ಪ್ರಧಾನಿ ಬಳಿಗೂ ಬಿಜೆಪಿ ನಿಯೋಗ

7
ಏರ್‌ ಷೋ ಸ್ಥಳಾಂತರ ಮಾಡದಂತೆ ಡಿ.ವಿ.ಸದಾನಂದ ಗೌಡ ಒತ್ತಾಯ

ಪ್ರಧಾನಿ ಬಳಿಗೂ ಬಿಜೆಪಿ ನಿಯೋಗ

Published:
Updated:

ಬೆಂಗಳೂರು: ಏರೊ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಿಂದ ಬೇರೆ ಕಡೆಗೆ ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿ ಪ್ರಧಾನಿ ಬಳಿಗೂ ಬೆಂಗಳೂರಿನ ಸಂಸದರ ನಿಯೋಗ ತೆರಳಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು.

ನವದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಮಂಗಳವಾರ ಭೇಟಿ ಮಾಡಿ ಅವರು ಮಾತನಾಡಿದರು.

‘ಬೆಂಗಳೂರಿನಲ್ಲಿ 1996ರಿಂದ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿರುವ ಏರೊ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತದೆ ಎಂಬ ಸುದ್ದಿ ಹರಡಿದೆ. ಇದನ್ನು ನಾವೆಲ್ಲಾ ಸೂಕ್ಷ್ಮವಾಗಿ ಗಮನಿಸಿದ್ದೇವೆ. ವೈಮಾನಿಕ ಕ್ಷೇತ್ರದ ಶೇಕಡಾ 50 ರಷ್ಟನ್ನು ಬೆಂಗಳೂರಿನಲ್ಲಿ ತಯಾರಿಸಲಾಗುತ್ತಿದ್ದು, ಈ ಪ್ರದರ್ಶನಕ್ಕೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳು ಈಗಾಗಲೇ ಲಭ್ಯವಿದ್ದು ಕರ್ನಾಟಕದ ಪ್ರವಾಸೋಧ್ಯಮ ಬೆಳವಣಿಗೆಗೆ ಪೂರಕವಾಗಲಿದೆ’ ಎಂದರು.

‘ಉತ್ತರ ಪ್ರದೇಶ, ರಾಜಸ್ಥಾನ, ಗೋವಾ ಸೇರಿದಂತೆ ಅನೇಕ ರಾಜ್ಯಗಳು ವೈಮಾನಿಕ ಪ್ರದರ್ಶನವನ್ನು ತಮ್ಮಲ್ಲಿ ನಡೆಸುವಂತೆ ಬೇಡಿಕೆ ಸಲ್ಲಿಸಿವೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನು ಬೆಂಗಳೂರಿಂದ ಸ್ಥಳಾಂತರಿಸುವ ಬಗ್ಗೆ ಯಾವುದೇ ಖಚಿತ ನಿರ್ಧಾರವಾಗಿಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಪ್ರಧಾನ ಮಂತ್ರಿಗಳ ಗಮನಕ್ಕೂ ತರುತ್ತೇನೆ ಎಂದು ಭರವಸೆ ನೀಡಿದ್ದಾರೆ’ ಎಂದರು.

‘ನಿರ್ಮಲಾ ಸೀತಾರಾಮನ್‌ ಅವರು ರಾಜ್ಯಸಭೆಗೆ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ವೈಮಾನಿಕ ಪ್ರದರ್ಶನ ಸ್ಥಳಾಂತರಿಸುವ ಬೆಳವಣಿಗೆಯಿಂದ ಮುಜುಗರ ಉಂಟಾಗಲಿದ್ದು, ತಾವು ಪ್ರತಿನಿಧಿಸುವ ರಾಜ್ಯವನ್ನು ನಿರ್ಲಕ್ಷಿಸಿದಂತಾಗುವುದೆಂದು ಗಮನಕ್ಕೆ ತಂದಿದ್ದೇನೆ. ಬೆಂಗಳೂರಿನಲ್ಲಿ ನಡೆಸುವ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕೆಂದು ಕೋರಿದ್ದೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !