ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಕ್ರೀಟ್‌ ರಸ್ತೆ ಕ್ಯೂರಿಂಗ್‌ಗೆ ಕುಡಿಯುವ ನೀರು

ಕುಡಿಯುವ ನೀರಿಗೆ ಹಾಹಾಕಾರ ಇದ್ದರೂ ನೀರು ಪೋಲು
Last Updated 2 ಮಾರ್ಚ್ 2020, 19:38 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆ ಅಡಿ ಇಡುತ್ತಿದ್ದಂತೆಯೇ ನಗರದಲ್ಲಿ ಕುರಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಅನೇಕ ಬಡಾವಣೆಗಳಲ್ಲಿ ಈಗಲೇ ಟ್ಯಾಂಕರ್‌ ನೀರು ಪೂರೈಕೆ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವೈಟ್‌ಟಾಪಿಂಗ್‌ ಕಾಮಗಾರಿಗಳಲ್ಲಿ ಕ್ಯೂರಿಂಗ್‌ ಸಲುವಾಗಿ ಕುಡಿಯುವ ನೀರನ್ನೇ ಬಳಸುತ್ತಿದೆ.

ಕಾಮಗಾರಿಗಳಲ್ಲಿ ಬಳಸುವ ಶುದ್ಧೀಕರಿಸಿದ ಕೊಳಚೆ ನೀರನ್ನು ಜಲಮಂಡಳಿ ಒದಗಿಸುತ್ತಿದೆ. ಆದರೂ ಗುತ್ತಿಗೆದಾರರು ಇದನ್ನು ಬಳಸದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ಕಾಮಗಾರಿಗೆ ಶುದ್ಧೀಕರಿಸಿದ ಕೊಳಚೆ ನೀರನ್ನು ಬಳಸಬೇಕು ಎಂದು ಗುತ್ತಿಗೆ ಷರತ್ತಿನಲ್ಲೇ ಉಲ್ಲೇಖಿಸಲಾಗಿರುತ್ತದೆ. ಆದರೂ ಯಾರೂ ಇದರ ಜಾರಿ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕಾಮಗಾರಿಗೆ ಯಾವ ಮೂಲದಿಂದ ನೀರನ್ನು ತರುತ್ತಾರೆ ಎಂದೂ ಅಧಿಕಾರಿಗಳು ಪರಿಶೀಲಿಸುತ್ತಿಲ್ಲ. ಕೆಲವೆಡೆ ಬೋರ್‌ವೆಲ್‌ ಕೊರೆದು ಅದರ ನೀರನ್ನು ಕಾಮಗಾರಿಗೆ ಬಳಸಲಾಗುತ್ತಿದೆ. ಕೆಲವು ಗುತ್ತಿಗೆದಾರರು ಕುಡಿಯುವ ನೀರನ್ನೇ ಮನಸೋ ಇಚ್ಛೆ ಬಳಸುತ್ತಿದ್ದಾರೆ ಎಂದು ವಿನಯ್‌ ದೂರಿದರು.

‘ಕ್ಯೂರಿಂಗ್‌ಗೆ ಶುದ್ಧ ನೀರೇ ಬೇಕೆಂದೇನಿಲ್ಲ. ಶುದ್ಧೀಕರಿಸಿದ ಕೊಳಚೆ ನೀರನ್ನೇ ಬಳಸುವಂತೆ ಸೂಚಿಸಿರುತ್ತೇವೆ. ಈ ಬಗ್ಗೆ ಗುತ್ತಿಗೆದಾರರಿಗೆ ಮತ್ತೊಮ್ಮೆ ಸೂಚನೆ ನೀಡಲಾಗುವುದು’ ಎಂದು ಬಿಬಿಎಂ‍ಪಿ ಮುಖ್ಯ ಎಂಜಿನಿಯರ್‌ ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶುದ್ಧೀಕರಿಸಿದ ಕೊಳಚೆ ನೀರನ್ನು ಕ್ಯೂರಿಂಗ್‌ಗೆ ಬಳಸಬಹುದು. ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸುವಂತೆ ಹಾಗೂ ಎಲ್ಲ ಗುತ್ತಿಗೆದಾರರಿಗೆ ಸೂಚನೆ ನೀಡುವಂತೆ ಬಿಬಿಎಂಪಿಯನ್ನು ಕೋರಿದ್ದೇವೆ’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜಲಮಂಡಳಿಯು ವಿವಿಧೆಡೆ 25 ಎಸ್‌ಟಿಪಿಗಳಲ್ಲಿ ನೀರನ್ನು ಶುದ್ಧೀಕರಿಸುತ್ತಿದೆ. ಸರ್ಕಾರಿ ಸಂಸ್ಥೆಗಳು ಹಾಗೂ ಬೃಹತ್‌ ಕಂಪನಿಗಳಿಗೆ 31 ಕೋಟಿ ಲೀಟರ್‌ಗಳಷ್ಟು ಶುದ್ಧೀಕರಿಸಿದ ನೀರನ್ನು ಪೂರೈಸುತ್ತಿದೆ.

‘ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌, ಯಲಹಂಕ ಹಾಗೂ ವೃಷಭಾವತಿ ವ್ಯಾಲಿ ಘಟಕಗಳಿಂದ ತೃತೀಯ ಹಂತದಲ್ಲಿ ಶುದ್ಧೀಕರಿಸಿದ ತ್ಯಾಜ್ಯ ನೀರು ಪೂರೈಸಲಾಗುತ್ತಿದೆ. ಉದ್ಯಾನಗಳಿಗೆ, ಶೌಚಾಲಯಗಳಿಗೆ ಹಾಗೂ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಇದನ್ನು ಬಳಸಬಹುದು. ಈ ನೀರು ಪೂರೈಕೆಗೆ ಟ್ಯಾಂಕರ್ ವ್ಯವಸ್ಥೆಯನ್ನೂ ಮಾಡಲಾಗಿದೆ. ತೃತೀಯ ಹಂತದ ಎಸ್‌ಟಿಪಿಗಳಿಂದ ಸಾರ್ವಜನಿಕರು ಅವರ ಸ್ವಂತ ಟ್ಯಾಂಕರ್‌ಗಳಿಂದಲೂ ನೀರು ತರಿಸಿಕೊಳ್ಳಬಹುದು’ ಎಂದು ಜಲಮಂಡಳಿ ಅಧಿಕಾರಿಯೊಬ್ಬರು ತಿಳಿಸಿದರು.

ಕೊಳವೆಬಾವಿ ನೀರಿಗಿಂತಲೂ ದರ ಕಡಿಮೆ
‘ಕೊಳವೆಬಾವಿಗಳ ನೀರನ್ನು ಸಾವಿರ, ಒಂದೂವರೆ ಸಾವಿರ ಅಡಿಗಿಂತ ಕೆಳಗಿನಿಂದ ಮೇಲೆತ್ತಬೇಕಾಗುತ್ತದೆ. ಇದಕ್ಕೆ ಹೆಚ್ಚು ವಿದ್ಯುತ್‌ ವ್ಯಯವಾಗುತ್ತದೆ. ಇದಕ್ಕೆ ಹೋಲಿಸಿದರೆ, ಶುದ್ಧೀಕರಿಸಿದ ತ್ಯಾಜ್ಯ ನೀರಿನ ಬೆಲೆ ತುಂಬಾ ಕಡಿಮೆ’ ಎಂದು ಜಲಮಂಡಳಿ ಅಧಿಕಾರಿ ತಿಳಿಸಿದರು.

ಶುದ್ಧೀಕರಿಸಿದ ನೀರಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ: 98451–97012.

ಅಂಕಿ ಅಂಶ
₹15:
ಪ್ರತಿ ಸಾವಿರ ಲೀಟರ್‌ ಶುದ್ಧೀಕರಿಸಿದ ನೀರಿನ ದರ
106 ಕೋಟಿ ಲೀಟರ್:ನಗರದ ಎಸ್‌ಟಿಪಿಗಳಲ್ಲಿ ನಿತ್ಯ ಶುದ್ಧೀಕರಣಗೊಳ್ಳುವ ನೀರಿನ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT