ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭೀತಿಯಲ್ಲೂ ‘ಡ್ರಗ್ಸ್’ ನಶೆ!

ಮಾದಕ ವ್ಯಸನಿಗಳ ವಿರುದ್ಧ ಪೊಲೀಸರ ಸಮರ, ಡ್ರಗ್ಸ್ ಮಾರಾಟ–ಸೇವನೆ ಅಪರಾಧ
Last Updated 20 ಮಾರ್ಚ್ 2020, 23:00 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್ ಎಲ್ಲೆಡೆ ಹರಡುತ್ತಿದ್ದು, ಅದರಿಂದ ಪಾರಾಗುವುದು ಹೇಗೆ? ಎಂದು ಜನರೆಲ್ಲರೂ ಯೋಚಿಸುತ್ತಿದ್ದಾರೆ. ಇಂಥ ಭೀತಿ ನಡುವೆಯೇ ನಗರದ ಮಾದಕ ವಸ್ತು ವ್ಯಸನಿಗಳು ಮಾತ್ರ ‘ಡ್ರಗ್ಸ್‌’ ನಶೆಯಲ್ಲಿ ತೇಲಾಡುತ್ತಿದ್ದು, ಇಂಥವರ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ.

ಮಾದಕ ವಸ್ತು ಮಾರಾಟ, ಸಾಗಣೆ ಹಾಗೂ ಸೇವನೆ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ನಗರ ಕಮಿಷನರೇಟ್ ಪೊಲೀಸರು, ಈಗಾಗಲೇ ಹಲವರನ್ನು ಜೈಲಿಗಟ್ಟಿದ್ದಾರೆ. ಮಾದಕ ವಸ್ತು ಸೇವಿಸಿ ಸಿಕ್ಕಿಬೀಳುವ ವ್ಯಸನಿಗಳನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಿ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.ಇಂಥ ಪ್ರಕರಣಗಳ ಸಂಬಂಧ ನಗರದಲ್ಲಿ ನಿತ್ಯವೂ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.

ಹಗಲು ರಾತ್ರಿ ಎನ್ನದೇ ವ್ಯಸನಿಗಳು ಡ್ರಗ್ಸ್ ನಶೆ ಏರಿಸಿಕೊಂಡು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ದಾರಿಹೋಕರು ಹಾಗೂ ಒಬ್ಬಂಟಿ ವ್ಯಕ್ತಿಗಳ ಮೇಲೆ ದಾಳಿ ಮಾಡಿ ಸುಲಿಗೆಯನ್ನೂ ಮಾಡುತ್ತಿದ್ದಾರೆ.

ಇಂಥ ಪ್ರಕರಣಗಳಿಗೆ ಅಂತ್ಯಹಾಡಲೆಂದೇ ಪೊಲೀಸರು, ಮಾದಕ ವ್ಯಸನಿಗಳನ್ನೇ ಮೊದಲಿಗೆ ಬಂಧಿಸುತ್ತಿದ್ದಾರೆ. ‘ಮಾದಕವಸ್ತು ನಿಯಂತ್ರಣ ಕಾಯ್ದೆ–1985 (ಎನ್‌ಡಿಪಿಎಸ್)’ ಅಡಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸುತ್ತಿದ್ದಾರೆ.

ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿ ಎಂ. ಮೋಹನ್ ಹಾಗೂ ಕಾರ್ಮಿಕ ಆರ್‌.ಸಂಜಯ್, ಬಾಗಲಕುಂಟೆ ಠಾಣೆ ವ್ಯಾಪ್ತಿಯಲ್ಲಿ ಇಮ್ರಾನ್ ಹಾಗೂ ಸತೀಶ್, ಬಾಣಸವಾಡಿ ಠಾಣೆ ವ್ಯಾಪ್ತಿಯಲ್ಲಿ ಸಕೀದ್ ಹಾಗೂ ಮೊಹಮ್ಮದ್ ಅಜರುದ್ದೀನ್, ಬೇಗೂರಿನಲ್ಲಿ ಜಗನ್, ಬೆಳ್ಳಂದೂರಿನಲ್ಲಿ ಗಿರೀಶ್, ಕಾಟನ್‌ಪೇಟೆಯಲ್ಲಿ ಕಾರ್ಮಿಕರಾದ ಶಾಂತಕುಮಾರ್, ರಘು, ಪ್ರಕಾಶ್, ವರುಣ್, ಹೀಗೆ... ಹಲವು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

‘ಸುಲಿಗೆ, ಕೊಲೆಗೆ ಯತ್ನ ಸೇರಿ ಹಲವು ಪ್ರಕರಣಗಳ ಬಹುತೇಕ ಆರೋಪಿಗಳು, ಡ್ರಗ್ಸ್ ಸೇವಿಸಿಯೇ ಕೃತ್ಯ ಎಸಗುತ್ತಿದ್ದಾರೆ. ಡ್ರಗ್ಸ್ ಸೇವಿಸುವವ
ರನ್ನೇ ಪತ್ತೆ ಮಾಡಿ ಎನ್‌ಡಿಪಿಎಸ್ ಸೆಕ್ಷನ್ 27(ಬಿ) ಅಡಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಎಲ್ಲೆಡೆ ಕೊರೊನಾ ಭೀತಿಯಿದೆ. ಇದರ ಮಧ್ಯೆಯೇ ಫೆಬ್ರುವರಿ 1ರಿಂದ ಮಾರ್ಚ್‌ 20ರವರೆಗೆ 50ಕ್ಕೂ ಹೆಚ್ಚು ಮಾದಕ ವ್ಯಸನಿಗಳನ್ನು ಬಂಧಿಸಿದ್ದೇವೆ. ಅತ್ತ ಜನ ಪ್ರಾಣ ಉಳಿಸಿಕೊಳ್ಳಲು ಪರಿತಪಿಸುತ್ತಿದ್ದರೆ, ವ್ಯಸನಿಗಳು ಮಾತ್ರ ನಶೆಯಲ್ಲಿ ತೇಲುತ್ತಿದ್ದರು’ ಎಂದು ಅವರು ತಿಳಿಸಿದರು.

ವೈದ್ಯಕೀಯ ಪರೀಕ್ಷೆಯೇ ಪುರಾವೆ

‘ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗುವ ಸಿಬ್ಬಂದಿಯೇ ಮಾದಕ ವ್ಯಸನಿ ಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಅದರ ವರದಿಯನ್ನೇ ಪುರಾವೆಯನ್ನಾಗಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು.

‘ಗುಮಾನಿ ಇದ್ದರೂ ಪ್ರಕರಣ ದಾಖಲು’

‘ಯುವಜನರ ದಾರಿ ತಪ್ಪಿಸುವ ಹಾಗೂ ಅವರ ಆರೋಗ್ಯಕ್ಕೆ ಮಾರಕವಾದ ಮಾದಕ ವಸ್ತು ನಿಯಂತ್ರಣಕ್ಕೆ ‘ಮಾದಕವಸ್ತು ನಿಯಂತ್ರಣ ಕಾಯ್ದೆ–1985 (ಎನ್‌ಡಿಪಿಎಸ್)’ ಜಾರಿಗೆ ತರಲಾಗಿದೆ. ಡ್ರಗ್ಸ್ ಬಗ್ಗೆ ಗುಮಾನಿ ಇದ್ದರೂ ಕಲಂ 67ರ ಪ್ರಕಾರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶವಿದೆ’ ಎಂದು ಕಾನೂನು ತಜ್ಞರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT