ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಮತಗಟ್ಟೆ ಕನಿಷ್ಠ ಸೌಲಭ್ಯ ಇರಲಿ

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ ಉಪ ಕಾರ್ಯದರ್ಶಿ ಸಲಹೆ
Last Updated 20 ಏಪ್ರಿಲ್ 2018, 8:16 IST
ಅಕ್ಷರ ಗಾತ್ರ

ಚಿತ್ತಾಪುರ: ‘ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ನಿಮಿತ್ತ ಪ್ರತಿಯೊಂದು ಮತಗಟ್ಟೆ ಕನಿಷ್ಠ ಸೌಲಭ್ಯ ಹೊಂದಿರಬೇಕು. ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹ್ಮದ್ ಯುಸೂಫ್ ಎಚ್ಚರಿಸಿದರು.

ಸ್ಥಳೀಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಮತದಾರರ ಅರಿವು ಮೂಡಿಸುವ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಮತಗಟ್ಟೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇರು ವುದು ಕಡ್ಡಾಯ. ಅಗತ್ಯವಿದ್ದರೆ ಶೌಚಾಲಯಗಳ ದುರಸ್ತಿ ಮಾಡಿಸಬೇಕು. ಹೊಸ ಶೌಚಾಲಯ ಬೇಕಿದ್ದರೆ ತಕ್ಷಣ ನಿರ್ಮಿಸಬೇಕು. ಇದಕ್ಕಾಗಿ ಶಿಕ್ಷಣ ಇಲಾಖೆಯಿಂದ ಎಸ್.ಡಿ.ಎಂ.ಸಿ ಮೂಲಕ ಹಣಕಾಸಿನ ಸೌಲಭ್ಯ ನೀಡಲಾಗುತ್ತಿದೆ. ಈ ಕುರಿತು ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದರು.

ಸರ್ಕಾರದ ಮತ್ತು ಚುನಾವಣೆ ಆಯೋಗದ ನಿರ್ದೇಶನದ ಪ್ರಕಾರ ಮತಕ್ಷೇತ್ರದ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳಿಗೆ ಚುನಾವಣೆ ವೀಕ್ಷಕರು ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ.

‘ವೀಕ್ಷಕರು ಬಂದಾಗ ಯಾವುದೇ ಸಮಸ್ಯೆ ಇರದಂತೆ ಗಮನ ಹರಿಸ ಬೇಕು. ದೈಹಿಕ ಅಂಗವಿಕಲರಿಗೆ, ವಯೋವೃದ್ಧರಿಗೆ ಅನುಕೂಲ ವಾಗುವಂತೆ ಪ್ರತಿ ಮತಗಟ್ಟೆಯಲ್ಲಿ ರ‍್ಯಾಂಪ್‌ ವ್ಯವಸ್ಥೆ ಇರಬೇಕು. ಮತಗಟ್ಟೆಗಳಿಗೆ ಸೌಲಭ್ಯ ಕಲ್ಪಿಸಲು ನೆಪ ಹೇಳುವ ಅಥವಾ ಪರಸ್ಪರ ಒಬ್ಬರ ಮೇಲೆ ಒಬ್ಬರು ಹಾಕುವ ಕೆಲಸ ಯಾರೂ ಮಾಡಬಾರದು’ ಎಂದು ಅವರು ತಾಕೀತು ಮಾಡಿದರು.

ಮತದಾನ ಖಾತರಿ ಕುರಿತು ಅಣುಕು ಮತದಾನ ಮಾಡಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿ ಮತಗಟ್ಟೆಯಲ್ಲಿ ಮನೆಗಳಿಗೆ ತೆರಳಿ ವಿವಿಪ್ಯಾಟ್ ಬಗ್ಗೆ ತಿಳಿಸಿ ಹೇಳಬೇಕು. ಹೆಚ್ಚು ಮತದಾನ ಆಗುವಂತೆ ಜಾಗೃತಿ ಮೂಡಿಸಬೇಕು. ಮತದಾನವು ಸುಸೂತ್ರವಾಗಿ ನಡೆಯುವಂತೆ ವ್ಯವಸ್ಥೆ ಮಾಡಿರಬೇಕು ಎಂದು ಅವರು ತಿಳಿಸಿದರು.

ಚುನಾವಣೆ ನೆಪದಲ್ಲಿ ಉದ್ಯೋಗ ಖಾತರಿ ಕೆಲಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಮೂನೆ-6 ರಲ್ಲಿ ಬಂದ ಅರ್ಜಿಗಳ ಪ್ರಕಾರ ಎನ್.ಎಂ.ಆರ್ ತೆಗೆದು ಕೂಲಿಕಾರರಿಗೆ ಕೆಲಸ ನೀಡಬೇಕು. ನಮಗೆ ಅರ್ಜಿ ಕೊಟ್ಟಿಲ್ಲ ಅವರಿಗೆ ಕೊಟ್ಟಿದ್ದಾರೆ ಎಂದು ಯಾರೂ ನೆಪ ಹೇಳಬೇಡಿ. ಚುನಾವಣೆ ಮುಗಿಯುವವರೆಗೆ ವೈಯಕ್ತಿಕ ಕೆಲಸದ ಕಾಮಗಾರಿಗೆ ಎನ್.ಎಂ.ಆರ್ ತೆಗೆಯಬೇಡಿ. ಸಾಮೂಹಿಕ ಕೆಲಸಗಳು ಮಾತ್ರ ಮಾಡಿಸಬೇಕು ಎಂದು ಅವರು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ, ತೊಂದರೆ ಆಗದಂತೆ ಗಮನ ಹರಿಸಬೇಕು. ಈ ಕುರಿತು ಜಿಲ್ಲಾ ಪಂಚಾಯಿತಿ ಅಧಿಕಾರಿ ಜತೆ ಸಂಪರ್ಕ ದಲ್ಲಿ ಇರುವಂತೆ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಹಣಕಾಸು ಯೋಜನೆಗಳ ಪ್ರಕಾರ ಪ್ರತಿ ಗ್ರಾಮ ಪಂಚಾಯಿತಿಗೆ ಬಂದ ಅನುದಾನ, ಖರ್ಚಾದ ಅನುದಾನದ ಕುರಿತು ಸೋಮವಾರದೊಳಗೆ ಜಿಲ್ಲಾ ಪಂಚಾಯಿತಿಗೆ ವರದಿ ತಲುಪಬೇಕು. ಯಾರೂ ನೆಪ ಹೇಳಬಾರದು. ಪಂಚಾಯಿತಿ ದಾಖಲೆ, ಬ್ಯಾಂಕ್ ಖಾತೆ ಪುಸ್ತಕದೊಂದಿಗೆ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕುಳಿತು ಎಲ್ಲಾ ಪಿಡಿಒ ಅವರು ಮಾಹಿತಿ ನೀಡಬೇಕು.

ಎಲ್ಲಾ ಪಿಡಿಒಗಳನ್ನು ಕರೆಯಿಸಿ ಮಾಹಿತಿ ಪಡೆಯುವುದು ಕಡ್ಡಾಯ. ಯಾವುದೇ ಮುಲಾಜು ತೋರಿಸಬೇಡಿ ಎಂದು ಅವರು ತಾಲ್ಲೂಕು ಪಂಚಾಯಿತಿ ಅಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ್ ಶೃಂಗೇರಿ, ಮಹ್ಮದ್ ಯುಸೂಫ್ ಅಲಿ ಇದ್ದರು. ಸಭೆಯಲ್ಲಿ ಸಿಡಿಪಿಒ ಶಿವಶರಣಪ್ಪ, ಸಮಾಜ ಕಲ್ಯಾಣಾಧಿಕಾರಿ ರಾಮಚಂದ್ರ ಗೋಳಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು ಇದ್ದರು.

**

ಮತದಾನ ಹಕ್ಕು ಎಂದು ಜನರಲ್ಲಿ ಅರಿವು ಮೂಡಿಸಿ. ಮತದಾನ ಖಾತರಿ ಬಗ್ಗೆ ವಿವಿಪ್ಯಾಟ್ ಯಂತ್ರ ಬಳಕೆಯ ಕುರಿತು ಮತದಾರರಿಗೆ ತಿಳಿಸಿ ಹೇಳಬೇಕು  – ಮಹ್ಮದ್ ಯುಸೂಫ್, ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ ಕಲಬುರ್ಗಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT