ಶುಕ್ರವಾರ, ನವೆಂಬರ್ 15, 2019
21 °C

ಚಾಲನೆಯ ವೇಳೆ ಫೋನ್; ಜೀವದ ಆಪತ್ತಿಗೆ ಆಹ್ವಾನ!

Published:
Updated:

ಬದುಕಿಗೆ ಅನಿವಾರ್ಯ ಎಂಬಂತಾಗಿರುವ ಮೊಬೈಲ್ ಫೋನ್‌ಗಳು ಜೀವಕ್ಕೇ ಅಪಾಯ ತಂದೊಡ್ಡುತ್ತಿವೆ. ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಲೇ ವಾಹನಗಳನ್ನು ಚಾಲನೆ ಮಾಡುವುದು ಸಾಮಾನ್ಯವಾಗಿ ಹೋಗಿದೆ. ಈ ಪ್ರವೃತ್ತಿಯನ್ನು ತಡೆಯದಿದ್ದರೆ ಯಾರದೋ ತಪ್ಪಿಗೆ ಮತ್ತಾರೋ ಜೀವ ತೆರಬೇಕಾಗಬಹುದು.

ವಾಹನ ಚಾಲನೆ ಮಾಡುತ್ತ ಫೋನ್‌ನಲ್ಲಿ ಮಾತನಾಡುತ್ತಿರುವವರ ಲಕ್ಷ್ಯ ರಸ್ತೆ ಮೇಲಿರುವುದಿಲ್ಲ. ವಾಹನದಲ್ಲಿ ದೇಹ ಮಾತ್ರವೇ ಇರುತ್ತದೆ, ಮನಸ್ಸು ಬೇರೆಯದೇ ಲೋಕದಲ್ಲಿರುತ್ತದೆ. ಮೈಯೆಲ್ಲ ಕಣ್ಣಾಗಿ ವಾಹನ ಚಲಾಯಿಸುವ ಸಂದರ್ಭದಲ್ಲೇ ಅಪಘಾತಗಳಾಗುವ ಸ್ಥಿತಿ ಇರುವ ಈ ದಿನಗಳಲ್ಲಿ, ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಓಡಿಸಿದರೆ ಸುರಕ್ಷಿತವಾಗಿ ಮನೆ ಸೇರುವುದು ಸಾಧ್ಯವೇ?

ಮೊಬೈಲ್‍ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಸಂದರ್ಭದಲ್ಲಿ ಅಪಘಾತವಾಗುವ ಸಂಭವ ನಾಲ್ಕು ಪಟ್ಟು ಹೆಚ್ಚಿರುತ್ತದೆ ಎಂದು ಕೆನಡಾದ ಅಧ್ಯಯನವೊಂದು ಹೇಳುತ್ತದೆ. ಅಮೆರಿಕದ ಉತಾ ವಿಶ್ವವಿದ್ಯಾಲಯ ಇದಕ್ಕೆ ಪುಷ್ಟಿ ನೀಡುವ ಪ್ರಯೋಗವನ್ನೂ ಮಾಡಿದೆ. ‘ಸೆಲ್‍ ಫೋನ್‍ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದು ಇಲ್ಲವೆ ಕುಡಿದು ವಾಹನ ಚಾಲನೆ ಮಾಡುವುದು ಹೆಚ್ಚುಕಡಿಮೆ ಎರಡೂ ಒಂದೇ ಫಲಿತಾಂಶ ನೀಡುತ್ತವೆ’ ಎಂದು ಪ್ರಾತ್ಯಕ್ಷಿಕೆ ಸಾಬೀತುಪಡಿಸಿದೆ. 

ತೀರಾ ಇತ್ತೀಚಿನ ಸಂಶೋಧನೆಗಳ ಪ್ರಕಾರ ಮೊಬೈಲ್ ಉಪಯೋಗಿಸುವಾಗ ವಾಹನ ಸವಾರರು ಮತ್ತು ಚಾಲಕರು ಸಹಜ ವೇಗ ಮತ್ತು ನಿಖರ ಮಾರ್ಗ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಚಾಲನೆ ಮಾಡುವಾಗ ಮೊಬೈಲ್‍ನಲ್ಲಿ ಮಾತನಾಡುವುದು ಮತ್ತು ಆ ಕಡೆ ಇರುವ ವ್ಯಕ್ತಿಯ ಮಾತನ್ನು ಕೇಳಿಸಿಕೊಳ್ಳುವುದು ಎರಡೂ ಅಪಾಯಕಾರಿ.

ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಸಿದ ರಸ್ತೆಯ ಮೇಲೆ ಸುಮಾರು 100 ವಿದ್ಯಾರ್ಥಿಗಳನ್ನು ವಾಹನ ಮಾದರಿಯ ಸಿಮ್ಯುಲೇಟರ್‌ಗಳಲ್ಲಿ ಚಾಲನೆ ಮಾಡುವಂತೆ ಹೇಳಲಾಯಿತು. ಚಾಲನೆ ವೇಳೆ ಮೊಬೈಲ್‌ ಕೊಟ್ಟು ಮಾತನಾಡುವಂತೆ ತಿಳಿಸಲಾಯಿತು. ಆಗ ಕೇಳಲಾದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಲು ಅವರಿಂದ ಸಾಧ್ಯವಾಗಲಿಲ್ಲ. ಮನೋವಿಜ್ಞಾನದ ಅಧ್ಯಯನಗಳ ಪ್ರಕಾರ, ಮಾತನಾಡುವ ಪ್ರಕ್ರಿಯೆಗಿಂತಲೂ ಕೇಳುವ ಪ್ರಕ್ರಿಯೆ ಕ್ಲಿಷ್ಟವಾದದ್ದು. ಮಾತನಾಡುತ್ತಾ ಅಥವಾ ಮಾತುಗಳನ್ನು ಆಲಿಸುತ್ತಾ ಚಲಿಸುವ ಯಂತ್ರವೊಂದನ್ನು ಸರಿಯಾದ ರೀತಿಯಲ್ಲಿ ಸುರಕ್ಷಿತವಾಗಿ ಚಾಲನೆ ಮಾಡುವುದು ಅಸಾಧ್ಯವಾದದ್ದು.

ವಾಹನ ಚಾಲಕರಿಗೆ ರಸ್ತೆಯಲ್ಲಿ ವಾಹನಗಳ ಹರಿವಿನ ಬಗ್ಗೆ ಅರಿವು ಇರುವುದಿಲ್ಲ. ಸಂಚಾರ ದಟ್ಟನೆಯಿಂದ ಕೂಡಿದ ಮುಖ್ಯ ರಸ್ತೆಗಳ ಸನ್ನಿವೇಶ ಪ್ರತಿ ಕ್ಷಣವೂ ಬದಲಾಗುತ್ತಿರುತ್ತದೆ. ಹೀಗಿರುವಾಗ ವಾಹನ ಚಾಲಕರಿಗೆ ಎದುರು ಬರುವ, ಪಕ್ಕದಲ್ಲಿರುವ ಮತ್ತು ವಾಹನಕ್ಕೆ ಅಡ್ಡಲಾಗಿ ಬರುವ ಪಾದಚಾರಿಗಳು, ಪ್ರಾಣಿಗಳ ಚಲನ-ವಲನಗಳ ಬಗ್ಗೆ ತೀವ್ರ ನಿಗಾ ಇರಬೇಕಾಗುತ್ತದೆ. ಚಾಲಕರು ಮೊಬೈಲ್‌ ಮಾತುಕತೆಯಲ್ಲಿ ಮೈಮರೆತರೆ ಕ್ಷಣ ಮಾತ್ರದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ.

ಕಾನೂನು, ನಿಯಮಾವಳಿ, ದಂಡದಿಂದ ಜನರ ಮನಸ್ಥಿತಿ ಮತ್ತು ಪ್ರವೃತ್ತಿಗೆ ಕಡಿವಾಣ ಹಾಕುವುದು ಸಾಧ್ಯವಿಲ್ಲ. ಜಾಗೃತಿ ಮತ್ತು ಮನಪರಿವರ್ತನೆ ಮುಖ್ಯ. ‘ಮನೆಯಲ್ಲಿ ನಿಮ್ಮ ಪ್ರೀತಿ ಪಾತ್ರರು ನಿಮಗಾಗಿ ಕಾಯುತ್ತಿರುತ್ತಾರೆ. ಸುರಕ್ಷಿತವಾಗಿ ಮನೆ ತಲುಪಿ’, ‘ನಿಮ್ಮ ಜೀವ ಅಮೂಲ್ಯ. ನಿಮ್ಮ ಕುಟುಂಬ ನಿಮ್ಮನ್ನೇ ನೆಚ್ಚಿಕೊಂಡಿದೆ’ ಎಂಬ ಭಾವನಾತ್ಮಕ ಎಚ್ಚರಿಕೆ ಸಂದೇಶಗಳು ಅಜಾಗರೂಕ ಚಾಲಕರ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮವನ್ನಾದರೂ ಬೀರುತ್ತವೆ.

– ಡಾ. ಅನಿಲ್‍ಕುಮಾರ್ ಪಿ.ಜಿ.

ಪೊಲೀಸ್ ಇನ್‌ಸ್ಪೆಕ್ಟರ್, ಸಂಚಾರ ಯೋಜನೆ,
ಬೆಂಗಳೂರು ನಗರ.

ಕಾನೂನು ಏನು ಹೇಳುತ್ತದೆ?

ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವವರ ವಿರುದ್ಧ ಭಾರತೀಯ ಮೋಟಾರು ವಾಹನ ಕಾಯ್ದೆ 1988 ಕಲಂ 177 ಮತ್ತು ಕರ್ನಾಟಕ ಮೋಟಾರು ವಾಹನ ನಿಯಮ  2001ರ (ಪರಿಷ್ಕೃತ) ನಿಯಮ 230ಎ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರ ಇದೇ ಜೂನ್‌ 25ರಂದು ರಾಜ್ಯಪತ್ರ ಪ್ರಕಟಿಸಿದೆ. ತಪ್ಪು ಮಾಡುವ ವಾಹನ ಸವಾರರಿಗೆ ವಿಧಿಸುವ ದಂಡದ ಮೊತ್ತವನ್ನು ಪರಿಷ್ಕರಿಸಿದೆ. 

ಮೊಬೈಲ್ ಬಳಕೆಗಿರುವ ದಂಡದ ಮೊತ್ತವನ್ನು ಪ್ರಥಮ ಅಪರಾಧಕ್ಕೆ ₹1000 ಹಾಗೂ ಎರಡನೇ ಮತ್ತು ನಂತರದ ಅಪರಾಧಕ್ಕೆ ₹2000 ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ.

* ಹೆಚ್ಚಿನ ಜನರು ವಾಹನ ಚಾಲನೆ ಮಾಡುವಾಗ ಕಿವಿಗೆ ಇಯರ್‌ ಫೋನ್‌, ಬ್ಲೂಟೂತ್‌ ಅಥವಾ ಹ್ಯಾಂಡ್ಸ್ ಫ್ರೀ ಸಾಧನ ಬಳಸಿ ಮೊಬೈಲ್‍ನಲ್ಲಿ ಮಾತನಾಡುತ್ತಾರೆ. ಇದು ಕೂಡ ಸುರಕ್ಷಿತ ಅಲ್ಲ.

ಮೊಬೈಲ್‍ನಲ್ಲಿ ಕೆಲವೊಮ್ಮ ಆಘಾತಕಾರಿ ಇಲ್ಲವೇ ಅತೀ ಸಂತೋಷಕರ  ವಿಷಯ ತಿಳಿಯಬಹುದು. ಈ ಎರಡೂ ಸಂದರ್ಭಗಳಲ್ಲಿ ಸಹಜವಾಗಿ ಚಾಲಕನು ತನ್ನ ಸ್ಥಿಮಿತ ಕಳೆದುಕೊಂಡು ಅಪಘಾತಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

* ವಾಹನ ಚಾಲನೆ ಮಾಡುವಾಗ ಅನಿವಾರ್ಯ ಪರಿಸ್ಥಿತಿಯಲ್ಲಿ ವಾಹನವನ್ನು ರಸ್ತೆಯ ಎಡ ಭಾಗದ ಅಂಚಿಗೆ ತೆಗೆದುಕೊಂಡು ಹೋಗಿ ಇನ್ನಿತರ ವಾಹನ ಚಾಲಕರಿಗೆ ತೊಂದರೆಯಾಗದಂತೆ ಮೊಬೈಲ್‌ನಲ್ಲಿ ಮಾತನಾಡುವುದು ಸರಿಯಾದ ಕ್ರಮ. 

ವಾಹನ ಚಾಲನೆ ಮಾಡುವಾಗ ಮೊಬೈಲ್ ಕರೆ ಸ್ವೀಕರಿಸದಿರುವ ನಿರ್ಧಾರದ ಬಗ್ಗೆ ನಿಮ್ಮೊಂದಿಗೆ ವ್ಯವಹರಿಸುವ ಎಲ್ಲ ವ್ಯಕ್ತಿಗಳಿಗೂ ತಿಳಿಸುವುದು ಸೂಕ್ತ 

* ನೀವು ಮೊಬೈಲ್‍ ಸ್ವೀಕರಿಸದಿದ್ದಲ್ಲಿ ಆಗ ವಾಹನ ಚಾಲನೆ ಮಾಡುತ್ತಿರಬಹುದು ಎಂಬ ಭಾವನೆ ಕರೆ ಮಾಡುತ್ತಿರುವವರಿಗೆ ಮೂಡುತ್ತದೆ.

 

ಪ್ರತಿಕ್ರಿಯಿಸಿ (+)