ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಅಪಘಾತ; ಚಾಲಕ ಸಾವು, ಏಳು ಮಂದಿ ಗಾಯ

* ಬೆನ್ಜ್ ಕಾರು ಅತೀ ವೇಗದ ಚಾಲನೆ * ಉದ್ಯಮಿ ವಿರುದ್ಧ ಪ್ರಕರಣ
Last Updated 7 ಡಿಸೆಂಬರ್ 2021, 19:33 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾನಗರದ ಸಿಎಂಎಚ್‌– ತಿಪ್ಪಸಂದ್ರ ಮುಖ್ಯರಸ್ತೆಯಲ್ಲಿ ಮರ್ಸಿಡಿಸ್ ಬೆನ್ಜ್ ಕಾರು ಅತೀ ವೇಗವಾಗಿ ಚಲಾಯಿಸಿದ್ದರಿಂದ ಸರಣಿ ಅಪಘಾತ ಸಂಭವಿಸಿದ್ದು, ಹರಿ ಮಹಾಂತ (36) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ಮಂಗಳವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ಬೆನ್ಜ್ ಕಾರು, ಮಾರುತಿ ಆಲ್ಟೊ ಕಾರು, ಸ್ವಿಫ್ಟ್‌ ಕಾರು, ಟಾಟಾ ಏಸ್, ಬಜಾಜ್ ಪಲ್ಸರ್ ಬೈಕ್ ಹಾಗೂ 2 ಆಟೊಗಳು ಜಖಂಗೊಂಡಿವೆ. ಬೆನ್ಜ್ ಕಾರು ಚಲಾಯಿಸುತ್ತಿದ್ದ ಸುವೀತ್ ಕಾರ್ಡಿಯೊ(43) ಎಂಬಾತ ಸಹ ತೀವ್ರವಾಗಿ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಹಲಸೂರು ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಮೃತ ಹರಿ ಮಹಾಂತ, ಅಸ್ಸಾಂನವರು. ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಆಲ್ಟೊ ಕಾರಿನಲ್ಲಿ ಹೊರಟಿದ್ದರು. ಅಪಘಾತದಿಂದ ಕಾರು ನಜ್ಜುಗುಜ್ಜಾಗಿ, ಕುಳಿತ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ. ಮೃತದೇಹವನ್ನು ಹೊರಗೆ ತೆಗೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ತಿಳಿಸಿದರು.

‘ಅಪಘಾತದಲ್ಲಿ ಸ್ವಿಫ್ಟ್‌ ಕಾರಿನ ಚಾಲಕ ಮಹೇಶ್ (27), ಅದರಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾಶ್ರೀ (22), ಎನ್‌. ಶ್ರೀನಿವಾಸ್ (26), ಆಟೊ ಚಾಲಕರಾದ ನಜೀಜ್ (38), ಶ್ರೀಕೃಷ್ಣ (30) ಹಾಗೂ ಪಲ್ಸರ್ ಬೈಕ್ ಚಾಲಕ ಆನಂದಕುಮಾರ್ (36) ಗಾಯಗೊಂಡಿದ್ದಾರೆ’ ಎಂದೂ ಹೇಳಿದರು.

ಬೆನ್ಜ್ ಕಾರು ಚಾಲಕನ ನಿರ್ಲಕ್ಷ್ಯ: ‘ಬಿಇಎಚ್‌ ಡಿಫೆನ್ಸ್ ಕಾಲೊನಿ ನಿವಾಸಿ ಸುವಿದ್, ಉದ್ಯಮ ನಡೆಸುತ್ತಿದ್ದಾನೆ. ಪತ್ನಿ ನಂದಿತಾ ಚೋರ್ಡಿಯಾ ಹೆಸರಿನಲ್ಲಿ ಮರ್ಸಿಡಿಸ್ ಬೆನ್ಜ್ ಕಾರು (ಕೆಎ 01 ಎಂಆರ್ 0423) ನೋಂದಣಿ ಮಾಡಿಸಿದ್ದ. ಅದೇ ಕಾರು ಚಲಾಯಿಸಿಕೊಂಡು ಸಿಎಂಎಚ್‌ ರಸ್ತೆಗೆ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಬಂದಿದ್ದ’ ಎಂದು ಪೊಲೀಸರು ಹೇಳಿದರು.

‘ಅತೀ ವೇಗವಾಗಿ ಕಾರು ಚಲಾಯಿಸಿದ್ದ ಸುವಿದ್, ನಿಯಂತ್ರಣ ಕಳೆದುಕೊಂಡಿದ್ದ. ಎದುರಿಗೆ ಹೋಗುತ್ತಿದ್ದ ಪಲ್ಸರ್‌ ಬೈಕ್‌ಗೆ ಕಾರು ಗುದ್ದಿದ್ದ. ನಂತರ, ಆಲ್ಟೊ ಕಾರು ಹಾಗೂ ಇತರೆ ವಾಹನಗಳಿಗೂ ಡಿಕ್ಕಿ ಹೊಡೆದಿತ್ತು. ಕೊನೆಯಲ್ಲಿ ಬೆನ್ಜ್ ಕಾರು ರಸ್ತೆಯಲ್ಲೇ ಉರುಳಿ ಬಿದ್ದಿತ್ತು. ಕಾರಿನೊಳಗೆ ಸಿಲುಕಿದ್ದ ಸುವಿದ್‌ನನ್ನು ಸ್ಥಳೀಯರೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದೂ ಪೊಲೀಸರು ತಿಳಿಸಿದರು.

‘ಉದ್ಯಮಿ ಸುವಿದ್‌ ನಿರ್ಲಕ್ಷ್ಯದ ಚಾಲನೆಯೇ ಸರಣಿ ಅಪಘಾತಕ್ಕೆ ಕಾರಣವೆಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT