೇ ಇದೆ. ದಿನದಿಂದ ದಿನಕ್ಕೆ ನಗರ ಬೆಳೆಯುತ್ತಿರುವುದರಿಂದ ಸಮಸ್ಯೆಯೂ ಬೆಳೆಯುತ್ತಲೇ ಇದೆ.

2007ರಲ್ಲಿ ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು 5ನೇ ಹಂತದ ಕಾವೇರಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಇನ್ನೂ ನಡೆಯುತ್ತಿದೆ. ಇದು ಪೂರ್ಣಗೊಳ್ಳಲು ಕನಿಷ್ಠ ಒಂದೂವರೆ ವರ್ಷವಾದರೂ ಬೇಕಾಗಬಹುದು. ಅಲ್ಲಿಯ ತನಕ ದಿನಕ್ಕೆ ಲಭ್ಯ ಇರುವ 140.70 ಕೋಟಿ ಲೀಟರ್‌ (1,470 ಎಂಎಲ್‌ಡಿ) ನೀರಿನಲ್ಲೇ ಜಲಮಂಡಳಿಯು ನಗರದ ಜನರ ನೀರಿನ ದಾಹ ತಣಿಸಬೇಕಿದೆ.

ಬೇರೆ ಜಲಾಶಯಗಳಿಂದ ನಗರಕ್ಕೆ ನೀರು ತರುವ ಯೋಜನೆಗಳು ಇನ್ನೂ ಕೈಗೂಡಿಲ್ಲ. ಆದ್ದರಿಂದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸದ್ಯಕ್ಕೆ ಅವಕಾಶ ಇಲ್ಲ.

‘10.70 ಲಕ್ಷ ಮನೆಗಳಿಗೆ ಜಲಮಂಡಳಿ ನೀರಿನ ಸಂಪರ್ಕ ನೀಡಿದೆ. ಪ್ರತಿನಿತ್ಯ 140.70 ಕೋಟಿ ಲೀಟರ್ ನೀರನ್ನು ನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ. ಅದರಲ್ಲಿ ಕಡಿಮೆ ಮಾಡುವ ಪ್ರಶ್ನೆ ಇಲ್ಲ, ಜಾಸ್ತಿ ಮಾಡಲು ಅವಕಾಶ ಇಲ್ಲ’ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

‘ಕಾವೇರಿ ನೀರಿನ ಜತೆಗೆ ಕೊಳವೆ ಬಾವಿಗಳನ್ನೂ ಜನ ನಂಬಿಕೊಂಡಿದ್ದಾರೆ. ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕುಸಿದು ನೀರು ಇಲ್ಲವಾದರೆ ಆಗ ಜಲಮಂಡಳಿ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈ ರೀತಿಯ ಸಂದರ್ಭಗಳನ್ನು ನಿರ್ವಹಿಸಿ ಸಮರ್ಪಕವಾಗಿ ನೀರು ಪೂರೈಸಲಾಗುತ್ತಿದೆ. ನಿಭಾಯಿಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ’ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು.

‘ಕಾವೇರಿ ನೀರನ್ನು ಪಂಪ್ ಮಾಡಿ, ಶುದ್ಧೀಕರಿಸಿಕೊಂಡು ಬೆಂಗಳೂರಿಗೆ ತರಬೇಕಿದೆ. ಬೇಸಿಗೆ ಇರಲಿ, ಮಳೆಗಾಲವೇ ಇರಲಿ ನೀರು ಪೂರೈಕೆಯನ್ನು ಜಲಮಂಡಳಿ ಕಡಿಮೆ ಮಾಡುವುದಿಲ್ಲ. ನೀರಿನ ಬಳಕೆ ಹೆಚ್ಚಾಗುವುದರಿಂದ ಮತ್ತು ಅಂತರ್ಜಲ ಕುಸಿಯುವುದರಿಂದ ಬೇಡಿಕೆ ಪ್ರಮಾಣ ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯವಾಗಿ ಶೇ 5ರಷ್ಟು ಏರಿಕೆಯಾಗುತ್ತದೆ. ನೋಡಲ್ ಅಧಿಕಾರಿಗಳು ಅದನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಜಲಮಂಡಳಿಯಲ್ಲಿ 65 ಟ್ಯಾಂಕರ್‌ಗಳಿದ್ದು, ನೀರಿನ ಸಮಸ್ಯೆ ತಲೆದೋರಿದ ಕಡೆಗೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆಯಾಗುತ್ತಿದೆ’ ಎಂದು ವಿವರಿಸಿದರು.

ಹೊರವಲಯದಲ್ಲಿ ಹೆಚ್ಚಿದ ಸಮಸ್ಯೆ

ಕುಡಿಯುವ ನೀರಿನ ಸಮಸ್ಯೆ ನಗರದ ಹೊರವಲಯದ ನಿವಾಸಿಗಳನ್ನು ಹೆಚ್ಚಾಗಿ ಕಾಡುತ್ತಿದೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿ ವ್ಯಾಪ್ತಿಯ ಬಡಾವಣೆಗಳಲ್ಲೇ ಸಮಸ್ಯೆ ಹೆಚ್ಚು.

ಕಾವೇರಿ ನೀರಿನ ಸಂಪರ್ಕ ಇನ್ನೂ ಈ ಬಡಾವಣೆಗಳಿಗೆ ಲಭ್ಯವಾಗಿಲ್ಲ. ಕೊಳವೆ ಬಾವಿಗಳೇ ಈ ಬಡಾವಣೆಗಳಿಗೆ ನೀರಿನ ಮೂಲ. ಬೇಸಿಗೆಯಲ್ಲಿ ಅಂತರ್ಜಲ ಕುಸಿತ ಆಗಿರುವುದರಿಂದ ಬವಣೆ ಹೆಚ್ಚಾಗಿದೆ. ಮಹದೇವಪುರ ವಲಯ ವ್ಯಾಪ್ತಿಯಲ್ಲೇ 31 ಹಳ್ಳಿಗಳು ಬಿಬಿಎಂಪಿಗೆ ಸೇರ್ಪಡೆಯಾಗಿವೆ. ಆದ್ದರಿಂದ ಆ ವಲಯದಲ್ಲೇ ಕುಡಿಯುವ ನೀರಿನ ಸಮಸ್ಯೆ ಹೆಚ್ಚು.

ಐ‌.ಟಿ ಕಂಪನಿಗಳು ಹೆಚ್ಚಾಗಿರುವುದರಿಂದ ಈ ವ್ಯಾಪ್ತಿಯಲ್ಲಿ ನಗರ ಕೂಡ ವೇಗವಾಗಿ ಬೆಳೆಯುತ್ತಿದೆ. ಅಲ್ಲಿಗೆ ಕಾವೇರಿ ನೀರು ಪೂರೈಕೆ ಮಾಡುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲು.

ವರ್ತೂರು, ಸರ್ಜಾಪುರ, ಮಾರತಹಳ್ಳಿ, ವೈಟ್‌ಫೀಲ್ಡ್ ಸುತ್ತಮುತ್ತಲ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪೂರ್ವ ವಲಯ, ಯಲಹಂಕ ವಲಯ, ಬೊಮ್ಮನಹಳ್ಳಿ ವಲಯ, ರಾಜರಾಜೇಶ್ವರಿನಗರ, ದಾಸರಹಳ್ಳಿ ವಲಯದಲ್ಲಿ ನೀರಿನ ಸಮಸ್ಯೆ ಕಾಡುವುದು ತಪ್ಪಿಲ್ಲ.

ಖಾಸಗಿ ಟ್ಯಾಂಕರ್‌ಗಳನ್ನು ಜನ ಆಶ್ರಯಿಸಿದ್ದಾರೆ. ಡೀಸೆಲ್ ದರ ಏರಿಕೆಯಾಗಿದೆ ಎಂಬ ಕಾರಣಕ್ಕೆ ಟ್ಯಾಂಕರ್ ಮಾಲೀಕರು ನೀರಿನ ದರವನ್ನೂ ಹೆಚ್ಚಳ ಮಾಡಿದ್ದಾರೆ. ದರ ನಿಯಂತ್ರಣಕ್ಕೆ ಬಿಬಿಎಂಪಿ ಮುಂದಾಗಬೇಕು ಎಂಬುದು ನಿವಾಸಿಗಳ ಒತ್ತಾಯ.

ಶುದ್ಧ ಕುಡಿಯುವ ನೀರಿನ ಘಟಕಗಳೂ ಕೊಳವೆ ಬಾವಿಗಳನ್ನು ಆಶ್ರಯಿಸಿಯೇ ನಡೆಯುತ್ತಿವೆ. ಕೊಳವೆ ಬಾವಿಗಳಲ್ಲೇ ನೀರಿಲ್ಲದಿದ್ದರೆ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಬನಶಂಕರಿ 6ನೇ ಹಂತಕ್ಕೆ ಕಾವೇರಿ ಶಾಪ

ಬನಶಂಕರಿ 6ನೇ ಹಂತದಲ್ಲಿ 22 ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಕಾವೇರಿ ನೀರಿನ ಸಂಪರ್ಕ ಈವರೆಗೆ ಲಭ್ಯವಾಗದೆ ಪ್ರತಿ ಬೇಸಿಗೆಯಲ್ಲೂ ಜನ ತೊಂದರೆ ಅನುಭವಿಸುತ್ತಿದ್ದಾರೆ.‌ ಕೊಳವೆ ಬಾವಿಗಳೇ ಈ ಬಡಾವಣೆಯ ಜಲಮೂಲವಾಗಿದ್ದು, ಬೇಸಿಗೆಯಲ್ಲಿ ಅವು ಬರಿದಾಗಿ ನೀರಿನ ಹಾಹಾಕಾರ ಇಡೀ ಬಡಾವಣೆಯನ್ನು ಕಾಡುತ್ತಿದೆ.

ಬಿಡಿಎ ಅಭಿವೃದ್ಧಿಪಡಿಸಿರುವ ಈ ಬಡಾವಣೆ ಈವರೆಗೆ ಬಿಬಿಎಂಪಿಗೆ ಹಸ್ತಾಂತರ ಆಗಿಲ್ಲ. ಆದ್ದರಿಂದ ಕಾವೇರಿ ನೀರಿನ ಸಂಪರ್ಕ ಪಡೆಯಲು ಸಾಧ್ಯವಾಗಿಲ್ಲ. ಶಾಪಗ್ರಸ್ತರಂತೆ ಜನ ಪ್ರತಿ ವರ್ಷ ತೊಂದರೆ ಅನುಭವಿಸುವಂತಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ. ಸಾವಿರ ಅಡಿ ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆದರೂ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತಲೇ ಇದೆ. ಜನಪ್ರತಿನಿಧಿಗಳು 22 ವರ್ಷಗಳಿಂದ ಆಶ್ವಾಸನೆ ನೀಡುತ್ತಲೇ ಇದ್ದಾರೆ ಎಂದು ಇಲ್ಲಿನ ಜನ ಬೇಸರ ವ್ಯಕ್ತಪಡಿಸುತ್ತಾರೆ.

‘ನಿವೇಶನಗಳ ಬೆಲೆ ಚದರ ಅಡಿಗೆ ₹10 ಸಾವಿರಕ್ಕೆ ಏರಿಕೆಯಾಗಿದೆ. ನಿವೇಶನಗಳನ್ನು ಬಿಡಿಎ ಹರಾಜು ಹಾಕಿ ಬೊಕ್ಕಸ ತುಂಬಿಕೊಳ್ಳುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಮತ್ತು ಇತರ ಮೂಲ ಸೌಕರ್ಯಗಳ ಬಗ್ಗೆ ಬಿಡಿಎ ಕಿಂಚಿತ್ತು ತಲೆ ಕೆಡಿಸಿಕೊಂಡಿಲ್ಲ’ ಎಂದು ಬನಶಂಕರಿ 6ನೇ ಹಂತದ 2ನೇ ಬ್ಲಾಕ್‌ ಹಾಗೂ ಕರಿಯನಪಾಳ್ಯ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವಿ.ಸತೀಶ್‌ ತಿಳಿಸಿದರು.

‘ಟ್ಯಾಂಕರ್‌ನಲ್ಲಿ ನೀರು ಖರೀದಿಸಿ ತಂದು ಜೀವನ ನಡೆಸಬೇಕಿದೆ. ನಿರ್ವಹಣೆಯನ್ನು ಬಿಬಿಎಂಪಿಗೆ ಹಸ್ತಾಂತರಿಸಿದರೆ ಸಮಸ್ಯೆ ಇತ್ಯರ್ಥವಾಗಲಿದೆ. ಅದನ್ನೂ ಮಾಡದೆ ಜನರನ್ನು ಕಷ್ಟಕ್ಕೆ ಸಿಲುಕಿಸಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT