ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೊರೆ’ ಆಗಲು ಹೊರಟಿದ್ದ ಯುವಜೋಡಿ ಫ್ಲ್ಯಾಟ್‌ನಲ್ಲಿ ₹ 25 ಲಕ್ಷ ಮೌಲ್ಯದ ಡ್ರಗ್ಸ್

‘ದೊರೆ’ ಆಗಲು ಹೊರಟಿದ್ದ ಯುವಜೋಡಿ
Last Updated 3 ಡಿಸೆಂಬರ್ 2022, 19:49 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿದ್ದ ಕೇರಳದ ಆರೋಪಿಗಳಿಬ್ಬರ ಫ್ಲ್ಯಾಟ್‌ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ₹25 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

‘ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರುತ್ತಿದ್ದ ಆರೋಪದಡಿ ಎಸ್‌. ವಿಷ್ಣುಪ್ರಿಯಾ ಹಾಗೂ ಸ್ನೇಹಿತ ಸಿಗಿಲ್ ವರ್ಗೀಸ್ ಎಂಬುವವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಇವರಿಂದ 11.37 ಗ್ರಾಂ ತೂಕದ 23 ಎಂಡಿಎಂಎ ಮಾತ್ರೆಗಳು, 0.53 ಗ್ರಾಂ ತೂಕದ ಎಲ್‌ಎಸ್‌ಡಿ ಕಾಗದ ಚೂರುಗಳನ್ನು ಜಪ್ತಿ ಮಾಡಲಾಗಿತ್ತು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಆರೋಪಿಗಳನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದಾಗ, ಅವರಿಬ್ಬರು ಚಂದಾಪುರ ಬಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ವಾಸವಿದ್ದ ಮಾಹಿತಿ ಗೊತ್ತಾಗಿತ್ತು. ಫ್ಲ್ಯಾಟ್‌ ಮೇಲೆ ದಾಳಿ ಮಾಡಿದಾಗ, 100 ಗ್ರಾಂ ಎಂಡಿಎಂಎ, 150 ಎಲ್‌ಎಸ್‌ಡಿ ಕಾಗದ ಚೂರು, 25 ಎಕ್ಸ್‌ಟೆಸ್ಸಿ ಮಾತ್ರೆಗಳು, ಡೈರಿ ಹಾಗೂ ಕೊಲಂಬಿಯಾ ‘ಡ್ರಗ್ಸ್’ ಜಾಲದ ದೊರೆ ಪಾಬ್ಲೊ ಎಸ್ಕೊಬರ್ ಭಾವಚಿತ್ರ ಪತ್ತೆಯಾಗಿದೆ’ ಎಂದು ತಿಳಿಸಿದರು.

ದೊರೆ ಆಗಲು ಹೊರಟಿದ್ದ ಯುವಜೋಡಿ: ‘ಕೇರಳದ ವಿಷ್ಣುಪ್ರಿಯಾ ಹಾಗೂ ಸಿಗಿಲ್, ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಟ್ಯಾಟೊ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಅದರ ಜೊತೆಯಲ್ಲೇ ಅಕ್ರಮವಾಗಿ ಹಣ ಸಂಪಾದಿಸಲು ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದರು’ ಎಂದು ಪೊಲೀಸರು ಹೇಳಿದರು.

‘ಒಂದೇ ಫ್ಲ್ಯಾಟ್‌ನಲ್ಲಿ ವಾಸವಿದ್ದ ಆರೋಪಿಗಳು, ಸಹಜೀವನ ನಡೆಸುತ್ತಿದ್ದರು. ಕೊಲಂಬಿಯಾದ ಪಾಬ್ಲೊ ಎಸ್ಕೊಬರ್ ರೀತಿಯಲ್ಲೇ ಭಾರತದ ಡ್ರಗ್ಸ್ ಜಾಲದ ದೊರೆ ಆಗಬೇಕೆಂಬ ಗುರಿ ಇವರದ್ದಾಗಿತ್ತು. ಹೀಗಾಗಿ, ಆಫ್ರಿಕಾ ಪ್ರಜೆಗಳಿಂದ ಡ್ರಗ್ಸ್ ಖರೀದಿಸಿ ತಂದು ಫ್ಲ್ಯಾಟ್‌ನಲ್ಲಿ ಇಟ್ಟುಕೊಳ್ಳುತ್ತಿದ್ದರು. ಅದನ್ನೇ ಪರಿಚಯಸ್ಥ ಗ್ರಾಹಕರಿಗೆ ಮಾರುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಲೋಕೇಶನ್ ಕಳುಹಿಸಿ ಡ್ರಗ್ಸ್ ಪೂರೈಕೆ: ‘ವಿದ್ಯುತ್ ಕಂಬ, ಮರ, ಕಸದ ತೊಟ್ಟಿ ಹಾಗೂ ಇತರೆ ಜಾಗಗಳಲ್ಲಿ ಆರೋಪಿಗಳು ಡ್ರಗ್ಸ್ ಪೊಟ್ಟಣ ಮುಚ್ಚಿಡುತ್ತಿದ್ದರು. ಗ್ರಾಹಕರಿಗೆ ಜಾಗದ ಲೊಕೇಶನ್ ಕಳುಹಿಸುತ್ತಿದ್ದರು. ಅದೇ ಜಾಗಕ್ಕೆ ಹೋಗಿ ಗ್ರಾಹಕರು ಡ್ರಗ್ಸ್ ತೆಗೆದುಕೊಂಡು ಹೋಗುತ್ತಿದ್ದರು. ಆನ್‌ಲೈನ್‌ ಮೂಲಕವೇ ಹಣ ವರ್ಗಾವಣೆ ಮಾಡಲಾಗುತ್ತಿತ್ತು’ ಎಂದು ಪೊಲೀಸರು ತಿಳಿಸಿದರು.

13 ಕೆ.ಜಿ ಹಶೀಷ್ ಜಪ್ತಿ: ‘ಬಂಧಿತ ವಿಷ್ಣುಪ್ರಿಯಾ ಹಾಗೂ ಸಿಗಿಲ್‌ನನ್ನು ಹುಳಿಮಾವು ಪೊಲೀಸರು ಹಲವು ತಿಂಗಳ ಹಿಂದೆಯೇ ಬಂಧಿಸಿದ್ದರು. 13 ಕೆ.ಜಿ ಹಶೀಷ್ ಜಪ್ತಿ ಮಾಡಿದ್ದರು. ಜೈಲಿಗೆ ಹೋಗಿದ್ದ ಆರೋಪಿಗಳು, ಜಾಮೀನು ಮೇಲೆ ಹೊರಬಂದು ಪುನಃ ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT